ಬೆಂಗಳೂರು ಗ್ರಾಮಾಂತರ

ಪ್ರತಿಭಟನೆ ಸ್ಥಳಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಗರೇನಹಳ್ಳಿ ಮತ್ತು ಹುಸ್ಕೂರು ಬಳಿ 2 ಮತ್ತು 3ನೇ ಹಂತದ ಬಿಬಿಎಂಪಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾವನೆ ವಿರುದ್ಧ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ್ ಶನಿವಾರ ಮಧ್ಯಾಹ್ನ ಭೇಟಿ ನೀಡಿದ್ದರು.
ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದ ಅವರು, ಈಗಾಗಲೇ ಸರ್ಕಾರದ ಹಂತದಲ್ಲಿ ಈ ಘಟಕಗಳ ಸ್ಥಾಪನೆ ಕುರಿತು ನಿರ್ಧಾರ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆ ಮತ್ತು ರದ್ಧತಿ ಸಾಧ್ಯವಾಗುವುದಿಲ್ಲ. ಇಲ್ಲಿನ ಜನರ ವ್ಯಾಪಕ ವಿರೋಧ ಮತ್ತು ಜನ ಮುಂದಿಟ್ಟಿರುವ ಸಮಸ್ಯೆಗಳು ಕುರಿತ ಸಮಗ್ರ ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರದ ಇಲಾಖಾ ಹಂತದ ಅಧಿಕಾರಿಗಳ ಗಮನಕ್ಕೆ ಸಮಗ್ರ ವಸ್ತುಸ್ಥಿತಿಯನ್ನು ತರುವ ಪ್ರಯತ್ನ ಮಾಡಲಾಗುವುದು. ಅಲ್ಲಿಯವರೆಗೆ ಜನ ಶಾಂತ ರೀತಿಯಿಂದ ವರ್ತಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ರಸ್ತೆಯಲ್ಲೇ ಪ್ರತಿಭಟನೆ ಮುಂದುವರೆಸಲು ತೀರ್ಮಾನಿಸಿದರು. ಮತ್ತೆ  ಮನವೊಲಿಕೆಗೆ ಮುಂದಾದ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ್, ಸದ್ಯಕ್ಕೆ ಹೊಸ ಘಟಕಗಳ ಕುರಿತ ಪ್ರಕ್ರಿಯೆ ಆರಂಭಿಸುವುದಿಲ್ಲ. ಈ ಬಗ್ಗೆ ಎಲ್ಲ ರೀತಿಯಿಂದಲೂ ಚರ್ಚಿಸಿ, ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ನಿರ್ಧಾರ ಕೈಗೊಳ್ಳವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ನಂತರ, ಹೆದ್ದಾರಿ ತಡೆ ಷರತ್ತುಬದ್ಧವಾಗಿ ಅಂತ್ಯವಾಯಿತು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಈಗ ಬಿಬಿಎಂಪಿ ಆಯುಕ್ತರು ನೀಡಿರುವ ಭರವಸೆ ಕೂಡಲೇ ಈಡೇರಬೇಕು. ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಮುಂದಿನ ತೀರ್ಮಾನ ಕೈಗೊಳ್ಳಬೇಕು. ತಪ್ಪಿದಲ್ಲಿ ವ್ಯಾಪಕ ಚಳವಳಿ ನಡೆಸಲಾಗುವುದು. ಸರ್ಕಾರವನ್ನು ಓಲೈಸುವುದು ಅವರ ಜವಾಬ್ದಾರಿ. ನಗರ ವ್ಯಾಪ್ತಿಯ ಕಸವನ್ನು ಅಲ್ಲೇ ವಿಲೇವಾರಿ ಮಾಡಿಕೊಳ್ಳಲು ವೈಜ್ಞಾನಿಕ ಕ್ರಮ ಅನುಸರಿಸಲಿ. ಅದಕ್ಕಾಗಿ ಬೃಹತ್ ಯೋಜನೆ ರೂಪಿಸಲಿ. ದೇಶದ ವಿವಿಧ ಮಹಾನಗರದಲ್ಲಿ ಯಶಸ್ವಿಯಾಗಿರುವ ಯೋಜನೆ ಬೆಂಗಳೂರಿನಲ್ಲೂ ಜಾರಿಗೆ ತರಲಿ. ಅದನ್ನು ಬಿಟ್ಟು ಜನರ ಬದುಕಿನೊಂದಿಗೆ ಚಲ್ಲಾಟವಾಡೋದು ಬೇಕಿಲ್ಲ ಎಂದರು. ಬೆಂ.ಗ್ರಾ.ಜಿಲ್ಲಾಧಿಕಾರಿ ಶಂಕರ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಹಲವಾರು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ರೈತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.