ಬೆಂಗಳೂರು ಗ್ರಾಮಾಂತರ

ರಾಜ್ಯದ ಪ್ರತಿ ಗ್ರಾಮಕ್ಕೂ ಶುದ್ಧ ನೀರು ಯೋಜನೆ

Published On :

ನೆಲಮಂಗಲ: ಪಟ್ಟಣಕ್ಕೆ ಹೋದ ಹಳ್ಳಿ ಜನತೆ ಮತ್ತೆ ಹಳ್ಳಿಗೆ ಮರಳಿ ಬರುವಂತೆ ಮಾಡುವ ಗುರಿ ನಮ್ಮದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್  ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘ-2014ನೇ ಸಾಲಿನ ದಿನಚರಿ ಬಿಡುಗಡೆ ಹಾಗೂ ವಿಚಾರ ಸಂಕಿರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿರುವ ರಸ್ತೆ, ನೀರು, ನೈರ್ಮಲ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದಾಗ ಮಾತ್ರ ಹಳ್ಳಿಯು ನಗರಕ್ಕೆ ಸಮಾನವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ರಾಜ್ಯದ ಪ್ರತಿ ಗ್ರಾಮದವರು ಶುದ್ಧ ನೀರು ಕುಡಿಯಲು ಬಹುದೊಡ್ಡ ಯೋಜನೆ ಕಾರ್ಯರೂಪಕ್ಕೆ ತರುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ  ಒತ್ತು ನೀಡುತ್ತಿದೆ. ಗ್ರಾಮ ಪಂಚಾಯ್ತಿ ಗ್ರಾಮದ ಜನತೆಗೆ ಅತ್ಯವಶ್ಯಕ ಕಾಮಗಾರಿಗಳನ್ನು ನಿರ್ವಹಿಸುವ ಮೂಲಕ ಜನತೆಯ ಬೆಂಬಲ ಪಡೆಯಬೇಕು. ಗುತ್ತಿಗೆದಾರರಿಗೆ ಹಾಗೂ ಉಳ್ಳವರಿಗೆ ಮಾತ್ರ ಅಧಿಕಾರಿಗಳು  ಮಾನ್ಯತೆ ನೀಡದೆ ಶ್ರೀಸಾಮಾನ್ಯನ ಮನವಿಗೆ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.
ಜಯಲು ಮುಕ್ತ ಶೌಚಾಲಯ: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಬಡ್ತಿ ಹಾಗೂ ಸೌಕರ್ಯಗಳನ್ನು ಮುಂದಿನ ಆರು ತಿಂಗಳೊಳಗಾಗಿ ಈಡೇರಿಸಲಾಗುತ್ತದೆ. ಕರ್ನಾಟಕವನ್ನು  2018ರೊಳಗೆ ಬಯಲು ಮುಕ್ತ ಶೌಚಾಲಯವಾಗಿ ಮಾಡುತ್ತೇವೆ ಎಂದರು.
ರಾಜ್ಯದ ಹೆಬ್ಬಾಗಿಲಿನಂತಿರುವ ತಾಲೂಕಿಗೆ ಕುಡಿಯುವ ನೀರು ಅಭಾವದಿಂದಾಗಿ ಫ್ಲೋರೈಡ್‌ಯುಕ್ತ ನೀರನ್ನು ಸೇವಿಸುತ್ತಿದ್ದು, ಶೀಘ್ರ ಸಚಿವರು ಸ್ವಚ್ಛ ಕುಡಿಯುವ ನೀರು ಒದಗಿಸಬೇಕು ಹಾಗೂ ಜಿಲ್ಲಾ ಹಾಗೂ ತಾಲೂಕು ರಸ್ತೆಗಳು ಹಾಳಾಗಿದ್ದು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆಗೊಳಿಸಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ದಿನಚರಿ ಬಿಡುಗಡೆಗೊಳಿಸಿ  ಮಾತನಾಡಿದರು.
ಪಂಚಾಯ್ತಿ ಅಧಿಕಾರಿ ಹಾಗೂ ಸಿಬ್ಬಂದಿ ಗ್ರಾಮಗಳ ಅಭಿವೃದ್ಧಿಗೆ ಚಿಂತನೆ ಮಾಡಿದಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ  ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್  ಇಲಾಖೆಯ  ನಿರ್ದೇಶಕ ಕೆ. ಯಾಲಕ್ಕಿಗೌಡ,  ರಾಜ್ಯಾಧ್ಯಕ್ಷ ಆರ್.ಎಸ್. ಪರಶಿವಮೂರ್ತಿ, ತಾ.ಪಂ.ಅಧ್ಯಕ್ಷೆ ಸಿ.ವಿ. ಸರಸ್ವತಿ, ಜಿ.ಪಂ. ಸದಸ್ಯರಾದ  ಎಂ.ಎನ್. ರಾಂ, ಸುನಂದ ಶಿವಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೆಟ್ಟಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ರೇವಣಪ್ಪ, ಯೋಜನಾ ನಿರ್ದೇಶಕ ಎಲ್.ಸಿ. ವೀರೇಶ್, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕೆ.ಸಿ.ನಾರಾಯಣಸ್ವಾಮಿ, ಕೃಷ್ಣಪ್ಪ ಲೋಹರ್, ಎಚ್.ಎಂ.ದ್ಯಾವಪ್ಪ, ಅಶ್ವತ್ಥರೆಡ್ಡಿ, ತಾಲೂಕು ಅಧ್ಯಕ್ಷ ಡಿ.ಎಂ. ಪದ್ಮನಾಭ, ಕಾರ್ಯದರ್ಶಿ ಡಿ.ಜೈಪಾಲ್, ಖಜಾಂಚಿ ಶ್ರುತಿಗೌಡ, ಮೋಹನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.