ನಕ್ಷೆ ಅನುಮೋದನೆ ಮೊದ್ಲೇ ನಿವೇಶನ
ಮತ್ತೀಕೆರೆ ಜಯರಾಮ್
ರಾಮನಗರ: ಎಕರೆಗಟ್ಟಲೆ ಜಮೀನನ್ನು ಭೂ ಪರಿವರ್ತನೆ ಮಾಡಿಸದೆ, ಅಭಿವೃದ್ಧಿ ಶುಲ್ಕ ಪಾವತಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆಗೆ ಅನುಮೋದನೆಯನ್ನೂ ಪಡೆದುಕೊಳ್ಳದೆ ನಿವೇಶನಗಳನ್ನಾಗಿ ವಿಂಗಡಿಸಲಾಗಿದೆ. ಅವಕ್ಕೆಲ್ಲ ಯಾವುದೇ ದೃಢೀಕರಣವಿಲ್ಲದೆ ಉಪ ಸಂಖ್ಯೆಗಳನ್ನು ನೀಡಿ ಖಾತೆ ಮಾಡಲಾಗಿದೆ.
ಹೀಗೆ ರಚಿತವಾದ ಅನಧಿಕೃತ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಮೀಸಲಿಟ್ಟಿಲ್ಲ. ಈ ಬಡಾವಣೆಗಳಿಂದ ಸರ್ಕಾರ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿರುವುದನ್ನು ತನಿಖಾ ವರದಿಯಲ್ಲಿ ಯಶವಂತಕುಮಾರ್ ಉಲ್ಲೇಖಿಸಿದ್ದಾರೆ.
ಯಾವುದೇ ಬಡಾವಣೆ ನಿರ್ಮಾಣವಾದಾಗ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಕಡ್ಡಾಯ. ರಸ್ತೆಗೆ ಸೂಕ್ತ ಜಾಗ ಬಿಡಲಾಗಿಲ್ಲ. ಉಳಿದ ಸೌಲಭ್ಯಗಳನ್ನು ಕಲ್ಪಿಸಿಯೇ ಇಲ್ಲ. ಅದೆಲ್ಲವೂ ನಗರಸಭೆಗೆ ಹೊರೆಯಾಗುತ್ತದೆ ಎನ್ನುವುದನ್ನು ವರದಿಯಲ್ಲಿ ವಿವರಿಸಲಾಗಿದೆ.
ರಿಜಿಸ್ಟರ್ ಪರಿಶೀಲನೆ: ಅಕ್ರಮ ಖಾತೆಗಳ ತನಿಖೆ ಕೈಗೆತ್ತಿಕೊಂಡ ಯಶವಂತ ಕುಮಾರ್ ಅವರು ಖಾತೆಗಳಿಗೆ ಸಂಬಂಧಿಸಿದಂತೆ 280ಕ್ಕೂ ಹೆಚ್ಚು ರಿಜಿಸ್ಟರ್ ಕಡತ ಯಜ್ಞ ನಡೆಸಿದ್ದಾರೆ. ಅದರಲ್ಲಿ ಪತ್ತೆ ಹಚ್ಚಿರುವ ಕೆಲ ಅಕ್ರಮಗಳ ವಿವರಗಳನ್ನು ತನಿಖಾ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಉಪ ಸಂಖ್ಯೆಗಳನ್ನು ನೀಡಿ ಒಂದೇ ಸಂಖ್ಯೆಯಡಿ 4 ರಿಂದ 6 ನಿವೇಶನಗಳನ್ನು ದಾಖಲಿಸಿರುವುದನ್ನು ಬಹಿರಂಗಪಡಿಸಲಾಗಿದೆ. ಇಂತಹ ನಿವೇಶನಗಳ ವಿಸ್ತೀರ್ಣ ಸರಾಸರಿ 2 ಸಾವಿರದಿಂದ 8 ಸಾವಿರ ಚದರ ಅಡಿವರೆಗೂ ಇದೆ ಎನ್ನುವ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಅಕ್ರಮ ಖಾತೆಗಳಿಗೆ ಆಸ್ತಿ ತೆರಿಗೆ ರಿಜಿಸ್ಟರ್ನಲ್ಲಿ ಪ್ರತ್ಯೇಕ ಪುಟ ತೆರೆದು ಸಂಖ್ಯೆ ನೀಡುವುದಿಲ್ಲ. ಈಗಾಗಲೇ ಖಾತೆ ನಮೂದಾದ ಯಾವುದೋ ಒಂದು ಪುಟದಲ್ಲಿ ಉಪ ಸಂಖ್ಯೆಗಳನ್ನು ನೀಡಿ, ಖಾತೆ ಸೃಷ್ಟಿಸಿ ಅದಕ್ಕೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಿ ನಮೂನೆ 3ರಲ್ಲಿ ಕಾಣಿಸುತ್ತಾರಷ್ಟೇ. ವಾರ್ಡ್ ನಂ.14ರ ಆಸ್ತಿ ತೆರಿಗೆ ರಿಜಿಸ್ಟರ್ 14 - 2ರಲ್ಲಿ 300 ಎ ಖಾತೆ ಸಂಖ್ಯೆಗೆ 300ಎ 21 ಎಂದು ಉಪ ಸಂಖ್ಯೆ ನೀಡಲಾಗಿದೆ. ಅದರಲ್ಲಿ 15 ಗುಂಟೆ ಕೃಷಿ ಜಮೀನಿನಲ್ಲಿ ವಿಂಗಡಿಸಲಾದ 4 ನಿವೇಶನಗಳಿಗೆ ಒಂದೇ ಉಪಸಂಖ್ಯೆಯ ಖಾತೆ ಇರುತ್ತದೆ.
ಒಂದೇ ಉಪಸಂಖ್ಯೆಯ ಅಕ್ರಮ ಖಾತೆಗೆ ಪಾವತಿಸಲಾದ ಸ್ವಯಂ ಘೋಷಿತ ಆಸ್ತಿ ತೆರಿಗೆಯ ನಮೂನೆ ಮೂರನ್ನೇ ಆಧಾರವಾಗಿಟ್ಟುಕೊಂಡು 4 ನಿವೇಶನಗಳನ್ನೂ ಮಾರಾಟ ಮಾಡಲಾಗುತ್ತಿದೆ. ಹೀಗೆ ಖರೀದಿಸಿದ 4 ಮಂದಿ ಬಳಿಯೂ ಒಂದೇ ಖಾತಾ ಸಂಖ್ಯೆ ಉಳಿದುಕೊಂಡು, ಗೊಂದಲ ಮೂಡುತ್ತಿದೆ.
ಪ್ರಕರಣದ ಮಜಲುಗಳು: ಕೆಲವರು ತಮ್ಮ ಒಟ್ಟು ಜಮೀನಿನ ಪೈಕಿ ಸ್ವಲ್ಪ ಭಾಗವನ್ನು ನಿವೇಶನವನ್ನಾಗಿ ಕಾಣಿಸಿ, ಅದಕ್ಕೆ ಮಾಡಿಸಿಕೊಂಡ ಅಕ್ರಮ ಖಾತೆಗಳನ್ನೇ ಆಧಾರವಾಗಿಟ್ಟುಕೊಂಡು ಇಡೀ ಜಮೀನನ್ನು ಬಡಾವಣೆ ಮಾಡಿರುವ ನಿದರ್ಶನಗಳನ್ನೂ ತನಿಖಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
14ನೇ ವಾರ್ಡ್ನಲ್ಲಿ 301 ಬಿ ಖಾತೆಗೆ ಪುಟದಲ್ಲಿ 301ಬಿ 21 ಎಂದು ಉಪ ಸಂಖ್ಯೆಯೊಂದಿಗೆ 21 ಗುಂಟೆ ಜಮೀನಿನ 6 ನಿವೇಶನಗಳನ್ನು ಕಾಣಿಸಿದ್ದರೆ, 302 ಎ ಖಾತೆಯಡಿ 302 ಎ 39 ಎಂದು ಉಪ ಸಂಖ್ಯೆಯನ್ನು ನೀಡಿ 31 ಗುಂಟೆ ಪೈಕಿ 3 ನಿವೇಶನಕ್ಕೆ ಅಕ್ರಮ ಖಾತೆ ಮಾಡಲಾಗಿದೆ. 302 ಎ ಖಾತೆಯಡಿ ಎ02 ಬಿ 38 ಎಂದು ಉಪಸಂಖ್ಯೆ ಕಾಣಿಸಿ ಬರೋಬ್ಬರಿ 6 ನಿವೇಶನಗಳಿಗೆ ಖಾತೆಯಾಗಿದೆ. 030 ಎ ಅಡಿ 303 ಎ 38 ಎನ್ನುವ ಉಪ ಸಂಖ್ಯೆಗೆ ಇನ್ನೂ ಆರು ನಿವೇಶನಗಳಿಗೆ ಅಕ್ರಮ ಖಾತೆ ಮಾಡಿಕೊಡಲಾಗಿರುವುದನ್ನು ವರದಿಯಲ್ಲಿ ಕಾಣಿಸಲಾಗಿದೆ. ಇದೇ ರೀತಿ ವಾರ್ಡ್ ನಂ.24ರಲ್ಲಿ 858, 865, 869, 878, 877, 884, 886 ಖಾತೆ ಸಂಖ್ಯೆಗಳಡಿ ಉಪ ಸಂಖ್ಯೆಗಳಿಗೆ ಮಹಿಳೆಯೊಬ್ಬರ ಮಾಲೀಕತ್ವದ 21 ಅಕ್ರಮ ಖಾತೆಗಳು ನಮೂದಾಗಿವೆ. ಇವಕ್ಕೆ ಸಂಬಂಧಿಸಿದ 2 ಎಕರೆ ಜಮೀನಿಗೆ ಇನ್ನೂ ಪಹಣಿ ಬರುತ್ತಿದೆ.
2 ಎಕರೆಗೆ ಖಾತೆ
ವಾರ್ಡ್ ನಂ.23ರಲ್ಲಿ ಕುಟುಂಬ ಸದಸ್ಯರ ಜಂಟಿ ಮಾಲೀಕತ್ವಕ್ಕೆ ಸೇರಿದ ಕೊತ್ತೀಪುರ ಅಮಾನಿಕೆರೆಯ ಸರ್ವೆ ನಂ.39ರಲ್ಲಿನ ಒಂದು ಎಕರೆ 11 ಗುಂಟೆ ಜಮೀನನ್ನು 8 ನಿವೇಶನಗಳನ್ನಾಗಿ ಪರಿವರ್ತಿಸಿ ಅಕ್ರಮ ಖಾತೆ ಮಾಡಿ ದೊಡ್ಡ ಕರ್ಮಕಾಂಡವನ್ನೇ ಸೃಷ್ಟಿಸಲಾಗಿದೆ. ಹೀಗೆ ಹಲವಾರು ಅಕ್ರಮ ಖಾತೆಗಳ ವಿವರಗಳನ್ನು ತನಿಖಾ ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಇವಿಷ್ಟೂ ಖಾತೆಗಳನ್ನು ನೇರವಾಗಿ ಮಾಲೀಕರೇ ತಂದು ರಿಜಿಸ್ಟರ್ ಕಡತಕ್ಕೆ ಸೇರಿಸಲು ಖಂಡಿತ ಸಾಧ್ಯವಿಲ್ಲ. ಇದರಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರವಿದೆ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.
ಹಸಿರು ವಲಯದ್ದೇ ಅಧಿಕ
ಅಕ್ರಮ ಖಾತೆಗಳಡಿ ನಿವೇಶನಗಳಾಗಿ ಪರಿವರ್ತನೆ ಮಾಡಿ, ಮಾರಾಟ ಇಲ್ಲವೇ ಉಪಯೋಗಕ್ಕೆ ಬಳಕೆಯಾಗುತ್ತಿರುವ ಸರ್ವೆ ನಂಬರುಗಳ ಜಮೀನು ಭಾಗಶಃ ಹಸಿರು ವಲಯಕ್ಕೆ ಸೇರಿದ್ದಾಗಿದೆ ಎನ್ನುವುದು ಗಂಭೀರ ವಿಷಯವಾಗಿದೆ. ಹಸಿರು ವಲಯದಲ್ಲಿರುವ ಜಮೀನನ್ನು ಅನ್ಯಕ್ರಾಂತವಿಲ್ಲದೆ ನಿವೇಶನ, ವಾಣಿಜ್ಯ ಸಹಿತ ಅನ್ಯ ಉದ್ದೇಶಕ್ಕೆ ಬಳಕೆಗೆ ಬಿಲ್ಕುಲ್ ಅವಕಾಶವಿಲ್ಲ. ಇಷ್ಟಾಗಿಯೂ ಹಸಿರು ವಲಯದಲ್ಲಿರುವ ಜಮೀನುಗಳನ್ನೇ ನಿವೇಶನಗಳನ್ನಾಗಿ ವಿಂಗಡಿಸಿ ಖಾತೆ ಮಾಡಿಟ್ಟು ಅವಾಂತರ ಸೃಷ್ಟಿಸಲಾಗಿದೆ. ಈ ವಿಷಯದಲ್ಲಿ ನಗರಸಭೆ ಮಾತ್ರವಲ್ಲದೆ ಕಂದಾಯ ಇಲಾಖೆ ವೈಫಲ್ಯವೂ ಎದ್ದು ಕಾಣುತ್ತಿದೆ. ಕಂದಾಯ ಇಲಾಖೆ ಚುಕ್ಕಾಣಿ ಹಿಡಿರುವ ಸ್ವತಃ ಜಿಲ್ಲಾಧಿಕಾರಿ ಈ ವಿಷಯದಲ್ಲಿ ತಮ್ಮ ಅಧೀನ ಅಧಿಕಾರಿಗಳು, ಸಿಬ್ಬಂದಿಗೂ ಚಾಟಿ ಬೀಸುವ ಕೆಲಸ ಮಾಡಬೇಕಿದೆ. ಒಂದೊಮ್ಮೆ ಕಂದಾಯ ಅಧಿಕಾರಿಗಳು ಕಚೇರಿ ಬಿಟ್ಟು ಹೊರ ಹೋಗಿ ಕೆಲಸ ಮಾಡಿದ್ದೇ ಆಗಿದ್ದರೆ ಕೃಷಿ ಪ್ರದೇಶವಾದ ಹಸಿರು ವಲಯದ ಜಮೀನು ಅನ್ಯಕ್ರಾಂತವಿಲ್ಲದೇ ನಿವೇಶನಗಳಾಗಿ ಪರಿವರ್ತನೆ ಆಗಿರುವುದು ಅದಾಗಲೇ ಸಾಬೀತಾಗಿ ಅಕ್ರಮ ಖಾತೆಗಳ ಕರ್ಮಕಾಂಡಕ್ಕೆ ಕೊಕ್ಕೆ ಬೀಳುತ್ತಿತ್ತು.
ಅಕ್ರಮ ಸಕ್ರಮದಲ್ಲಿ ದಾರಿ ಇಲ್ಲ
ಸರ್ಕಾರ ಹೇಗೂ ಅಕ್ರಮ ಸಕ್ರಮ ಜಾರಿಗೆ ತಂದಿದೆ. ಅದರಲ್ಲಿ ಅಕ್ರಮ ಖಾತೆಗಳ ನಿವೇಶನಗಳನ್ನು ಸಕ್ರಮ ಮಾಡಿಕೊಳ್ಳಬಹುದು ಎಂದು ಮಾರಾಟ ಮಾಡಿದ ಮಾಲೀಕರು ಮತ್ತು ದಲ್ಲಾಳಿಗಳು ಏಮಾರಿಸಲು ಹೊರಟಿದ್ದಾರೆ. ಆದರೆ, ನಿಯಮ ಪ್ರಕಾರ ಅದಕ್ಕೆ ಖಂಡಿತ ಅವಕಾಶವಿಲ್ಲ. ಸರ್ವೆ ನಂಬರ್ ಜಮೀನಿನ ಪೈಕಿ ಗರಿಷ್ಠ 2 ಗುಂಟೆ ಜಮೀನಿಗಷ್ಟೇ ಅಕ್ರಮ ಸಕ್ರಮ ಅನ್ವಯ. ಇಡೀ ಜಮೀನನ್ನೇ ನಿವೇಶನಗಳನ್ನಾಗಿ ವಿಂಗಡಿಸಿ, ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಈ ಅಕ್ರಮವು ಅಕ್ರಮವಾಗಿಯೇ ಉಳಿಯುತ್ತದೆಯೇ ಹೊರತು ಸಕ್ರಮವಾಗುವುದಿಲ್ಲ.
ಸಮಗ್ರ ತನಿಖೆಗೆ ಶೈಲಜಾ ನೇಮಕ
ರಾಮನಗರ: ಇಲ್ಲಿನ ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತೆಗಳ ಕರ್ಮಕಾಂಡದ ಸಮಗ್ರ ತನಿಖೆಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶೈಲಜಾ ಅವರಿಗೆ ವಹಿಸಿ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಆದೇಶ ಹೊರಡಿಸಿದ್ದಾರೆ. ಅಂತೆಯೇ ಅಕ್ರಮ ಖಾತೆಗಳ ಹಗರಣದ ಸೃಷ್ಟಿಕರ್ತ ಎನಿಸಿದ ನಿವೃತ್ತ ಆಯುಕ್ತ ಸಿದ್ದರಾಜು ಅವರಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿದ್ದು, ದ್ವಿತೀಯ ದರ್ಜೆ ಸಹಾಯಕ ಜಿ.ರೇಣುಕ ಅಲಿಯಾಸ್ ರೇವಣ್ಣ ಅವರನ್ನು ಸೇವೆಯಿಂದ ಅಮಾನತುಪಡಿಸಿದ್ದಾರೆ.
ಅನಧಿಕೃತ ಬಡಾವಣೆಗಳ ಅಕ್ರಮ ಖಾತೆಗಳಿಗೆ ಸಂಬಂಧಿಸಿದಂತೆ ನಗರಸಭೆ ಆಯುಕ್ತ ಯಶವಂತ ಕುಮಾರ್ ನಡೆಸಿದ ಪ್ರಾಥಮಿಕ ತನಿಖಾ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಮಾದಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಭೂ ಪರಿವರ್ತನೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಇಲ್ಲದೆ ತಲೆ ಎತ್ತಿರುವ ಅನಧಿಕೃತ ಬಡಾವಣೆಗಳಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಿದೆ. ಅಂತೆಯೇ ನಗರದ ಅಭಿವೃದ್ಧಿಗೂ ಮಾರಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಉದ್ದೇಶಕ್ಕೆ ನಿಯಮಾನುಸಾರ ಜಾಗ ಬಿಡದೆ, ರಸ್ತೆಗಳಿಗೆ ನಿಗದಿಪಡಿಸಿದಷ್ಟು ಸ್ಥಳಾವಕಾಶ ಒದಗಿಸದೆ ನಿರ್ಮಿಸಿದಂತಹ ಬಡಾವಣೆಗಳು ಕೊಳಗೇರಿಗಳನ್ನು ಹುಟ್ಟು ಹಾಕುತ್ತವೆ. ಹೀಗಾಗಿ ಕ್ರಮ ಜರುಗಿಸಲು ಸಮಗ್ರ ತನಿಖೆಗೆ ನಿರ್ಧರಿಸಲಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

