ಬೆಂಗಳೂರು ಗ್ರಾಮಾಂತರ

ಮೊದ್ಲು ವಿದ್ಯುತ್ ಸಮಸ್ಯೆ ಬಗೆಹರಿಸಿ

Published On :

ಮಾಗಡಿ: ಇನ್ನೊಂದು ವಾರದೊಳಗೆ ಮಾಡಬಾಳ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ, ಎಂಜಿನಿಯರ್ ವಿರುದ್ಧ ಶಿಸ್ತಿ ಕ್ರಮ ಜರುಗಿಸುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಬೆಸ್ಕಾಂ ಎಂಜಿನಿಯರ್ ಅವರಿಗೆ ಗಡುವು ನೀಡಿದರು.
 ಅವರು ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಂ ಭವನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಯುವ ಭವನ, ಅಂಗನವಾಡಿ ಕಟ್ಟಡ ಮತ್ತು ಓವರ್ ಹೆಡ್ ಟ್ಯಾಂಕ್ ಉದ್ಘಾಟಿಸಿ ಮಾತನಾಡಿ, ಮಾಡಬಾಳ್  ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಕೂಡಲೆ ಸಂಬಂಧಪಟ್ಟ ಬೆಸ್ಕಾಂ ಎಂಜಿನಿಯರ್ ಇತ್ತ ಗಮನ ಹರಿಸಿ, ವಾರದೊಳಗೆ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಎಂಜಿನಿಯರ್‌ಗೆ ತಾಕೀತು ಮಾಡಿದರು.
ಚಿರತೆ ಹಾವಳಿ ತಪ್ಪಿಸಿ: ಮಾಡಬಾಳ್, ಶಂಭುದೇವನಹಳ್ಳಿ, ಜೇನುಕಲ್ಲುಪಾಳ್ಯ, ಮಾನಗಲ್, ಬಾಳೇನಹಳ್ಳಿ, ಹೇಳಿಗೆಹಳ್ಳಿ, ಮತ್ತೀಕೆರೆ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಿದ್ದು, ಹಸು, ಎಮ್ಮೆ, ಕರು, ಕುರಿ, ಮೇಕೆಗಳನ್ನು  ಕೊಲ್ಲುತ್ತಿದೆ. ಕಳೆದ ತಿಂಗಳು ಜೇನುಕಲ್ಲು ಪಾಳ್ಯದ ಬಳಿ ಮಾಡಬಾಳ್  ಗ್ರಾ.ಪಂ. ಸದಸ್ಯೆ ಮೇಲೆ ಎರಗಿ  ಕೊಂದಿತ್ತು.  ಮಹಿಳೆಯರು, ಮಕ್ಕಳು ಭಯಭೀತರಾಗಿ ಹೊಲ, ಗದ್ದೆ, ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ. ಹಗಲಿನ ವೇಳೆಯೇ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ಎರಗಿ  ಕೊಲ್ಲುತ್ತಿದೆ. ಹೀಗಾದರೆ ಗ್ರಾಮಗಳಲ್ಲಿ ವಾಸಿಸುವುದಾದರೂ ಹೇಗೆ. ಕೂಡಲೆ ಚಿರತೆ ಹಿಡಿದು  ಕಾಡಿಗೆ ಬಿಡಿಸುವಂತೆ ಶಾಸಕ ಬಾಲಕೃಷ್ಣ ಅವರಲ್ಲಿ ಗ್ರಾಮಸ್ಥರು ಅಹವಾಲಿಟ್ಟರು. ಚಿರತೆ ಹಿಡಿಯಲು ಈಗಾಗಲೇ ಅರಣ್ಯಾಧಿಕಾರಿಗಳು ಬೋನಿಟ್ಟಿದ್ದಾರೆ. ಚಿರತೆ ಓಡಿಸಲು  ಗ್ರಾಮಸ್ಥರು ಅರಣ್ಯಾಧಿಕಾರಿಗಳೊಂದಿಗೆ ಸಹಕರಿಸುವಂತೆ ಶಾಸಕರು ಮನವಿ ಮಾಡಿದರು.
ಮಾಡಬಾಳ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ, ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯ ವಿಜಯಕುಮಾರ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ಟಿಎಪಿಸಿಎಂಎಸ್ ನಿರ್ದೇಶಕ ನರೇಂದ್ರಕುಮಾರ್, ಮಾಡಬಾಳ್ ಗ್ರಾ.ಪಂ. ಉಪಾಧ್ಯಕ್ಷ ಶಿವಲಿಂಗಯ್ಯ, ಸದಸ್ಯರಾದ ಶಿವಬೀರಯ್ಯ, ಯತೀಶ್, ಚನ್ನರಾಯಪ್ಪ, ಜಿ.ಪಂ.ಎಇಇ ರವಿ ಎಸ್. ಸೂರನ್, ಸಿಡಿಪಿಓ ಕೆಂಪಣ್ಣ,ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.