ತಾ.ಪಂ. ಚುಕ್ಕಾಣಿ ಕಾಂಗ್ರೆಸ್ಗೆ ಖಚಿತ
ಮತ್ತೀಕೆರೆ ಜಯರಾಮ್
ರಾಮನಗರ : ಮೀಸಲು ನಿಗದಿಯಲ್ಲಿ ಕೈ ಚಳಕ ತೋರಿರುವ ಕಾಂಗ್ರೆಸ್ ಬಹುಮತ ಇಲ್ಲದೆಯೂ ರಾಮನಗರ ತಾ.ಪಂ. ಚುಕ್ಕಾಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಮೀಸಲು ಮಹಿಮೆಯಿಂದ ಶೋಭಾ ಲಕ್ಷ್ಮಣಕುಮಾರ್ ಅವರಿಗೆ ಅಧ್ಯಕ್ಷ ಗಾದಿ ಖಚಿತವಾಗಿದೆ.
ಈ ಮೊದಲು ತಾ.ಪಂ. ಅಧ್ಯಕ್ಷ ಹುದ್ದೆಯನ್ನು ಸಾಮಾನ್ಯಕ್ಕೆ, ಉಪಾಧ್ಯಕ್ಷ ಹುದ್ದೆಯನ್ನು ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿತ್ತು. ಜೆಡಿಎಸ್ನಲ್ಲಿ ಒಗ್ಗಟ್ಟು ಮೂಡುತ್ತಿದ್ದಂತೆಯೇ ಸರ್ಕಾರ ಮೀಸಲು ಪರಿಷ್ಕರಿಸಿ, ಅಧಿಕಾರ ದಾಹವನ್ನು ತೋರಿಸಿದೆ.
ಬದಲಾದ ಪಟ್ಟಿಯಲ್ಲಿ ರಾಮನಗರ ತಾ.ಪಂ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಅಬಾಧಿತವಾದರೆ, ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡ ಮಹಿಳೆಗೆ ನಿಗದಿಪಡಿಸಲಾಗಿದೆ. ಈ ಮೀಸಲಿನಡಿ ಏಕೈಕ ಸದಸ್ಯೆ ಹೊಂದಿರುವ ಕಾಂಗ್ರೆಸ್ ಹೋರಾಟವೇ ಇಲ್ಲದೆ ಅಧಿಕಾರ ಗಿಟ್ಟಿಸಲಿದೆ.
ಮತ್ತೆ ಒಲಿದ ಅದೃಷ್ಟ: ರಾಮನಗರ ತಾ.ಪಂ.ನ ಮೊದಲ 20 ತಿಂಗಳ ಅವಧಿಯಲ್ಲಿ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಆಗಲೂ ಶೋಭಾ ಲಕ್ಷ್ಮಣಕುಮಾರ್ ಮೀಸಲು ಮಹಿಮೆಯಿಂದ ಉಪಾಧ್ಯಕ್ಷರಾಗಿ ಅಧಿಕಾರ ಸವಿದಿದ್ದರು.
ಮೀಸಲು ಬದಲಾವಣೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಪರಿಣಾಮ ಮತ್ತೊಮ್ಮೆ ಅದೃಷ್ಟ ಬಲದಿಂದಲೇ ಶೋಭಾ ಲಕ್ಷ್ಮಣ ಕುಮಾರ್ ಅನಾಯಾಸವಾಗಿ ಅಧ್ಯಕ್ಷ ಸ್ಥಾನಕ್ಕೇರುವುದು ನಿಶ್ಚಯವಾಗಿದೆ.
ಶುರುವಾಯ್ತು ಕಲಹ: ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಸರ್ಕಾರ ಈ ಹಿಂದೆ ಆದೇಶ ಹೊರಡಿಸಿದ್ದಾಗ ಜೆಡಿಎಸ್ ಸದಸ್ಯರು ಭಿನ್ನಮತ ಮರೆತು, ಒಗ್ಗಟ್ಟಿನ ಮಂತ್ರ ಜಪಿಸಿದ್ದರು. 4 ಮಂದಿಗೆ ಅಧಿಕಾರ ಹಂಚುವ ಒಡಂಬಡಿಕೆ ಸೂತ್ರವನ್ನೂ ರೂಪಿಸಿಕೊಂಡಿದ್ದರು.
ಈ ಬೆಳವಣಿಗೆಯೇ ಜೆಡಿಎಸ್ ಪಾಲಿಗೆ ಮುಳುವಾಯ್ತು. ಜೆಡಿಎಸ್ ಒಡಕಿನ ಲಾಭ ಪಡೆದು, ಎರಡನೇ ಅವಧಿಯಲ್ಲಿ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್ ಮತ್ತೆ ಅಂಥದ್ದೇ ಸನ್ನಿವೇಶವನ್ನು ಎದುರು ನೋಡುತ್ತಿತ್ತು. ಪರಿಸ್ಥಿತಿ ಪ್ರತಿಕೂಲವಾದಾಗ ಸರ್ಕಾರದಿಂದ ಮೀಸಲನ್ನೇ ಬದಲಿಸಿದೆ.
ಪರಿಷ್ಕೃತ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗುತ್ತಿದ್ದಂತೆಯೇ ಜೆಡಿಎಸ್ ಪಾಳಯದಲ್ಲಿ ಮತ್ತೆ ಕಲಹ ಮೂಡಿದೆ. ಬಣ ರಾಜಕಾರಣ ಯಥಾ ಪ್ರಕಾರ ಮುಂದುವರೆದಿದ್ದು, ಈ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ದಕ್ಕುವ ಬಗ್ಗೆಯೂ ಅನುಮಾನ ಮೂಡಿದೆ.
ಉಪಾಧ್ಯಕ್ಷೆ ಯಾರು: ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಹುದ್ದೆಯನ್ನು ಗಿಟ್ಟಿಸುವುದು ಉಭಯ ಪಕ್ಷಗಳ ಪಾಲಿಗೂ ಪ್ರತಿಷ್ಠೆಯ ಪ್ರಶ್ನೆಯೇ ಸರಿ.
16 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್ 9 ಮತ್ತು ಕಾಂಗ್ರೆಸ್ 7 ಸದಸ್ಯರನ್ನು ಹೊಂದಿವೆ. ಜೆಡಿಎಸ್ ಒಡಕನ್ನು ಬಳಸಿಕೊಂಡು ಉಪಾಧ್ಯಕ್ಷ ಸ್ಥಾನವನ್ನೂ ತೆಕ್ಕೆಗೆ ಹಾಕಿಕೊಳ್ಳಲು ಕಾಂಗ್ರೆಸ್ ಹವಣಿಸಿದೆ. ಉಪಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲಾಗದಿದ್ದರೆ ಜೆಡಿಎಸ್ ಮಾನ ಹರಾಜಾಗುವುದು ಖಚಿತ.
ಜೆಡಿಎಸ್ ಪಕ್ಷದಲ್ಲಿರುವ 3 ಮಹಿಳಾ ಸದಸ್ಯರ ಪೈಕಿ ಭಾನುಮತಿ ಮತ್ತು ಸುಜಾತಾ ಈಗಾಗಲೇ ಅಧ್ಯಕ್ಷ ಸ್ಥಾನ ಅನುಭವಿಸಿದ್ದಾರೆ. ಅವರು ಮತ್ತೆ ಉಪಾಧ್ಯಕ್ಷ ಸ್ಥಾನ ಬಯಸುವ ಸಂಭವ ಕ್ಷೀಣ. ಪಕ್ಷದಲ್ಲಿ ಒಗ್ಗಟ್ಟು ಮೂಡಿದರೆ ಬನ್ನಿಕುಪ್ಪೆ ಕ್ಷೇತ್ರದ ಚಿಕ್ಕತಾಯಮ್ಮಗೆ ಉಪಾಧ್ಯಕ್ಷ ಪಟ್ಟ ಸಿಗಲಿದೆ.
ಕಾಂಗ್ರೆಸ್ ಪಕ್ಷದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಅಪ್ಪಾಜಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಗೆಲ್ಲಲು ಬೇಕಿರುವಷ್ಟು ಸದಸ್ಯರ ಖರೀದಿಗೆ ಅವರು ತಯಾರಿದ್ದಾರೆ. ಹೀಗಾಗಿ ಚುನಾವಣೆ ಫಲಿತಾಂಶ ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಚುನಾವಣೆ ನಿಗದಿ 22ಕ್ಕೆ
ರಾಮನಗರ ತಾಲೂಕು ಪಂಚಾಯಿತಿಯ ಮೂರನೇ 20 ತಿಂಗಳ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜು.22ಕ್ಕೆ ಚುನಾವಣೆ ನಿಗದಿಪಡಿಸಿ ಚುನಾವಣಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಸಿದ್ದಪ್ಪ ಆದೇಶ ಹೊರಡಿಸಿದ್ದಾರೆ.
4ರಲ್ಲಿ 3 ಕಡೆ ಮಹಿಳಾ ಮೀಸಲು
ರಾಮನಗರ ಜಿಲ್ಲೆಯ 4 ತಾ.ಪಂ.ಗಳ ಪೈಕಿ 3 ಕಡೆ ಅಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿದೆ. ಕನಕಪುರದಲ್ಲಿ ಮಾತ್ರವೇ ಸಾಮಾನ್ಯ ವರ್ಗದ ಪಾಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೂ ಎರಡು ಕಡೆ ಮಹಿಳಾ ಮೀಸಲು ನಿಗದಿಯಾಗಿದೆ. ಮೀಸಲು ವಿವರ ಇಂತಿದೆ.
ಕನಕಪುರ : ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ ಅ
ಮಾಗಡಿ : ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
ಚನ್ನಪಟ್ಟಣ : ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ
ರಾಮನಗರ : ಅಧ್ಯಕ್ಷ: ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

