ಬೆಂಗಳೂರು ಗ್ರಾಮಾಂತರ

ಅಕ್ರಮ ಕೊಳಾಯಿ ಸಂಪರ್ಕ ಕಡಿತಗೊಳಿಸಿ

Published On :

ರಾಮನಗರ: ಫಿಲೇಚರ್, ವಾಣಿಜ್ಯ ಬಳಕೆ ಸಹಿತ ಅಕ್ರಮ ನಲ್ಲಿ ಸಂಪರ್ಕಗಳಿಗೆ ನೀರು ಸರಬರಾಜನ್ನು ತಕ್ಷಣ ಕಡಿತಗೊಳಿಸಿ ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಶಾಸಕ ಎಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.  
 ನಗರದ ತಾ.ಪಂ. ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನಧಿಕೃತ ಸಂಪರ್ಕಗಳ ಪರಿಣಾಮ ನಗರದಲ್ಲಿ ನೀರಿಗೆ ಕೃತಕ ಅಭಾವ ತಲೆದೋರಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದರು.
ಫಿಲೇಚರ್, ವಾಣಿಜ್ಯ ಕಟ್ಟಡಗಳು ಮತ್ತು ಕಾರ್ಖಾನೆಗಳಿಗೆ ಸರಬರಾಜಾಗುತ್ತಿರುವ ನೀರಿನ ಸಂಪರ್ಕ ಕಡಿತದ ಕಾರ್ಯಾಚರಣೆಗೆ ಅಗತ್ಯ ಬಿದ್ದರೆ ಪೊಲೀಸ್ ರಕ್ಷಣೆ ಪಡೆದುಕೊಳ್ಳುವಂತೆ ನಗರಸಭೆ, ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಅವರು ಸೂಚನೆ ನೀಡಿದರು.  ಬದುಕುವುದಾದರೂ ಹೇಗೆ: ಜಿಲ್ಲಾ ಕೇಂದ್ರವಾದ ರಾಮನಗರ ವ್ಯಾಪ್ತಿಯಲ್ಲಿ ಆರೇಳು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಿದರೆ ಜನ ಬದುಕುವುದಾದರೂ ಹೇಗೆ ಎನ್ನುವ ಸಾಮಾನ್ಯ ಪರಿಜ್ಞಾನವೇ ಇಲ್ಲದೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇಲ್ಲಿ ತಲೆದೋರಿರುವುದು ಕೃತಕ ಅಭಾವವೇ ಹೊರತು ಬೇರೇನಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.  
ಚನ್ನಪಟ್ಟಣ ಹಾಗೂ ರಾಮನಗರಕ್ಕೆ ಒಂದೇ ಪೈಪ್ಲೈನ್ ಮೂಲಕ ನೀರು ಸಬರಾಜಾಗುತ್ತಿದೆ. ಚನ್ನಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ರಾಮನಗರದಲ್ಲಿ ಮಾತ್ರ ಏಕೆ ಸಮಸ್ಯೆ ಉಂಟಾಗಿದೆ ಎನ್ನುವುದಕ್ಕೆ ಅಧಿಕಾರಿಗಳು ಇಲ್ಲಿವರೆಗೆ ಕಾರಣ ಕಂಡು ಹಿಡಿದಿಲ್ಲವೇಕೆ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿದ್ಯುತ್ ಸಮಸ್ಯೆ ನೆಪ: ರಾಮನಗರ್ಕೆಕ ಪ್ರತಿ ನಿತ್ಯ 7 ಎಂ.ಎಲ್.ಡಿ. ನೀರು ಸರಬರಾಜಾಗುತ್ತಿದೆ. ವಿದ್ಯುತ್ ವ್ಯತ್ಯಯ ಹಾಗೂ ಇನ್ನಿತರೆ ಕಾರಣಗಳಿಂದ ಒಂದು ಎಂಎಲ್ಡಿ ನೀರು ಪೋಲಾಗುತ್ತಿದೆ. ಉಳಿದ 6 ಎಂಎಲ್ಡಿ ನೀರನ್ನು ಎಲ್ಲಾ ವಾರ್ಡ್ಗಳಿಗೂ ಐದಾರು ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿ ಪಾಷಾ ಸಭೆಯ ಗಮನಕ್ಕೆ ತಂದರು.
ಜಲಮಂಡಳಿ ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಾಸ್ತವದಲ್ಲಿ ನಗರದಲ್ಲಿ 8 ರಿಂದ 15 ದಿನಗಳಿಗೊಮ್ಮೆಯಷ್ಟೇ ನೀರು ಪೂರೈಸಲಾಗುತ್ತಿದೆ. ಜಲಮಂಡಳಿ ಅಧಿಕಾರಿಗಳ ಅಸಮರ್ಪಕ ನಿರ್ವಹಣೆ ಹಾಗೂ ಅಕ್ರಮ ಸಂಪರ್ಕಗಳನ್ನು ರದ್ದುಪಡಿಸದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ನಗರಸಭೆ ಆಯುಕ್ತ ಯಶವಂತ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.   
ಯೋಜನೆ ಸಿದ್ಧಪಡಿಸಿ: ರಾಮನಗರ ಮತ್ತು ಸುತ್ತಮುತ್ತ ಹಳ್ಳಿಗಳಿಗೆ ಮಳವಳ್ಳಿ ತಾಲೂಕಿನ ನೆಟ್ಕಲ್ ಜಲ ಸಂಗ್ರಹಾಲಯದಿಂದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ನೀಲನಕ್ಷೆ ಹಾಗೂ ಅಂದಾಜು ವೆಚ್ಚದ ಬಗ್ಗೆ ವರದಿ ಸಲ್ಲಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಬಾನಂದೂರು ಸಮಗ್ರ ಅಭಿವೃದ್ಧಿ: ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು ಬಾನಂದೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲಿ ಸ್ವಾಮೀಜಿ ಪ್ರತಿಮೆ, ಬಡವರಿಗೆ ಮನೆ, ಪರಿಶಿಷ್ಟರಿಗೆ ಪ್ರತ್ಯೇಕ ಸ್ಮಶಾನ, ರಸ್ತೆ ಅಗಲೀಕರಣ, ವಿದ್ಯುತ್ ಕಂಬಗಳ ಸ್ಥಳಾಂತರ ಮತ್ತಿತರೆ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದರು.   ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಜಿಲ್ಲಾಧಿಕಾರಿ ಜಮಾದಾರ್, ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಭಾಗವಹಿಸಿದ್ದರು.  
 ಹಗಲಲ್ಲಿ ವಿದ್ಯುತ್ ನೀಡಿ: ಕೃಷಿ ಪಂಪ್ಸೆಟ್ಗಳಿಗೆ ರಾತ್ರಿ ವೇಳೆ ತ್ರೀಫೇಸ್ ವಿದ್ಯುತ್ ನೀಡುತ್ತಿರುವ ಪರಿಣಾಮ ರೈತರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಅದರ ಬದಲು ಹಗಲಲ್ಲೇ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಬೇಕು.  ಟ್ರಾನ್ಸ್ಫಾರ್ಮರ್ ದುರಸ್ತಿಯನ್ನು 3 ದಿನದೊಳಗೆ ಮಾಡುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಕುಮಾರಸ್ವಾಮಿ ಹೇಳಿದರು. ಕಚೇರಿಯಿಂದ ಹೊರ ಬನ್ನಿ : ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸುವುದನ್ನು ಬಿಟ್ಟು ಕ್ಷೇತ್ರ ಪ್ರವಾಸ ಕೈಗೊಳ್ಳಬೇಕು. ರೈತರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿ ಒದಗಿಸಬೇಕು. ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಅಭಾವ ಎದುರಾಗದಂತೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು. ಸಭೆಯಲ್ಲಿ ತಾ.ಪಂ. ಹಂಗಾಮಿ ಅಧ್ಯಕ್ಷ ವೆಂಕಟರಂಗಯ್ಯ, ಜಿ.ಪಂ. ಸದಸ್ಯರಾದ ಎಚ್.ಎಲ್.ಚಂದ್ರ, ಎಚ್.ಸಿ.ರಾಜು, ತಹಸೀಲ್ದಾರ್ ಮಂಜಪ್ಪ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಟಿ.ಎಚ್. ವೆಂಕಟೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯನರಸಿಂಹ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.