ನಗರಸಭೆ ವ್ಯಾಪ್ತಿ ಮೀರಿ ರಸ್ತೆ ನಿರ್ಮಾಣ
ಮತ್ತೀಕೆರೆ ಜಯರಾಮ್
ರಾಮನಗರ: ತಮ್ಮದೇ ಸ್ವಂತ ಆಸ್ತಿಗೆ ಅಕ್ರಮ ಖಾತೆ ಮಾಡಿಸಿಕೊಂಡ ಆರೋಪಕ್ಕೆ ಗುರಿಯಾಗಿರುವ ನಗರಸಭೆ ಅಧ್ಯಕ್ಷ ಆರೀಫ್ ಖುರೇಷಿ ಇದೀಗ ಸ್ವಹಿತಾಸಕ್ತಿಗಾಗಿ ನಗರಸಭೆ ವ್ಯಾಪ್ತಿಗೆ ಸೇರದ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಹಣಕಾಸು ಮಂಜೂರಾತಿ ಒದಗಿಸಿ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ಎಸ್.ಎಫ್.ಸಿ. ಮುಕ್ತನಿಧಿ ಮತ್ತು 13ನೇ ಹಣಕಾಸು ನಿಧಿ ಸೇರಿದಂತೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜು.19 ರಂದು ತುರ್ತು ಸಭೆ ನಡೆಸಿದ ಅಧ್ಯಕ್ಷರು, ನಗರಸಭೆ ವ್ಯಾಪ್ತಿಯಲ್ಲದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಅನುಷ್ಠಾನಕ್ಕೆ ಅನುಮೋದನೆ ಪಡೆದು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜೆಡಿಎಸ್ ಪುರಪಿತೃಗಳ ಕೋಲಾಹಲ, ಸಭಾತ್ಯಾಗದ ನಡುವೆ ನಡೆದಿದ್ದ ಸಭೆಯಲ್ಲಿ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಅನುಮೋದನೆ ನೀಡಿದ ಕಾಂಗ್ರೆಸ್ ಪುರಪಿತೃಗಳು ಈಗ ಯು ಟರ್ನ್ ತೆಗೆದುಕೊಂಡು, ಅಧ್ಯಕ್ಷರ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ.
ಸುತ್ತಿಕೊಂಡ ವಿವಾದ: ರಾಮನಗರ ನಗರಸಭೆಗೆ 2013-14, 2014-15ನೇ ಸಾಲಿಗೆ ಎಸ್.ಎಫ್.ಸಿ. ಮುಕ್ತನಿಧಿ, 13ನೇ ಹಣಕಾಸು ನಿಧಿ, ಶೇಕಡ 22.75, ಶೇಕಡ 7.25 ಸೇರಿದಂತೆ ವಿವಿಧ ಲೆಕ್ಕಶೀರ್ಷಿಕೆಗಳ ಅನುದಾನದಡಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ, ಅಂದಿನ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು.
ಈ ಪೈಕಿ ಅಧ್ಯಕ್ಷ ಆರೀಫ್ ಖುರೇಷಿ ಅವರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಆಗದಿರುವ ಕೈಲಾಂಚ ಹೋಬಳಿಯ ಶಿಡ್ಲಕಲ್ಲು ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರಿಸಿ, ಅದಕ್ಕೂ ಅನುಮೋದನೆ ಪಡೆದುಕೊಂಡಿರುವುದನ್ನು ಸ್ವಪಕ್ಷೀಯ ಪುರಪಿತೃಗಳೇ ಪತ್ತೆ ಹಚ್ಚಿದ್ದಾರೆ.
ಆ ಪ್ರದೇಶದಲ್ಲಿ ಆರೀಫ್ ಖುರೇಷಿ ಅವರ ಸ್ವಂತ ಆಸ್ತಿ ಇದ್ದು, ಅದಕ್ಕೆ ಅನುಕೂಲ ಮಾಡಿಕೊಳ್ಳುವ ಸಲುವಾಗಿ ಅವರು ನಗರಸಭೆ ವ್ಯಾಪ್ತಿಯನ್ನೂ ಮೀರಿದ ರಸ್ತೆ ಕಾಮಗಾರಿಗೆ ಅನುಮೋದನೆ ಪಡೆದಿರುವ ಅಂಶವನ್ನು ಮನಗಂಡಿರುವ ಕಾಂಗ್ರೆಸ್ ಪುರಪಿತೃಗಳು ಇದೀಗ ಆಯುಕ್ತರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ.
ಹುನ್ನಾರದ ಶಂಕೆ: ಕೋಲಾಹಲದ ನಡುವೆ ನಡೆದಿರುವ ಜು.19ರ ತುರ್ತು ಸಭೆಯ ವೇಳೆ ಅನುಮೋದನೆಯಾದ ಕ್ರಿಯಾ ಯೋಜನೆ ಪಟ್ಟಿಗೆ ಸಭೆಯಲ್ಲಿ ಪ್ರಸ್ತಾಪಕ್ಕೆ ಬಾರದಿದ್ದ ಸಾಕಷ್ಟು ಕಾಮಗಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು 13 ಮಂದಿ ಕಾಂಗ್ರೆಸ್ ಪುರಪಿತೃಗಳು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ವಿವಿಧ ಲೆಕ್ಕಶೀರ್ಷಿಕೆಗಳಡಿ ಬಿಡುಗಡೆ ಆಗಿರುವ ಅನುದಾನದ ಪೈಕಿ ಕೆಲವನ್ನಷ್ಟೇ ಸಭೆ ಗಮನಕ್ಕೆ ತರಲಾಗಿತ್ತು. ಉಳಿದವುಗಳನ್ನು ಗುಪ್ತವಾಗಿಟ್ಟು, ಇದೀಗ ಆ ನಿಧಿಯಡಿ ಸ್ವಹಿತಾಸಕ್ತಿಯ ಕಾಮಗಾರಿಗಳ ಅನುಷ್ಠಾನಕ್ಕೆ ಹುನ್ನಾರ ನಡೆದಿದೆ ಎನ್ನುವುದು ಆಡಳಿತಾರೂಢ ಕಾಂಗ್ರೆಸ್ ಪುರಪಿತೃಗಳನ್ನು ಕಾಡುತ್ತಿದೆ.
ಅಸಿಂಧುಗೆ ಆಗ್ರಹ: ಕ್ರಿಯಾ ಯೋಜನೆಯ ಸಮಗ್ರ ವಿವರವು ತುರ್ತು ಸಭೆಯ ಗಮನಕ್ಕೆ ಬಂದೇ ಇಲ್ಲ. ಹೀಗಾಗಿ ಕಾಮಗಾರಿಗಳಿಗೆ ಅನುಮೋದನೆ ದೊರೆತೇ ಇಲ್ಲವೆಂದೇ ಪರಿಗಣಿಸಬೇಕು. ಒಂದೊಮ್ಮೆ ಅನುಮೋದನೆ ಮಾಡಿಕೊಂಡಿದ್ದರೂ ಅದನ್ನು ನಿಯಮಬಾಹಿರ ಎಂದು ಪರಿಗಣಿಸಿ ಅಸಿಂಧುಗೊಳಿಸಬೇಕು ಎನ್ನುವುದು ಸ್ವತಃ ಕಾಂಗ್ರೆಸ್ ಪುರಪಿತೃಗಳ ಆಗ್ರಹವಾಗಿದೆ.
ಅಂತೆಯೇ ಸಮಗ್ರ ಕಾಮಗಾರಿಗಳ ಕ್ರಿಯಾ ಯೋಜನೆಗಳ ವಿವರಗಳನ್ನು ಎಲ್ಲ ಸದಸ್ಯರ ಗಮನಕ್ಕೆ ತಂದು, ಚರ್ಚಿಸುವ ಉದ್ದೇಶದಿಂದ ಮತ್ತೊಮ್ಮೆ ಕಾನೂನು ಬದ್ಧವಾಗಿ ಸಭೆ ಕರೆಯಬೇಕೆನ್ನುವ ಹಕ್ಕೊತ್ತಾಯವನ್ನು ಆಕ್ಷೇಪಣಾ ಪತ್ರದಲ್ಲಿ ಪುರಪಿತೃಗಳು ಆಗ್ರಹಿಸಿದ್ದಾರೆ. ಇದರೊಂದಿಗೆ ಆರೀಫ್ ಖುರೇಷಿ ಹಿಡನ್ ಅಜೆಂಡಾಕ್ಕೆ ಹಿನ್ನೆಡೆ ಉಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

