ಬೆಂಗಳೂರು ಗ್ರಾಮಾಂತರ

ಕಡತ ರಕ್ಷಣೆಗೆ ಪೊಲೀಸ್ ಬಂದೋಬಸ್ತ್

Published On :

ರಾಮನಗರ: ಇಲ್ಲಿನ ನಗರಸಭೆಯಲ್ಲಿ ಅಕ್ರಮ ಖಾತೆಗಳಿಗೆ ಸಂಬಂಧಿಸಿದ ತನಿಖೆ ಪೂರ್ಣಗೊಳ್ಳುವವರೆಗೆ ಖಾತಾ ವಹಿಗಳು ಮತ್ತು ಪ್ರಮುಖ ಕಡತಗಳ ರಕ್ಷಣೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಜೆಡಿಎಸ್ ಪುರಪಿತೃಗಳ ನಿಯೋಗ ಒತ್ತಾಯಿಸಿದೆ.
ಈ ಸಂಬಂಧ ಜೆಡಿಎಸ್ 10 ಸದಸ್ಯರು ಸಹಿ ಹಾಕಿದ ಲಿಖಿತ ಮನವಿಯನ್ನು ಖುದ್ದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರಿಗೆ ಬುಧವಾರ ಸಲ್ಲಿಸಿದ್ದು, ಕಡತಗಳಿಗೆ ಬೆಂಕಿ ಹಚ್ಚಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದಿನ ಆಯುಕ್ತ ಯಶವಂತ ಕುಮಾರ್ ಅವರು ಈಗಾಗಲೇ ಹಗರಣ ಸಂಬಂಧ ಪ್ರಾಥಮಿಕ ಹಂತದ ತನಿಖಾ ವರದಿ ಸಲ್ಲಿಸಿದ್ದು, ಸಮಗ್ರ ತನಿಖೆ ಕೈಗೆತ್ತಿಕೊಂಡಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶೈಲಜಾ ಅವರು ಖಾತಾ ವಹಿ ಮತ್ತು ಕಡತಗಳನ್ನು ಆಯುಕ್ತರ ಸುಪರ್ದಿಗೆ ನೀಡಿದ್ದಾರೆ.
ಮತೀಯ ಗೂಂಡಾ: ನಗರಸಭೆ ಅಧ್ಯಕ್ಷ ಆರೀಫ್ ಖುರೇಷಿ ಅವರು ಮತೀಯ ಗೂಂಡಾ ಪಟ್ಟಿಯಲ್ಲಿರುವ ವ್ಯಕ್ತಿ ಎನ್ನುವ ಬಗ್ಗೆ ಪೊಲೀಸ್ ಅಧಿಕಾರಿ ನೀಡಿರುವ ಹಿಂಬರಹದ ಪ್ರತಿಯನ್ನು ಮನವಿ ಪತ್ರದೊಂದಿಗೆ ಜೆಡಿಎಸ್ ಪುರಪಿತೃಗಳು ಲಗತ್ತಿಸಿದ್ದಾರೆ.
ಇಂತಹ ಹಿನ್ನೆಲೆಯುಳ್ಳ ಆರೀಫ್ ಖುರೇಷಿ ಈಚೆಗೆ ತಮ್ಮ ಬಣ್ಣ ಬಯಲಾಗುತ್ತಲೇ ಬೆಂಬಲಿಗರು ಮತ್ತು ದಲ್ಲಾಳಿಗಳನ್ನು ಆಯುಕ್ತರ ಕಚೇರಿಗೆ ನುಗ್ಗಿಸಿ ದಬ್ಬಾಳಿಕೆ ನಡೆಸಿದ್ದು, ಸಿಬ್ಬಂದಿ ಮೇಲೂ ಗಲಾಟೆ ಮಾಡಿಸಿರುತ್ತಾರೆ ಎಂದು ಉದಾಹರಿಸಿದ್ದಾರೆ.
 ಆಯುಕ್ತರ ಕಚೇರಿಗೆ ಖಾಸಗಿ ವ್ಯಕ್ತಿ ಅಶ್ವಿನ್ ಎಂಬುವವರನ್ನು ಅನುಮತಿ ಇಲ್ಲದೆ ಆಯುಕ್ತರ ಕಚೇರಿಗೆ ಕರೆದೊಯ್ದು ತಮ್ಮಿಂದ ಕಳುಹಿಸಲ್ಪಟ್ಟ ವ್ಯಕ್ತಿಗಳ ದಬ್ಬಾಳಿಕೆಯು ಸಿಸಿ ಕ್ಯಾಮೆರಾದಲ್ಲಿ ಚಿತ್ರೀಕರಣವಾಗಿದ್ದನ್ನು ಅಳಿಸಿ ಹಾಕುವ ಪ್ರಯತ್ನಕ್ಕೂ ಕೈ ಹಾಕಿದ್ದರ ಬಗ್ಗೆಯೂ ದೂರಿದ್ದಾರೆ.
ಸಕಾರಾತ್ಮಕ ಸ್ಪಂದನೆ: ತಮ್ಮ ಮನವಿ ಸ್ವೀಕರಿಸಿ, ದೂರು ಆಲಿಸಿದ ಜಿಲ್ಲಾಧಿಕಾರಿ ಜಮಾದಾರ್ ಅವರು ಖಾತಾವಹಿ ಹಾಗೂ ಪ್ರಮುಖ ಕಡತಗಳಿಗೆ ರಕ್ಷಣೆ ನೀಡುವ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೆಡಿಎಸ್  ಪುರಪಿತೃಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಅಂತೆಯೇ ಖಾತಾ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಭಾವಿಗಳು ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದಲ್ಲಿ ಇದ್ದರೂ ಸರಿಯೇ ಅವರ ವಿರುದ್ಧ ಕ್ರಮ ಜರುಗಿಸಬೇಕು. ಈ ವಿಷಯದಲ್ಲಿ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 ಒಮನವಿ ಪತ್ರಕ್ಕೆ ಜೆಡಿಎಸ್ ಪುರಪಿತೃಗಳಾದ ಎ.ರವಿ, ಆರ್.ಎ. ಮಂಜುನಾಥ್, ಗ್ಯಾಬ್ರಿಯಲ್‌ಪವೇಜ್ ಪಾಷ, ಎನ್.ರಾಧ, ಇಂದ್ರಮ್ಮ, ಶಬಾನಾ ಬಾನು, ಸೈಯಿದಾ ಪರ್ವೀನ್ ತಾನ್, ಹಸೀನಾ ಬಾನು ಸಹಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.