ಬಿಲ್ಡರ್ ಅಪಹರಿಸಿದ್ದ ದರೋಡೆಕೋರರ ಬಂಧನ
ಬೆಂಗಳೂರು: ಹಣಕ್ಕಾಗಿ ಬಿಲ್ಡರ್ ಅಪಹರಿಸಿ ಚಿತ್ರಹಿಂಸೆ ನೀಡಿದ್ದ ಐವರು ದರೋಡೆಕೋರರನ್ನು ಬಂಧಿಸಿರುವ ಕುಮಾರಸ್ವಾಮಿ ಬಡಾವಣೆ ಪೊಲೀಸರು 5 ಲಕ್ಷ ಮೌಲ್ಯದ ಒಂದು ಎಸ್ಟೀಮ್ ಕಾರು, ಒಂದು ಚಿನ್ನದ ಸರ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಪಿಳ್ಳಗನಹಳ್ಳಿ ರಾಘವೇಂದ್ರ ಬಡಾವಣೆ ನಿವಾಸಿ ಶ್ರೀನಿವಾಸ್(27), ಮಹಾಲಕ್ಷ್ಮೀ ಬಡಾವಣೆಯ ಮುರುಗ(27), ಆರ್.ಎಂ.ಸಿ ಯಾರ್ಡ್ ಕೃಷ್ಣ ನಗರದ ದೊರೆ(20), ಹೊಸ ರಸ್ತೆ ಪರಪ್ಪನ ಅಗ್ರಹಾರ ನಿವಾಸಿ ಹರೀಶ್(20) ಹಾಗೂ ಸತೀಶ್(20) ಬಂಧಿತರು.
ಆರೋಪಿಗಳಾದ ಶ್ರೀನಿವಾಸ್ ಹಾಗೂ ಮುರುಗ ವಿರುದ್ಧ ತಲಾ ಒಂದು ಕೊಲೆ ಯತ್ನ, ಒಂದು ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿವರ: ಕುಮಾರಸ್ವಾಮಿ ಬಡಾವಣೆ ಪ್ರಶಾಂತಿನಗರ ನಿವಾಸಿ ವಿನೋದ್ ಅವರು ಜೂ.23ರಂದು ತಮ್ಮ ಇನ್ನೋವಾ ಕಾರಿನಲ್ಲಿ ಚೆನ್ನೈಗೆ ಹೊರಡಲಿದ್ದ ಅಕ್ಕ ಹಾಗೂ ಭಾವನನ್ನು ನಗರ ರೇಲ್ವೆ ನಿಲ್ದಾಣಕ್ಕೆ ಡ್ರಾಪ್ ಮಾಡಿ ಕಾರು ಚಾಲಕ ರಾಜಣ್ಣನ ಜತೆ ಮನೆಗೆ ಮರಳುತ್ತಿದ್ದರು. ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಲು ಕಾರು ನಿಲ್ಲಿಸಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ವಿನೋದ್ ಹಾಗೂ ರಾಜಣ್ಣ ಅವರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ವಿನೋದ್ ಬಳಿ ಕೇವಲ 3 ಸಾವಿರ ಇದ್ದ ಹಿನ್ನೆಲೆಯಲ್ಲಿ ಅವರ ಕಾರಿನಲ್ಲೇ ಅಪಹರಿಸಿಕೊಂಡು ವಿವಿಧ ಪ್ರದೇಶಗಳಲ್ಲಿ ಸುತ್ತಾಡಿಸಿ ಕನಕಪುರ ರಸ್ತೆ ತೊಟ್ಟಿಕಲ್ಲು ಜಲಪಾತ ಬಳಿ ಕರೆದೊಯ್ದಿದ್ದರು. ದೈಹಿಕವಾಗಿ ಹಿಂಸಿಸಿದ ಆರೋಪಿಗಳು 15 ಲಕ್ಷ ನೀಡುವಂತೆ ಪೀಡಿಸಿದ್ದರು.
ಬೆಳಗ್ಗೆ 3.40ರ ಸುಮಾರಿಗೆ ಪ್ರಶಾಂತಿನಗರದ ವಿನೋದ್ ಮನೆಗೆ ಕರೆದೊಯ್ದು ಹಣ ನೀಡುವಂತೆ ಹೇಳಿದ್ದಾರೆ. ಈ ವೇಳೆ ವಿನೋದ್ ತಾಯಿ ಜೋರಾಗಿ ಕಿರುಚಿಕೊಳ್ಳಲು ಆರಂಭಿಸಿದಾಗ ಆರೋಪಿಗಳು ಸರ ಕಿತ್ತುಕೊಂಡು ವಿನೋದ್ ಅವರ ಬೆನ್ನು ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಅವರ ಕಾರಿನಲ್ಲೇ ಚಾಲಕ ರಾಜಣ್ಣನೊಂದಿಗೆ ತಲಘಟ್ಟಪುರ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕುಮಾರಸ್ವಾಮಿ ಬಡಾವಣೆ ಪೊಲೀಸರು ದೇವರಕೆರೆ ಎಂಬಲ್ಲಿ ಐವರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

