ಬೆಂಗಳೂರು ಗ್ರಾಮಾಂತರ

'ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಪೂರ್ಣ ವಿಫಲ'

Published On :

ಹೊಸಕೋಟೆ: ರಾಜ್ಯದಲ್ಲಿ ಸಮರ್ಪಕವಾದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಆರೋಪಿಸಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕಿನ ಬಿಜೆಪಿ ಶಕ್ತಿ ಕೇಂದ್ರಪದಾಧಿಕಾರಿಗಳ,
ತಾಲೂಕು ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ ಗೃಹ ಸಚಿವರು ನಿರ್ಲಿಪ್ತರಾಗಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದ್ಜು ಸಾಮಾನ್ಯ ಜನರು ತೀವ್ರಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಆಡಳಿತ ಪಕ್ಷದ ಶಾಸಕರುಗಳೇ ಸರಕಾರದ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದು ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದ ಕಾರ್ಯಕಲಾಪಗಳೇ ಸರಕಾರದ ವೈಫಲ್ಯಗಳಿಗೆ ನಿದರ್ಶನವಾಗಿದೆ. ಕೇಂದ್ರ, ರಾಜ್ಯ ಸರಕಾರಗಳ ಸಹಯೋಗದಲ್ಲಿ ಕೈಗೊಳ್ಳುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಯೋಜನೆ
ಅನುಷ್ಠಾನದಲ್ಲಿಯೂ ಪಕ್ಷಪಾತ ತೋರುತ್ತಿದ್ದು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಸದಸ್ಯರನ್ನು ಕಡೆಗಣಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸುತ್ತಿದ್ದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದರು. ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾಂತರಾಜ್  ಮಾತನಾಡಿದರು. ತಾಲೂಕಿನ ಶಕ್ತಿ ಕೇಂದ್ರ, ಯುವ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಕ್ಕಳ ವಿರುದ್ಧದ ಅಪರಾಧ: ವಿಶೇಷ ಘಟಕಕ್ಕೆ ರಾಜೀವ್ ಆಗ್ರಹ
ಬೆಂಗಳೂರು: ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ಹಾಗೂ ಬೇಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ವಿರುದ್ಧದ ಹೋರಾಟಕ್ಕೆ ಬೆಂಬಲ ಘೋಷಿಸಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಮಕ್ಕಳ ವಿರುದ್ಧ ನಡೆಯುವ ಅಪರಾಧ ಪ್ರಕರಣ ವಿಚಾರಣೆಗೆ ವಿಶೇಷ ಘಟಕ ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದ ಯಾವುದೇ ಆರೋಪಿಗಳು ಹಾಗೂ ಶಾಲಾ ಆಡಳಿತ ಮಂಡಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಹಾಗೂ ನಿರ್ಲಕ್ಷ್ಯ ಮಾಡಿರುವ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗುವವರೆಗೂ ಅವಿರತ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.ಬೆಂಗಳೂರು ಮಹಾನಗರ ದಿನದಿಂದ ದಿನಕ್ಕೆ ಮಹಿಳೆ ಹಾಗೂ ಮಕ್ಕಳಿಗೆ ಅಸುರಕ್ಷಿತವಾಗುತ್ತಿದೆ. ಅದರಲ್ಲೂ ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಇತರ ಅಪರಾಧ ಪ್ರಕರಣ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದರಲ್ಲೂ ಶಾಲೆಗಳಲ್ಲಿ ಇಂತಹ ವಿಕೃತಿಗಳು ನಡೆದರೆ ಪಾಲಕರ ಆತಂಕಕ್ಕೆ ಉತ್ತರ ಕೊಡುವವರು ಯಾರು ಎಂದು ರಾಜೀವ್ ಪ್ರಶ್ನಿಸಿದ್ದಾರೆ.
ಶಕ್ತಿ ದೇವತೆಗಳ ಮೆರವಣಿಗೆ
ದೇವನಹಳ್ಳಿ: ಇಲ್ಲಿನ ದೇಶದ ಪೇಟೆ ಅಣ್ಣಮ್ಮದೇವಿ ಹಾಗೂ ದೊಡ್ಡಮ್ಮದೇವಿ ಸೇವಾ ಸಮಿತಿಯವರು 16 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಏಳು ದಿನಗಳ ವಿಶೇಷ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿದ್ದರು. ಭಕ್ತ ಮಂಡಳಿಯ ಸೇವಾ ಸಮಿತಿಯವರು ಗುರುವಾರ  ಅಣ್ಣಮ್ಮದೇವಿ, ದೊಡ್ಡಮ್ಮ ದೇವಿ, ಕೋಟೆ ಮಾರಮ್ಮ, ಮುನೇಶ್ವರ ಸ್ವಾಮಿ, ಚೌಡೇಶ್ವರಿ ತಾಯಿ, ಮದ್ದೂರಮ್ಮ, ಗಂಗಮ್ಮ ಹಾಗೂ ಕಾಳಮ್ಮದೇವಿ ಶಕ್ತಿ ದೇವತೆಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಪಟ್ಟಣದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಮುನಿನಂಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ವಸಂತಬಾಬು, ಪುರಸಭಾ ಸದಸ್ಯ ಶಶಿಕುಮಾರ್, ವಿ. ಗೋಪಾಲಕೃಷ್ಣ ಭಾಗವಹಿಸಿದ್ದು ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್ ಹೂವಿನ ಪಲ್ಲಕ್ಕಿ ಉತ್ಸವದ ಸೇವೆ ಮಾಡಿದರು.  ಜಾತ್ರೆ ಅಂಗವಾಗಿ ಪಟ್ಟಣದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಿಸಿದ್ದರು. ಶುಕ್ರವಾರ ವಿಶೇಷ ಪೂಜಾಗಳೊಂದಿಗೆ ಸಾರ್ವಜನಿಕ ದಾಸೋಹ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.