ಜಿಪಂ ಅಧ್ಯಕ್ಷ ಚುನಾವಣೆ ಮುಂದಕ್ಕೆ
ಟಿಮತ್ತೀಕೆರೆ ಜಯರಾಮ್
ರಾಮನಗರ: ಮೀಸಲು ನಿಗದಿ ವಿವಾದ ಹೈಕೋರ್ಟ್ ಮೆಟ್ಟಿಲೇರಿರುವ ಪರಿಣಾಮ ಜೂ.12ಕ್ಕೆ ನಡೆಯಬೇಕಿದ್ದ ಜಿ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಮುಂದೂಡಲ್ಪಟ್ಟಿದೆ. ಸ್ಥಾನಗಳ ಮೀಸಲು ಮತ್ತು ಚುನಾವಣೆ ದಿನ ನಿಗದಿ ಹೈಕೋರ್ಟ್ ಆದೇಶವನ್ನು ಅವಲಂಬಿಸಿದೆ.
ಜಿ.ಪಂ. ಪ್ರಸಕ್ತ ಅವಧಿಯ ಎರಡನೇ 20 ತಿಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಅಧಿಕಾರಾವಧಿ ಜೂ.16ಕ್ಕೆ ಅಂತ್ಯವಾಗಲಿದೆ. ಅಷ್ಟರಲ್ಲಿ ಚುನಾವಣೆ ನಡೆಸುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಂಗಾಮಿ ಅಧ್ಯಕ್ಷರ ನೇಮಕ ನಿಶ್ಚಿತವಾಗಿದೆ.
12ಕ್ಕೆ ವಿಚಾರಣೆ: ಮೀಸಲು ವಿವಾದದ ವಿಚಾರಣೆಯನ್ನು ಹೈಕೋರ್ಟ್ ಜೂ.12ಕ್ಕೆ ಮುಂದೂಡಿದ್ದು, ಅಂದು ಸರ್ಕಾರದ ಪರ ಮತ್ತು ಅರ್ಜಿದಾರರ ಪರ ವಕೀಲರು ವಾದ ಮಂಡಿಸಲಿದ್ದು, ಸಾಧ್ಯವಾದಲ್ಲಿ ಅದೇ ದಿನ ನ್ಯಾಯಾಧೀಶರು ಆದೇಶ ನೀಡುವ ಸಾಧ್ಯತೆ ಇದೆ. ಮೀಸಲು ನಿಗದಿ ಪ್ರಶ್ನಿಸಿ ರಿಟಟ್ಸಲ್ಲಿಸಿದ ನಡುವೆಯೂ 4 ಜಿ.ಪಂ.ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದೆಡೆ ಚುನಾವಣೆ ಮುಂದೂಡಲಾಗಿದ್ದು, ಸ್ಥಾನಾಕಾಂಕ್ಷಿಗಳ ಚಿತ್ತ ಹೈಕೋರ್ಟ್ ಆದೇಶದತ್ತ ನೆಟ್ಟಿದೆ. ಭವಿಷ್ಯ ನಿರ್ಧಾರ: ಒಂದೊಮ್ಮೆ ಹೈಕೋರ್ಟ್ ಮೀಸಲು ಪರಿಷ್ಕರಣೆಗೆ ಆದೇಶ ನೀಡಿದರೆ ಹಾಲಿ ನಿಗದಿಯಾದ ಮೀಸಲು ಬದಲಾಗುವ ಸಂಭವವಿದೆ. ಆಗ ಪ್ರಸ್ತುತ ನಿಗದಿಯಾಗಿರುವ ಮೀಸಲಿನಡಿ ಹುದ್ದೆಗೇರಲು ಲಾಬಿಯಲ್ಲಿ ತೊಡಗಿದವರಿಗೆ ನಿರಾಸೆಯಾಗಲಿದೆ. ಮೀಸಲು ಬದಲಾವಣೆ ಅಥವಾ ಹಾಲಿ ಇರುವ ಮೀಸಲು ಮುಂದುವರಿಕೆ ಈ ಎರಡರ ಪೈಕಿ ಯಾವುದೇ ತೀರ್ಪು ಹೊರ ಬಿದ್ದರೂ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲು ಕನಿಷ್ಠ 3 ವಾರವಾದರೂ ಕಾಲಾವಕಾಶ ಬೇಕಾಗುತ್ತದೆ.
ತಣ್ಣಗಾದ ಲಾಬಿ: ಮೀಸಲು ನಿಗದಿ ಪ್ರಕ್ರಿಯೆ ಬೆನ್ನಲ್ಲೇ ರಾಮನಗರ ಜಿ.ಪಂ.ನಲ್ಲಿ ಗದ್ದುಗೆಗಾಗಿ ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ಪ್ರಾರಂಭವಾಗಿತ್ತು. ಉಭಯ ಪಕ್ಷಗಳಲ್ಲೂ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿತ್ತು. ಜೆಡಿಎಸ್ ಒಡಕಿನ ಲಾಭ ಪಡೆದುಕೊಳ್ಳಲು ಹವಣಿಸಿರುವ ಕಾಂಗ್ರೆಸ್ ಜಿ.ಪಂ. ಚುಕ್ಕಾಣಿ ಕೈವಶ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಇಳಿದು, ಸದ್ದಿಲ್ಲದೆ ಕುದುರೆ ವ್ಯಾಪಾರವನ್ನೂ ನಡೆಸಿತ್ತು. ವಿವಾದ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಂತೆಯೇ ಲಾಬಿ ತಣ್ಣಗಾಗಿದೆ. ಅಸಾಮಾನ್ಯ ಹೋರಾಟ: ರಾಮನಗರದಂತಹ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವರಿಷ್ಠ ಸ್ಥಾನಗಳ ಮೀಸಲು ಸಾಮಾನ್ಯ ವರ್ಗಕ್ಕೆ ಮೀಸಲಾದಾಗ ಹೋರಾಟ ಅಸಾಮಾನ್ಯವೇ ಸರಿ. ಈ ಜಿ.ಪಂ.ನ ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಪ್ರಕಟಗೊಂಡಿತ್ತು.
ಜೆಡಿಎಸ್ ಪಡಸಾಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬರೋಬ್ಬರಿ ಅರ್ಧ ಡಜನ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರೆ, ಅಭ್ಯರ್ಥಿ ಬಿಂಬಿಸದ ಕಾಂಗ್ರೆಸ್ ಮುಖಂಡರು ಜೆಡಿಎಸ್ 3 ಸದಸ್ಯರಿಗೆ ಗಾಳ ಹಾಕಿದ್ದು ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ.
ಸದಸ್ಯತ್ವ ವಿವಾದ
ಕೂಟಗಲ್ ಕ್ಷೇತ್ರದ ಸದಸ್ಯತ್ವ ವಿಷಯವಾಗಿ ಮಂಜುಳಾ ಮರಿದೇವರು ಮತ್ತು ಸುಮಿತ್ರಮ್ಮ ನಡುವಣ ವಿವಾದವೂ ಹೈಕೋರ್ಟ್ನಲ್ಲಿ ಜೂ.16ಕ್ಕೆ ವಿಚಾರಣೆಗೆ ಬರಲಿದೆ. ಹೈಕೋರ್ಟ್ ನೀಡಿರುವ ಆದೇಶಾನುಸಾರ ಸದ್ಯ ಅವರಿಬ್ಬರೂ ಮತದಾನ ಹಕ್ಕು ವಂಚಿತರಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಯಾಗಲು ಅವಕಾಶದ ಜತೆಗೆ ಮತದಾನದ ಹಕ್ಕು ಕಲ್ಪಿಸುವಂತೆ ಮಂಜುಳಾ ಮರಿದೇವರು, ಮತದಾನ ಹಕ್ಕಿಗಾಗಿ ಸುಮಿತ್ರಮ್ಮ ಅವರು ಸಲ್ಲಿಸಿರುವ ಹೆಚ್ಚುವರಿ ಅರ್ಜಿ ಸಲ್ಲಿಸಿದ್ದಾರೆ.
ನಿರ್ಗಮನಕ್ಕೆ ಸಜ್ಜು
ರಾಮನಗರ ಜಿ.ಪಂ.ನಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಎಚ್.ಸಿ.ರಾಜು ಮತ್ತು ಉಪಾಧ್ಯಕ್ಷರಾಗಿ ಎಸ್.ಬಿ.ಗೌರಮ್ಮ ಇದ್ದಾರೆ. ಇವರ ಅಧಿಕಾರಾವಧಿ ಜೂ.16ಕ್ಕೆ ಅಂತ್ಯಗೊಳ್ಳಲಿದ್ದು, ಹುದ್ದೆಯಿಂದ ನಿರ್ಗಮಿಸಲಿದ್ದಾರೆ. 22 ಸದಸ್ಯ ಬಲದ ಜಿ.ಪಂ.ನಲ್ಲಿ ಕೂಟಗಲ್ ಕ್ಷೇತ್ರದ ಸದಸ್ಯತ್ವ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಉಳಿದಂತೆ 21 ಸದಸ್ಯರ ಪೈಕಿ ಜೆಡಿಎಸ್ 12 ಮತ್ತು ಕಾಂಗ್ರೆಸ್ 9 ಸದಸ್ಯರನ್ನು ಹೊಂದಿವೆ. ಬಹುಮತವಿದ್ದರೂ ಜೆಡಿಎಸ್ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

