ಗುತ್ತಿಗೆದಾರರ ಸಂಘಕ್ಕೆ ಆಯ್ಕೆ
ರಾಮನಗರ: ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಮನಗರ ತಾಲೂಕು ಸಂಘದ ಅಧ್ಯಕ್ಷರಾಗಿ ಸಿ.ರಾಮಕೃಷ್ಣ ಆಯ್ಕೆಯಾಗಿದ್ದಾರೆ.
ಸಂಘದ ರಾಜ್ಯಾಧ್ಯಕ್ಷ ಕೃಷ್ಣ, ಜಿಲ್ಲಾಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ರಾಮು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಅಬ್ದುಲ್ ವಜೀದ್, ಕೆ.ಟಿ.ವಿಜಯ್, ಕಾರ್ಯದರ್ಶಿಯಾಗಿ ಎನ್.ಫೈರೋಜ್, ಸಹ ಕಾರ್ಯದರ್ಶಿಯಾಗಿ ಟಿ.ಫ್ರಾನ್ಸಿಸ್, ಖಜಾಂಚಿಯಾಗಿ ಎಚ್.ರಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ರೇಣುಕಾ, ಗೌರವ ಅಧ್ಯಕ್ಷರಾಗಿ ಎಚ್.ಪಿ.ದೊರೆಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ. ನೋಟರಿ ಹುದ್ದೆ ಭರ್ತಿಗೆ ಅರ್ಜಿ
ರಾಮನಗರ: ಚನ್ನಪಟ್ಟಣ ಕಂದಾಯ ತಾಲೂಕಿನಲ್ಲಿ ಖಾಲಿ ಇರುವ ನೋಟರಿ ಹುದ್ದೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ 10 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು, ಮಹಿಳೆಯರು ಕನಿಷ್ಠ 7 ವರ್ಷ ವಕೀಲರಾಗಿ ಸೇವೆ ಸಲ್ಲಿಸಿರಬೇಕು ಅಥವಾ ಕೇಂದ್ರ ಸರ್ಕಾರದ ಭಾರತೀಯ ಕಾನೂನು ಸೇವೆಯಲ್ಲಿ ಸದಸ್ಯರಾಗಿರಬೇಕು ಅಥವಾ ಕನಿಷ್ಠ 10 ವರ್ಷ ನ್ಯಾಯಾಂಗ ಸೇವೆಯಲ್ಲಿರಬೇಕು ಅಥವಾ ವಕೀಲರಾಗಿ ನೋಂದಣಿಯಾದ ನಂತರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಾನೂನು ವಿಭಾಗದಲ್ಲಿ ಕಾರ್ಯ ನಿರ್ವಹಿಸಿರಬೇಕು ಅಥವಾ ನ್ಯಾಯಾಧೀಶ, ಅಡ್ವೋಕೇಟ್ ಜನರಲ್ ಕಚೇರಿ ಅಥವಾ ಯಾವುದೇ ರಕ್ಷಣಾ ಪಡೆ ಕಾನೂನು ವಿಭಾಗದಲ್ಲಿ ಸೇವೆ ಸಲ್ಲಿಸಿರಬೇಕು. ನಿಗದಿಪಡಿಸಿದ ಅರ್ಜಿ ನಮೂನೆ ಫಾರಂ 1 ಮೆಮೋರಿಯಲ್ ರೂಲ್ 4(2)ನ್ನು ರಾಮನಗರ ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ.5ರೊಳಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇವರಿಗೆ ಸಲ್ಲಿಸಬಹುದು.
ನರೇಗಾ ಯೋಜನೆಯಡಿ 165 ಲಕ್ಷ ಗಿಡ ನೆಡಲು ಸೂಚನೆ
ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಖಾಲಿಯಿರುವ ಸರ್ಕಾರಿ ಜಾಗಗಳಲ್ಲಿ ಹಾಗೂ ರೈತರ ಭೂಮಿಗಳಲ್ಲಿ ಒಟ್ಟಾರೆ 165 ಲಕ್ಷ ಗಿಡಗಳನ್ನು ನೆಡುವಂತೆ ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಜಿಲ್ಲಾ ಪಂಚಾಯಿತಿಗೆ ಸೂಚಿಸಿದೆ. ಮುಂಗಾರು ಚುರುಕಾಗಿರುವುದರಿಂದ ತ್ವರಿತವಾಗಿ ಗಿಡಗಳನ್ನು ನೆಡಬೇಕು. ಈ ಕಾರ್ಯಕ್ಕೆ ಅರಣ್ಯ, ಶಿಕ್ಷಣ ಸೇರಿದಂತೆ ಇನ್ನಿತರೆ ಇಲಾಖೆಗಳನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಗ್ರಾಮೀಣ ಭಾಗದಲ್ಲಿರುವ ಶಾಲಾ-ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆವರಣ ಗೋಡೆ ಇರುವ ಜಾಗಗಳಲ್ಲಿ ಆದ್ಯತೆ ಮೇರೆಗೆ ಗಿಡಗಳನ್ನು ನೆಡಲು ನರೇಗಾ ಮಾರ್ಗಸೂಚಿ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ನರೇಗಾ ಯೋಜನೆಯಡಿ ಕಾಮಗಾರಿಗಳ ಸ್ಥಳಗಳನ್ನು ಆಯ್ಕೆ ಮಾಡಿಸಿ, ಗ್ರಾಮ ಸಭಾ ಹಾಗೂ ಜಿ.ಪಂ. ಅನುಮೋದನೆ ಮಾಡಿ, ಕಾಮಗಾರಿಗಳಿಗೆ ಚಾಲನೆ ನೀಡಿ, ಉದ್ಯೋಗ ಚೀಟಿ ಇರುವ ಕೂಲಿಗಾರರ ಮೂಲಕ ಗುಂಡಿಗಳನ್ನು ತೆಗೆಸಿ, ಕೂಡಲೇ ಗಿಡಗಳನ್ನು ನೆಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಶಾಲಾ-ಕಾಲೇಜುಗಳು ಅಥವಾ ಇಲಾಖೆಗಳು ಅವರೇ ಗುಂಡಿ ತೆಗೆದು ಗಿಡಗಳನ್ನು ನೆಟ್ಟು, ಪೋಷಿಸಿಸಲು ಮುಂದೆ ಬರುತ್ತಾರೋ ಅಂತವರಿಗೆ ನರೇಗಾ ಯೋಜನೆಯಡಿಯಲ್ಲಿ ಬೆಳೆಸಿರುವ ಸೂಕ್ತ ಸಸಿಗಳನ್ನು ಒದಗಿಸಲು ಕ್ರಮ ಕೈಗೊಂಡು, ವರದಿ ನೀಡುವಂತೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ತಿಳಿಸಿದೆ.
ಮಹಿಳಾ ಪಾಲಿಟೆಕ್ನಿಕ್ಗೆ ಅರ್ಜಿ
ರಾಮನಗರ: ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2014-15ನೇ ಸಾಲಿನಲ್ಲಿ ಭರ್ತಿಯಾಗದೆ ಉಳಿದಿರುವ ಖಾಲಿ ಸೀಟುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಪಡೆಯಲು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಜು.26ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಶುಲ್ಕ ಸಾಮಾನ್ಯ ವರ್ಗದವರಿಗೆ ರು.100 ಹಾಗೂ ಎಸ್.ಸಿ., ಎಸ್.ಟಿ., ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರು.50 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಲ್ಲಿ ಪಾವತಿಸಿ ಚಲನ್ ಪಡೆಯುವುದು.ಜು.30ರ ಬೆಳಗ್ಗೆ 9ಕ್ಕೆ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ದೂ: 080-22356949 ಹಾಗೂ ಇಲಾಖೆಯ ವೆಬ್ಸೈಟ್ ಸಂಪರ್ಕಿಸಬಹುದು.
ಕಾರ್ಮಿಕರ ದರಪಟ್ಟಿ ಆಹ್ವಾನ
ರಾಮನಗರ: ಚನ್ನಪಟ್ಟಣದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಯಲ್ಲಿ 2014-15ನೇ ಸಾಲಿಗೆ 11 ಲಕ್ಷ ಮಿಶ್ರತಳಿ ಮತ್ತು 5 ಲಕ್ಷ ದ್ವಿತಳಿ ರೇಷ್ಮೆ ಮೊಟ್ಟೆಗಳ ಉತ್ಪಾದನಾ ಗುರಿ ಹೊಂದಿದೆ. ಬಿತ್ತನೆ ಕೋಠಿಯಲ್ಲಿ ಗೂಡಿನ ತುದಿ ಕತ್ತರಿಸುವುದು, ಸೋಂಕು ನಿವಾರಣೆ, ತುರ್ತು ಚಿಟ್ಟೆ ಕೆಲಸ ನಿರ್ವಹಣೆ, ಕೋಶ ಮತ್ತು ಚಿಟ್ಟೆ ಪರೀಕ್ಷೆ ಹಾಗೂ ದ್ವಿತಳಿ ಮೊಟ್ಟೆಗಳ ಆಮ್ಲೋಪಚಾರ ಮುಂತಾದ ಕೆಲಸಗಳನ್ನು ನಿರ್ವಹಿಸಲು ಕಾರ್ಯಾಧಾರಿತ ದರಗಳ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸಲು ದರಪಟ್ಟಿ ಆಹ್ವಾನಿಸಲಾಗಿದೆ. ದರಪಟ್ಟಿಯನ್ನು ಜು.31ರರೊಳಗೆ ಸಲ್ಲಿಸತಕ್ಕದ್ದು. ಮಾಹಿತಿಗೆ ರೇಷ್ಮೆ ಕೃಷಿ ಉಪ ನಿರ್ದೇಶಕರು, ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ, ಚನ್ನಪಟ್ಟಣ ಸಂಪರ್ಕಿಸಬಹುದು.
ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ
ರಾಮನಗರ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2014-15ನೇ ಸಾಲಿನಲ್ಲಿ ಜಿಲ್ಲೆಯ ಹಿಂದುಳಿದ ಪ್ರವರ್ಗ-1, 2ಎ, 3ಎ, ಮತ್ತು 3 ಬಿಗೆ ಸೇರಿದ ಹಾಗೂ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಂದ ನ್ಯಾಯಾಂಗ ಆಡಳಿತದಲ್ಲಿ 4 ವರ್ಷಗಳ ಅವಧಿಯ ತರಬೇತಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 2ನೇ ಮಹಡಿ, ಪಂಚಾಯತ್ಭ್ವನ, ಬಿ.ಎಂ.ರಸ್ತೆ, ರಾಮನಗರ ಈ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜು.30ರೊಳಗೆ ಸದರಿ ಕಚೇರಿಗೆ ಸಲ್ಲಿಸುವುದು.
ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಅರಿವು
ನೆಲಮಂಗಲ: ಮಹಿಳೆ ಮತ್ತು ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರಗಳ ವಿವಿಧ ರೂಪಗಳನ್ನು ವಿವರಿಸಿ ಅದಕ್ಕಿರುವ ಕಾನೂನಿನ ರಕ್ಷಣೆಯನ್ನು ವಿವಿಧ ಕಲಂಗಳ ಮತ್ತು ಶಿಕ್ಷೆಯ ಸ್ವರೂಪದ ಬಗ್ಗೆ ಸಬ್ ಇನ್ಸ್ಪೆಕ್ಟರ್ ಎಂ.ಬಿ. ನವೀನ್ ಕುಮಾರ್ ತಿಳಿಸಿದರು.
ಇಂಥ ಸಂದರ್ಭಗಳು ಘಟಿಸಿದ ತಕ್ಷಣ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಬಗ್ಗೆ ತಿಳಿಸಿದರು.
ಅವರು ಮಂಗಳವಾರ ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಹಿಳಾ ದೌರ್ಜನ್ಯದ ವಿರುದ್ಧ ಕಾನೂನು ಕ್ರಮದ ಬಗ್ಗೆ ರಾಷ್ಟ್ರೀಯ ಸೇವಾ ಯೋಜನೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನುಗಳ ಅರಿವು ಮೂಡಿಸಿದ ಅವರು ಮೊಬೈಲ್ ಬಳಕೆಯನ್ನು ವಿಶೇಷವಾಗಿ ವಿದ್ಯಾರ್ಥಿನಿಯರು ಸಂಪೂರ್ಣವಾಗಿ ನಿಯಂತ್ರಿಸಬೇಕು, ಅಸುರಕ್ಷಿತ ಸ್ಥಳಗಳಲ್ಲಿ ಒಬ್ಬಂಟಿಗರಾಗಿ ತಿರುಗಾಡಬಾರದು, ಸಾಮಾಜಿಕ ಜಾಲತಾಣಗಳನ್ನು ಅಗತ್ಯತೆಯನ್ನು ಅರಿತು ಬಳಸಬೇಕು. ಶಾಲಾ ಕಾಲೇಜುಗಳಲ್ಲಿ ಯಾರಿಂದಾದರು ಕಿರುಕುಳ, ಮಾನಸಿಕ ಹಿಂಸೆ ನಡೆದರೆ ಪೊಲೀಸರಿಗೆ ಮಾಹಿತಿ ನೀಡಲು ತಿಳಿಸಿ, ಇಲಾಖೆ ಎಲ್ಲ ಅಧಿಕಾರಿಗಳ ದೂರವಾಣಿ ಸಂಖ್ಯೆ ಹೊಂದಿರುವ ಬಿತ್ತಿ ಪತ್ರ ನೀಡಿದರು.
ವಿವೇಕಾನಂದರ ಕಿರು ಪುಸ್ತಕವನ್ನು ಯೋಜನಾಧಿಕಾರಿ ಮಧುಸೂದನ್ ವಿತರಿಸಿ ಪ್ರಪಂಚ ದೊಡ್ಡ ಗರಡಿ ಮನೆ, ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ, ನಮ್ಮನ್ನು ನಾವು ಜಯಿಸಿದಾಗ ಇಡೀ ಜಗತ್ತು ನಮ್ಮದಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

