ದೊಡ್ಡಬಳ್ಳಾಪುರ ಬೆಂಬಿಡದ ಕಸ ಗ್ರಹಣ
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕನ್ನು ಅಕ್ಷರಶಃ ಕಸದ ಕೊಂಪೆಯಾಗಿಸಿರುವ ಬಿಬಿಎಂಪಿ ತಾಲೂಕಿನ ಸಾಸಲು ಹೋಬಳಿಯ ಚಿಗರೇನಹಳ್ಳಿ ಬಳಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕಾಮಗಾರಿ ಆರಂಭಿಸಿದೆ ಎಂಬ ಮಾಹಿತಿ ತಾಲೂಕಿನ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ ಯಾವುದೇ ಕಾರಣಕ್ಕೂ ಕಸ ವಿಲೇವಾರಿಗೆ ಅವಕಾಶ ಕೊಡಲ್ಲ ಎಂದು ಅಬ್ಬರಿಸಿ ರಸ್ತೆಗಿಳಿದಿದ್ದ ಜನಪ್ರತಿನಿಧಿಗಳು ಕಾಮಗಾರಿ ಸದ್ದಿಲ್ಲದೆ ಆರಂಭವಾಗಿರುವಾಗ ದಿವ್ಯಮೌನಕ್ಕೆ ಶರಣಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿಗೆ ಬರಲು ಬಿಡಲ್ಲ ಎಂದಿದ್ದ ಮಾಜಿ ಶಾಸಕರು, ಜನರೊಂದಿಗೆ ಬೀದಿಗಿಳಿದು ಹೋರಾಡಲೂ ಸಿದ್ಧ ಎಂದಿದ್ದ ಹಾಲಿ ಶಾಸಕರು ಸರ್ಕಾರದ ಹಂತದಲ್ಲಿ ಈ ಪ್ರಸ್ತಾವನೆ ಹಿಂದಕ್ಕೆ ಪಡೆಯಲು ಒತ್ತಡ ಹೇರಬೇಕಿದೆ.
ಒಂದೆಡೆ ಗುಂಡ್ಲಹಳ್ಳಿ ಬಳಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟೆರ್ರಾಫಾರ್ಮ ಕಸ ವಿಲೇವಾರಿ ಘಟಕದಲ್ಲಿ ದಿನಕ್ಕೆ ನೂರಾರು ಟನ್ ಕಸ ಬಂದು ಬೀಳುತ್ತಿದೆ.
ಮತ್ತೊಂದೆಡೆ ಹುಸ್ಕೂರು ಬಳಿ ಸಾವಯವ ಗೊಬ್ಬರ ತಯಾರಿಕೆಯ ನೆಪದಲ್ಲಿ ಬಿಬಿಎಂಪಿಯ ಘನತ್ಯಾಜ್ಯ ರಾಶಿರಾಶಿಯಾಗಿ ಬಂದು ಬೀಳುತ್ತದೆ. ಅದೂ ಸಾಲದೆಂಬಂತೆ ಕಳೆದ 3 ದಿನಗಳ ಹಿಂದೆ ತಾಲೂಕಿನ ಮಧುರೆ ಹೋಬಳಿ ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೀಂಸೊಣ್ಣೇನಹಳ್ಳಿ-ಅಂಜನಾಮೂರ್ತಿನಗರದ ನಡುವೆ ಬೃಹತ್ ಕಸವಿಲೇವಾರಿ ಘಟಕ ಸ್ಥಾಪನೆಗೆ ಬಿಬಿಎಂಪಿ ನಿರ್ಧರಿಸಿರುವ ವಿಷಯ ಬಹಿರಂಗಗೊಂಡಿದೆ. ಈ ಹಿಂದೆ ಪ್ರಸ್ತಾಪ ಕೈಬಿಡಲಾಗಿದೆ ಎಂದು ಘೋಷಿಸಲಾಗಿದ್ದ ಚಿಗರೇನಹಳ್ಳಿಯಲ್ಲಿ ಘಟಕ ಸ್ಥಾಪನೆ ಗರಿಗೆದರಿದೆ.
ಸದ್ದಿಲ್ಲದೆ ಕಾಮಗಾರಿ ಆರಂಭ : ಚಿಗರೇನಹಳ್ಳಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸದ್ದಿಲ್ಲದೆ ಚಾಲನೆ ನೀಡಲಾಗಿದೆ ಎಂಬ ಸಂಶಯ ದಟ್ಟವಾಗಿದೆ.
ಈ ಕುರಿತು ಮಾಹಿತಿ ಹೊಂದಿರುವ ಜನ ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ. ಈ ಪ್ರಸ್ತಾವನೆ ಹೊರಬೀಳುತ್ತಲೇ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ದೊಡ್ಡಬೆಳವಂಗಲದಿಂದ ಮೂಗನಹಳ್ಳಿ ಕ್ರಾಸ್‌ವರೆಗೆ ಪಾದಯಾತ್ರೆ ನಡೆಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಗಿತ್ತು. ಆಗ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು ಯಾವುದೇ ಕಾರಣಕ್ಕೂ ಚಿಗರೇನಹಳ್ಳಿಯಲ್ಲಿ ಘಟಕ ಸ್ಥಾಪನೆ ಮಾಡಲ್ಲ ಎಂದಿದ್ದರು.
ಆದರೆ ಈಗ ಘಟಕ ಸ್ಥಾಪನೆ ಸಿದ್ಧತೆಗಳು ನಡೆದಿವೆ. ಇತ್ತ ಭರವಸೆ ಕೊಟ್ಟಿದ್ದ ಅಧಿಕಾರಿಗಳೂ ಈಗ ಉಲ್ಟಾ ಹೊಡೆದಿದ್ದಾರೆ. ಅಬ್ಬರಿಸಿದ ಜನಪ್ರತಿನಿಧಿಗಳೂ ತಣ್ಣಗಾಗಿದ್ದಾರೆ. ಒಟ್ಟಿನಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ನೋಡಿ ಜನ ಅಸಹಾಯಕರಾಗಿದ್ದಾರೆ.
ಎಚ್ಚರಿಕೆಯ ಸಂದೇಶ: ಸರ್ಕಾರ ಹಾಗೂ ಬಿಬಿಎಂಪಿಯ ಈ ಸ್ವಾರ್ಥಸಾಧನೆಯ ಧೋರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಸ ವಿಲೇವಾರಿ ಘಟಕ ದೊಡ್ಡಬಳ್ಳಾಪುರ ತಾಲೂಕಿಗೆ ಬರಲು ಬಿಡಲ್ಲ ಎಂದಿದ್ದ ಮಾಜಿ ಶಾಸಕರು, ಜನರೊಂದಿಗೆ ಬೀದಿಗಿಳಿದು ಹೋರಾಡಲೂ ಸಿದ್ಧ ಎಂದಿದ್ದ ಹಾಲಿ ಶಾಸಕರು ಸರ್ಕಾರದ ಹಂತದಲ್ಲಿ ಈ ಪ್ರಸ್ತಾವನೆ ಹಿಂದಕ್ಕೆ ಪಡೆಯಲು ಒತ್ತಡ ಹೇರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

