ಬೆಂಗಳೂರು ಗ್ರಾಮಾಂತರ

ಹೆಚ್ಚುತ್ತಿರುವ ಭ್ರಷ್ಟಾಚಾರ ದೇಶಕ್ಕೆ ಮಾರಕ

Published On :

ಕ.ಪ್ರ.ವಾರ್ತೆ    ದೊಡ್ಡಬಳ್ಳಾಪುರ    ಜ.26
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ದೇಶದ ಸಮಗ್ರ ವ್ಯವಸ್ಥೆಗೆ ಸವಾಲಾಗಿದೆ. ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕಕಾರಿ ಎಂದು ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ಹೇಳಿದರು.
ಇಲ್ಲಿನ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಮತ್ತು ಉಪವಿಭಾಗ ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಗೌರವ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನಬದ್ಧವಾಗಿ ಈ ದೇಶದ ಅಖಂಡತೆ ಮತ್ತು ಏಕತೆಯನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆ. ಜಾತಿ, ಮತ, ಧರ್ಮ ಮತ್ತು ಬಣ್ಣಗಳ ತಾರತಮ್ಯ ನಿವಾರಿಸಿ ನಾವೆಲ್ಲರೂ ಒಂದೇ ಎನ್ನುವ ಭಾರತೀಯ ಪ್ರಜ್ಞೆ ನಮ್ಮಲ್ಲಿ ಬರಬೇಕಿದೆ. ಮೇಲು-ಕೀಳು ಎಂಬ ಭಾವನೆಗಳು ಅಳಿಯಬೇಕು. ಪರಸ್ಪರ ಮನುಷ್ಯತ್ವದ ಭಾವನೆಗಳಿಂದ ಭಾರತೀಯತೆಯನ್ನು ಬೆಸೆಯುವ ಮತ್ತು ಸಮಾಜ ಕಂಟಕ ಶಕ್ತಿಗಳನ್ನು ನಿಗ್ರಹಿಸುವ ಅನಿವಾರ್ಯತೆ ನಮ್ಮ ಮುಂದಿದೆ.ಮಂಗಳನ ಕಕ್ಷೆಗೆ ಲಗ್ಗೆ ಇಡುವ ಯಶಸ್ವಿ ಸಾಹಸದಲ್ಲಿ ದೇಶದ ವಿಜ್ಞಾನಿಗಳ ಕೊಡುಗೆ ಅಪಾರ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಅನೇಕ ಯೋಜನೆಗಳನ್ನು ತರಲಾಗಿದೆ. ಅಭಿವೃದ್ಧಿ ಹಿತಾಸಕ್ತಿಯಲ್ಲಿ ಉತ್ತಮ ಅವಕಾಶಗಳಿವೆ. ತಾಲೂಕಿನ ಜನರ ಬಹುದಿನದ ಬೇಡಿಕೆಯಾಗಿದ್ದ ಉಪವಿಭಾಗಾಧಿಕಾರಿಗಳ ಕಚೇರಿ ದೊಡ್ಡಬಳ್ಳಾಪುರದಲ್ಲಿ ಕಾರ್ಯಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರುವುದು ಈ ಬಾರಿಯ ಗಣರಾಜ್ಯೋತ್ಸವ ಸಂಭ್ರಮವನ್ನು ಹೆಚ್ಚಿಸಿದೆ ಎಂದರು.
ಆಕರ್ಷಕ ಪೆರೇಡ್: ಇದೇ ಸಂದರ್ಭದಲ್ಲಿ ಪೊಲೀಸ್ದಳ, ಎನ್ಸಿಸಿ, ಭಾರತ ಸೇವಾದಳ, ವಿವಿಧ ಕಾಲೇಜು ಮತ್ತು ಶಾಲೆಗಳ ಪಥಸಂಚಲನಾ ದಳಗಳನ್ನು ಒಳಗೊಂಡ ಸುಮಾರು 2ಸಾವಿರಕ್ಕೂ ಅಧಿಕ ಮಂದಿಯ ಆಕರ್ಷಕ ಪೆರೇಡ್ ನಡೆಯಿತು. ಉಪವಿಭಾಗಾಧಿಕಾರಿಗಳು ಧ್ವಜಾರೋಹಣ ನಂತರ ಪೆರೇಡ್ ವೀಕ್ಷಿಸಿ, ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
 ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್.ಹನುಮಂತೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಕೆ.ಮುನಿಯಪ್ಪ, ಡಿವೈಎಸ್ಪಿ ಶ್ರೀಧರ್, ತಹಶೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥರೆಡ್ಡಿ, ನಗರಸಭೆ ಆಯುಕ್ತ ಬಿಳಿಕೆಂಚಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು. ಬಿ.ಜಿ.ಅಮರನಾಥ್, ತಜಮುಲ್ ಪಾಷಾ ಇತರರು ಪೆರೇಡ್ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.