ಯುಜಿಸಿ ನೇಮಕ: ಸರ್ಕಾರದ ಕುರುಡು ನೀತಿ
ದೊಡ್ಡಬಳ್ಳಾಪುರ: ದಶಕಗಳೇ ಕಳೆದರೂ ಯುಜಿಸಿ ಉಪನ್ಯಾಸಕರ ನೇಮಕಾತಿ ಮಾಡದ ಸರ್ಕಾರದ ಕುರುಡು ನೀತಿಗಳಿಂದ ಶೈಕ್ಷಣಿಕ ಬೆಳವಣಿಗೆ ಹಳ್ಳ ಹಿಡಿದಿದೆ ಎಂದು ಮಾಜಿ ಶಾಸಕಿ ಮತ್ತು ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅಭಿಪ್ರಾಯಪಟ್ಟರು.
ಇಲ್ಲಿನ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1983ರ ನಂತರ ಯುಜಿಸಿ ಅಡಿಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನೇಮಕಾತಿ ಅನುಮತಿ ನೀಡಿಲ್ಲ. ಹೀಗಿರುವಾಗ ಪ್ರತಿಭಾವಂತರ ಪ್ರಯೋಜನಕ್ಕೆ ಬಾರದ ಯುಜಿಸಿಯನ್ನೇ ರದ್ದು ಮಾಡಲಿ. ನಮ್ಮ ಉಪನ್ಯಾಸಕರಿಗೂ ಯುಜಿಸಿ ವೇತನಶ್ರೇಣಿ ದೊರೆಯಬೇಕು. ಅನುದಾನಿತ ಸಂಸ್ಥೆಗಳಲ್ಲಿ ನೇಮಕಾತಿಗೆ ಆದೇಶ ನೀಡಬೇಕು. ಶಿಕ್ಷಣಕ್ಕೆ ಸರ್ಕಾರಗಳು ವಿನಿಯೋಗಿಸುತ್ತಿರುವ ಹಣದ ಪಾಲೆಷ್ಟು ಮತ್ತು ಅದರಲ್ಲಿ ಯಾವ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂಬುದನ್ನು ಗಮನಿಸಬೇಕು. ಲೋಪಗಳನ್ನು ಸರಿಪಡಿಸಿ ಸಮಗ್ರ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಹೆಣ್ಣು ಮಕ್ಕಳಿಗೆ ರಕ್ಷಣೆ ಎಲ್ಲಿ: ಜಗತ್ತಿನಾದ್ಯಂತ ಸ್ತ್ರೀಶೋಷಣೆ ಮಿತಿಮೀರಿದೆ. ಇರಾಕ್ನಲ್ಲಿ 40 ಸಾವಿರ ಹೆಣ್ಣು ಮಕ್ಕಳಿಗೆ ಸಂತಾನಶಕ್ತಿ ಹರಣ ಮಾಡುವ ಮಾರಕ ಕಾನೂನು ತರಲು ಹೊರಟಿರುವುದು ಖಂಡನೀಯ. ಇಂತಹ ಸಾಮಾಜಿಕ ಕಳಂಕಗಳ ವಿರುದ್ಧ ಯುದ್ಧಸಾರಬೇಕು. ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರಬಲ ಪ್ರತಿರೋಧ ವ್ಯಕ್ತವಾಗಬೇಕು. ಸರ್ಕಾರಗಳು ಮತ್ತು ಸಮುದಾಯ ಸಮಾನ ಹೊಣೆಗಾರಿಕೆಯಲ್ಲಿ ಈ ಬಗೆಯ ಪಿಡುಗುಗಳನ್ನು ಹತ್ತಿಕ್ಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅತ್ಯಾಚಾರ ಅನಾಚಾರಗಳ ಪ್ರತಿಬಂಧಕ ಕಾನೂನು ಪ್ರಬಲವಾಗಬೇಕು ಎಂದರು.
ಸಮಾನ ಶಿಕ್ಷಣ ಬೇಕುಣ ದೇಶದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಗೆ ಬರಬೇಕು. ಸಮಯೋಚಿತ ಆಲೋಚನೆ ಮತ್ತು ಸಂದರ್ಭೋಚಿತ ವರ್ತನೆಗಳನ್ನು ಪ್ರತಿನಿಧಿಸುವ ನೈತಿಕ ಶಿಕ್ಷಣ ಇಂದಿನ ಅನಿವಾರ್ಯ. ಸರ್ಕಾರ ಪ್ರತಿಯೊಬ್ಬ ಮಗುವಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕೊಡಬೇಕು. ಕೆಲವೆಡೆ ಸರ್ಕಾರ ಮಾಡದ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಿವೆ. ಅದನ್ನು ಪ್ರೋತ್ಸಾಹಿಸುವ ಹೊಣೆಗಾರಿಕೆ ಸರ್ಕಾರದ್ದು ಎಂದರು.
ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್. ಶಂಕರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೊಡ್ಡಬಳ್ಳಾಪುರ ಉಪವಿಭಾಗದ ಆರಕ್ಷಕ ಉಪಾಧೀಕ್ಷಕ ಟಿ.ಕೋನಪ್ಪರೆಡ್ಡಿ, ಕಾರ್ಯದರ್ಶಿ ಅಶ್ವತ್ಥಯ್ಯ, ಶ್ರೀನಿವಾಸಮೂರ್ತಿ, ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೇಜರ್ ಮಹಾಬಲೇಶ್ವರ್, ಉಪಪ್ರಾಂಶುಪಾಲರಾದ ಎಸ್. ರಾಜಲಕ್ಷ್ಮಿ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ. ಮಹದೇವ್, ಸೇರಿದಂತೆ ವಿದ್ಯಾ ಸಂಸ್ಥೆಯ ನಿರ್ದೇಶಕರು ಪದಾಧಿಕಾರಿಗಳು, ವಿವಿಧ ಘಟಕಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಉನ್ನತ ಶ್ರೇಣಿ ಪಡೆದು ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

