ಹರ್ಬಲ್ ಉತ್ಪನ್ನ ವೈದ್ಯಕೀಯ ಕಾರಣಕ್ಕೆ ಬಳಸಲ್ಲ: ಸ್ಪಷ್ಟನೆ
ಬೆಂಗಳೂರು: ಹರ್ಬಲ್ ಲೈಫ್ ಎನ್ನುವುದು ಜಾಗತಿಕ ಪೌಷ್ಟಿಕ ಆಹಾರ ತಯಾರಕ ಸಂಸ್ಥೆ. ಸಂಸ್ಥೆಯ ಯಾವುದೇ ಉತ್ಪನ್ನವನ್ನು ವೈದ್ಯಕೀಯ ಕಾರಣಗಳಿಗೆ ಬಳಸುವುದಿಲ್ಲ ಎಂದು ಹರ್ಬಲ್ ಲೈಫ್ ಸ್ಪಷ್ಟನೆ ನೀಡಿದೆ. ಪೌಷ್ಟಿಕ ಆಹಾರ, ಪಾನೀಯ ಹಾಗೂ ಕಾಸ್ಮೆಟಿಕ್ಸ್ಗಳನ್ನು ಸಂಸ್ಥೆ ಮಾರಾಟ ಮಾಡುತ್ತದೆ. ಈ ಉತ್ಪನ್ನಗಳು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯಿದೆ ವ್ಯಾಪ್ತಿಗೆ ಬರುತ್ತದೆ. ಸಂಸ್ಥೆ ಕೂಡಾ ತನ್ನ ಉತ್ಪನ್ನವನ್ನು ಆಹಾರ ಎಂದು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಯಾವೊಬ್ಬ ವ್ಯಕ್ತಿಯೂ ವೈದ್ಯಕೀಯ ಕಾರಣ ಹೇಳಿಕೊಂಡು ಉತ್ಪನ್ನ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹರ್ಬಲ್ ಲೈಫ್ ಸಂಸ್ಥೆ ಹೇಳಿದೆ.
ಕ್ಯಾಬ್ ಚಾಲಕರಿಗೆ 8.65 ಲಕ್ಷ ದಂಡ
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ಕ್ಯಾಬ್ ಮತ್ತು ಟ್ಯಾಕ್ಸಿ ವಾಹನಗಳ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಎರಡೇ ದಿನಗಳಲ್ಲಿ 8.65 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಜುಲೈ 7 ಹಾಗೂ 8ರಂದು ಹಮ್ಮಿಕೊಂಡಿದ್ದ ಕಾರ್ಯಾಚರಣೆಯಲ್ಲಿ 8,200 ಪ್ರಕರಣ ದಾಖಲಿಸಲಾಗಿದ್ದು ಈ ಪೈಕಿ 26 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸೀಟ್ ಬೆಲ್ಟ್ ಧರಿಸದಿರುವುದು, ಸಿಗ್ನಲ್ ಜಂಪ್, ಪಾರ್ಕಿಂಗ್ ನಿಯಮ ಉಲ್ಲಂಘನೆ, ಮೊಬೈಲ್ ಫೋನ್ ಬಳಕೆ ಹಾಗೂ ಇತರ ಉಲ್ಲಂಘನೆಗಳು ಸೇರಿವೆ.
ಸಾಹಸ ಕಲಾ ಪ್ರದರ್ಶನ
ರಾಮನಗರ: ಮಹಾರಾಷ್ಟ್ರದ ಸೊಲ್ಲಾಪುರದ ಬಾಷಾ ಮತ್ತು ತಂಡದವರು ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸಾಹಸ ಕಲಾ ಪ್ರದರ್ಶನ ನಡೆಸಿದರು. ಮೇಲೆ ಎಸೆದ ತೆಂಗಿನಕಾಯಿಯನ್ನು ತಲೆಯಿಂದ ಹೊಡೆಯುವುದು, ಬೆನ್ನಿನ ಮೇಲೆ ವಾಹನ ಚಾಲನೆ, ತಲೆ ಕೂದಲಿನಿಂದ ಟೆಂಪೋ ಟ್ರಾವೆಲರ್ ಎಳೆಯುವುದು ಹಾಗೂ ಎರಡು ಸೈಕಲ್ಗಳನ್ನು ತಲೆಯ ಎರಡೂ ಬದಿಯ ಕೂದಲಿನಲ್ಲಿ ಕಟ್ಟಿ ಸುತ್ತುವುದು, 25 ಕೆ.ಜಿ ತೂಕದ ಕಲ್ಲನ್ನು ಹಲ್ಲಿನಿಂದ ಎತ್ತಿ ತಲೆಯ ಹಿಂಭಾಗಕ್ಕೆ ಎಸೆಯುವುದು. ಬರಿಗೈಯಿಂದಲೇ ಕಲ್ಲನ್ನು ಪುಡಿಪುಡಿ ಮಾಡಿದ ಸಾಹಸಮಯ ದೃಶ್ಯ ನೋಡುಗರನ್ನು ನಿಬ್ಬೆರಗಾಗಿಸಿತು. ಜಿಲ್ಲಾಧಿಕಾರಿ ಎಫ್.ಆರ್.ಜಮಾಧಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ತಹಸೀಲ್ದಾರ್ ಮಂಜಪ್ಪ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಿ. ನವಜ್ಯೋತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಪ್ರದರ್ಶನವನ್ನು ವೀಕ್ಷಿಸಿದರು.
ಶ್ರೀರಂಗನಾಥ ಸ್ವಾಮಿ ಚಿಕ್ಕರಥೋತ್ಸವ
ಮಾಗಡಿ: ಪ್ರಥಮ ಏಕಾದಶಿ, ದ್ವಾದಶಿ ಪ್ರಯುಕ್ತ ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ಚಿಕ್ಕರಥೋತ್ಸವ ಬುಧವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು. ಸಹಸ್ರಾರು ಭಕ್ತರು ಭಾಗವಹಿಸಿ, ಶ್ರದ್ಧಾಭಕ್ತಿಯಿಂದ ರಥಕ್ಕೆ ಪೂಜೆ ಸಲ್ಲಿಸಿ ಗೋವೀಂದ ನಾಮಸ್ಮರಣೆಯಿಂದ ರಥವನ್ನು ರಥ ಬೀದಿಯ ಸುತ್ತಲು ಎಳೆದು ಭಕ್ತಿ ಭಾವ ಮೆರೆದರು. ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಬಹುತೇಕ ಭಕ್ತರು ತಾವು ತಂದಿದ್ದ ಹಲಸು, ಬಾಳೆಹಣ್ಣು, ಕಲ್ಲುಸಕ್ಕರೆ, ಕಜ್ಜಾಯ ಮಿಶ್ರಿತ ರಸಾಯನವನ್ನು ಇಲ್ಲಿನ ಗರುಡ ಕಂಬದ ಬಳಿ ಮಣೇವು ಹಾಕಿಸಿದರು. ನಂತರ ರಸಾಯನವನ್ನು ಅಲ್ಲಿದ್ದ ಭಕ್ತರಿಗೆ ವಿತರಿಸಿದರು. ದ್ವಾದಶಿ ಪ್ರಯುಕ್ತ ಶ್ರೀರಂಗನಾಥಸ್ವಾಮಿಗೆ ವಿಶೇಷ ಹೂವಿನ ಹಾಗೂ ಅಭರಣದ ಅಲಂಕಾರ ಏರ್ಪಡಿಸಲಾಗಿತ್ತು. ವಿವಿಧ ಉತ್ಸವಗಳು ಸಂಜೆಯವರೆಗೂ ನೆರವೇರುತ್ತಿದ್ದವು. ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಭಕ್ತಸಾಗರ ಹರಿದು ಬರುತ್ತಿದ್ದವು. ಪ್ರಸಾದ ವಿನಿಯೋಗ ನಡೆದಿತ್ತು.
ಬಾರ್ ಡ್ಯಾನ್ಸ್ ನಿಷೇಧ
ಬೆಂಗಳೂರು: ಕರ್ನಾಟಕ ಅಬಕಾರಿ (ಸಾಮಾನ್ಯ ನಿಬಂಧನೆಗಳು) ನಿಯಮ 11(1)-1967 ಅನ್ವಯ ಡಾನ್ಸ್ಗೆ ನಿಷೇಧ ವಿಧಿಸಿರುವುದನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಮದ್ಯ ಮಾರಾಟ ಮತ್ತು ಪೂರೈಕೆ ಪರವಾನಗಿ ಪಡೆದಿರುವವರು ಬಾರ್ಗಳಲ್ಲಿ ಡ್ಯಾನ್ಸ್ ಏರ್ಪಡಿಸಲು ಈ ನಿಯಮದ ಅನ್ವಯ ಅವಕಾಶ ನೀಡಿರಲಿಲ್ಲ. ಈ ಸಂಬಂಧ ಚೆಫ್ ಇನ್ ರಿಜೆನ್ಸಿ ಹಾಗೂ ಇನ್ನಿಬ್ಬರು ಡಾನ್ಸ್ರ್ಗಳು ಪರವಾನಗಿ ಪಡೆದಿರುವವರ ಜಾಗದಲ್ಲಿ ಅನುಮತಿ ನೀಡಲು ನಗರ ಪೊಲೀಸ್ ಆಯುಕ್ತರಿಗೆ 2013 ಆ.22 ರಂದು ಮನವಿ ಮಾಡಿದ್ದರು.
ವಾಲಿಯಪ್ಪ ಕುಟುಂಬಕ್ಕೆ 2ಲಕ್ಷ ಪರಿಹಾರ
ಬೆಂಗಳೂರು: ಕಳ್ಳನ ಬೆನ್ನಟ್ಟಿ ಹಿಡಿಯಲು ಹೋಗಿ ಕಾರ್ಖಾನೆ ಮೇಲ್ಛಾವಣಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿರುವ ರಾಜಗೋಪಾಲನಗರ ಠಾಣೆ ಪೊಲೀಸ್ ಪೇದೆ ವಾಲಿಯಪ್ಪ ಮೇಟಿ ಕುಟುಂಬಕ್ಕೆ ಗೃಹ ಇಲಾಖೆ 2 ಲಕ್ಷ ಪರಿಹಾರ ನೀಡಿದೆ. ನಿಮ್ಹಾನ್ಸ್ ಆಸ್ಪತ್ರೆ ತುರ್ತು ನಿಗಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಲಿಯಪ್ಪ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ ಕೃತಕ ಉಸಿರಾಟ ವ್ಯವಸ್ಥೆ ಮುಂದುವರೆದಿದ್ದು ಇನ್ನು ಕೆಲ ದಿನ ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳ್ಳನನ್ನು ಹಿಡಿಯಲು ಹೋಗಿ ವಾಲಿಯಪ್ಪ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು.
ತೂಬಗೆರೆಯಲ್ಲಿ ಸಾಂಪ್ರದಾಯಿಕ ಭೂತನೆರಿಗೆ
ದೊಡ್ಡಬಳ್ಳಾಪುರ: ಇಲ್ಲಿನ ತೂಬಗೆರೆ ಗ್ರಾಮದಲ್ಲಿ ಸಾಂಪ್ರದಾಯಿಕ ಭೂತನೆರಿಗೆ ಉತ್ಸವ ಬುಧವಾರ ಮಧ್ಯಾಹ್ನ ಸಂಭ್ರಮದಿಂದ ನಡೆಯಿತು. ಪ್ರತಿವರ್ಷ ಆಶಾಡ ಏಕಾದಶಿಯ ಅಂಗವಾಗಿ ಈ ಜನಪದ ಆಚರಣೆ 5 ಶತಮಾನಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ನಡೆದ ಉತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ಬಾರಿ ಕೂಡ ಎಂದಿನಂತೆ ವಿಜೃಂಭಣೆಯಿಂದ ಭೂತನೆರಿಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ಪೂಜಾರಿಗಳು, ಭೂತವೇಷಧಾರಿ ವೆಂಕಟೇಶ್ ಮತ್ತು ವೆಂಕಟರಮಣಪ್ಪ, ಆನಂದ್ ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

