'ಕಾವೇರಿ-ಕಣ್ವ ಯೋಜನೆ ಶೀಘ್ರ ಜಾರಿಗೆ'
ಕ.ಪ್ರ.ವಾರ್ತೆ ರಾಮನಗರ ಜೂ.12
ಚನ್ನಪಟ್ಟಣ ತಾಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ಕಾವೇರಿ-ಕಣ್ವ ಸಂಗಮ ಏತ ನೀರಾವರಿ ಯೋಜನೆಗೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಉದ್ಘಾಟನೆ ಭಾಗ್ಯ ಕೂಡ ಬರಲಿದೆ. ಈ ವಿಷಯವನ್ನು ಯೋಜನೆಯ ರೂವಾರಿಯೂ ಆದ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಮತ್ತು ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೂಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಯೋಜನೆಯನ್ನು ಆಗಸ್ಟ್ 15ರಂದೇ ಉದ್ಘಾಟಿಸಿ, ಯೋಜನೆ ವ್ಯಾಪ್ತಿಗೆ ಒಳಪಟ್ಟ ಕಣ್ವ ಜಲಾಶಯ ಮತ್ತು 17 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿತ್ತು. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೋರಿಕೆಯಂತೆ ಒಂದು ತಿಂಗಳು ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.
70ರಷ್ಟು ಕಾಮಗಾರಿ ಪೂರ್ಣ: ಏತ ನೀರಾವರಿ ಯೋಜನೆಯಡಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದೆ. ಅರಣ್ಯ ಪ್ರದೇಶದಲ್ಲಿ ಪೈಪ್ ಅಳವಡಿಕೆಗೆ ಅನುಮತಿ ದೊರೆತಿದ್ದು, ಶೀಘ್ರವೇ ಉಳಿಕೆ ಕಾಮಗಾರಿಯೂ ಮುಗಿಯಲಿದೆ ಎಂದು ಶಾಸಕ ಯೋಗೇಶ್ವರ್ ತಿಳಿಸಿದರು.
ಏತ ನೀರಾವರಿ ಯೋಜನೆಯ ಪ್ರಾರಂಭಿಕ ಹಂತವಾಗಿರುವ ಇಗ್ಗಲೂರು ಡ್ಯಾಂ ಬಳಿ ಪಂಪ್ ಹೌಸ್ ಕಾಮಗಾರಿಯೂ ತ್ವರಿತವಾಗಿ ನಡೆಯುತ್ತಿದೆ. ಯೋಜನೆಯ ಶೀಘ್ರ ಪ್ರಾರಂಭಕ್ಕೆ ಅನುಕೂಲವಾಗುವಂತೆ ಇನ್ನಷ್ಟು ವೇಗವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
2 ದಿನದಲ್ಲಿ ಕಾಮಗಾರಿ : ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ರೇಲ್ವೆ ಮಾರ್ಗದಲ್ಲಿ ಮುದುಗೆರೆ ಬಳಿ ಕ್ರಾಸಿಂಗ್ಪೈಪ್ಲೈನ್ ಜೋಡಣೆಗಾಗಿ ಕೆ.ಆರ್.ಡಿ.ಸಿ.ಎಲ್. ಮತ್ತು ರೇಲ್ವೆ ಇಲಾಖೆಗೆ ಹಣ ಪಾವತಿಸಿದ್ದು, ಇನ್ನೆರಡು ದಿನದಲ್ಲಿ ಆ ಕಾಮಗಾರಿಯೂ ಪ್ರಾರಂಭವಾಗಲಿದೆ ಎಂದು ಯೋಗೇಶ್ವರ್ ಹೇಳಿದರು. ರೇಲ್ವೆ ಇಲಾಖೆ ಮಾರ್ಗಸೂಚಿಯಂತೆ ಹಳಿಗಳ ಕೆಳಗೆ ವಿಶೇಷ ಪೈಪ್ಲೈನ್ ಅಳವಡಿಕೆಯಾಗಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸಕಾರಾತ್ಮಕ ಸ್ಪಂದನೆ: ಯೋಜನೆಗೆ ಅಗತ್ಯವಾದ ವಿದ್ಯುತ್ ಉಪ ಕೇಂದ್ರ ಸ್ಧಾಪನೆ, ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತುರ್ತು ಆದ್ಯತೆಯನ್ನಾಗಿ ಪರಿಗಣಿಸಿ ಕಾಮಗಾರಿ ಪ್ರಾರಂಭಕ್ಕೆ ಅನುಮೋದನೆ ದೊರೆತಿದೆ ಎಂದು ಯೋಗೇಶ್ವರ್ ತಿಳಿಸಿದರು.
ಅಳವಡಿಕೆ: ಹೊಂಗನೂರು, ಕೋಡಂಬಹಳ್ಳಿ, ಸೋಗಾಲ, ಇಗ್ಗಲೂರು, ಗರಕಹಳ್ಳಿ, ಕೃಷ್ಣಾಪುರ ಕೆರೆಗಳಿಗೆ ಪೈಪ್ ಲೈನ್ ಅಳವಡಿಕೆ ಕಾಮಗಾರಿ ತೃಪ್ತಿಕರವಾಗಿದೆ. ಮಾರ್ಗ ಮಧ್ಯೆ ಸಿಗುವ ಯೋಜನೆಗೆ ಒಳಪಡದ ಕೆರೆಗಳಿಗೂ ಹೆಚ್ಚುವರಿ ಪೈಪ್ ಲೈನ್ ಅಳವಡಿಸಬೇಕು ಎನ್ನುವ ಸಾರ್ವಜನಿಕರ ಕೋರಿಕೆಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಮ್ಮತಿಸಿದ್ದಾರೆ ಎಂದು ಅವರು ಹೇಳಿದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಧಾಪಕ ನಿರ್ದೇಶಕ ಜಯಪ್ರಕಾಶ್, ಮುಖ್ಯ ಎಂಜಿನಿಯರ್ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಶಂಕರೇಗೌಡ, ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಂಕರ್, ಸಹಾಯಕ ಎಂಜಿನಿಯರ್ ವೆಂಕಟೇಗೌಡ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

