ಬೆಂಗಳೂರು ಗ್ರಾಮಾಂತರ

ಎಂಎನ್‌ಸಿ ಉದ್ಯೋಗಿ ಬರ್ಬರ ಹತ್ಯೆ

Published On :

ಕ.ಪ್ರ. ವಾರ್ತೆ ಬೆಂಗಳೂರು ಜೂ.15
ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಯನ್ನು ದುಷ್ಕರ್ಮಿಗಳು ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸರ್ಜಾಪುರ ರಸ್ತೆ ಇಬ್ಬಲೂರಿನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಉತ್ತರಪ್ರದೇಶದ ಲಖನೌ ಮೂಲದ ಸೌರಭ್ ರಸ್ತೋಗಿ (35) ಕೊಲೆಯಾದವರು. ಜೆನ್‌ಪ್ಯಾಕ್ಟ್ ಔಟ್‌ಸೋರ್ಸಿಂಗ್ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಸೌರಭ್, ಪತ್ನಿ ಅಂಕಿಶಾ ಜತೆ ಇಬ್ಬಲೂರಿನ ಸನ್‌ಸಿಟಿ ಅಪಾರ್ಟ್‌ಮೆಂಟ್‌ನ 8ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಾಸವಿದ್ದರು. ಪೋಷಕರು ಲಖನೌದಲ್ಲಿ ವಾಸವಿದ್ದಾರೆ.
ನಗರದಲ್ಲೇ ಉದ್ಯೋಗಿಯಾಗಿರುವ ಪತ್ನಿ ಅಂಕಿಶಾ ವಾರದ ಹಿಂದಷ್ಟೇ ಪುಣೆಯ ಸಂಬಂಧಿಕರ ಮನೆಗೆ ತೆರಳಿದ್ದರು. ಶನಿವಾರ ಸಂಜೆ ಹೊರಗೆ ಹೋಗಿದ್ದ ಸೌರಭ್ ರಾತ್ರಿ 9.30ಕ್ಕೆ ವಾಪಸಾಗಿದ್ದರು. ಈ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಸೌರಭ್ ಕತ್ತು ಕುಯ್ದು ಕೊಲೆ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಕೆಲ ವಸ್ತುಗಳನ್ನು ದೋಚಿದ್ದಾರೆ. ಹೀಗಾಗಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಪ್ರತಿದಿನದಂತೆ ಪತ್ನಿ ಅಂಕಿಶಾ ಶನಿವಾರ ರಾತ್ರಿ ಪತಿಯ ಮೊಬೈಲ್ ಫೋನ್‌ಗೆ ಕರೆ ಮಾಡಿದ್ದಾರೆ. ಆದರೆ, ನಾಲ್ಕೈದು ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸದ ಕಾರಣ ನೆರೆ ಮನೆಯವರಿಗೆ ಮಾಹಿತಿ ನೀಡಿ ನೋಡುವಂತೆ ಹೇಳಿದ್ದಾರೆ. ಅವರು ಬಾಗಿಲು ಬೆಲ್ ಮಾಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಮಲಗಿರಬಹುದು ಎಂದು ಭಾವಿಸಿದ ನೆರೆ ಮನೆಯವರೂ ಬೆಳಗ್ಗೆ ಮತ್ತೆ ಕೇಳುತ್ತೇವೆ ಎಂದು ಪತ್ನಿ ಅಂಕಿಶಾಗೆ ತಿಳಿಸಿದ್ದಾರೆ.
ಬೆಳಗ್ಗೆ ಪತ್ನಿ ಮತ್ತೆ ಕರೆ ಮಾಡಿದಾಗ ಸೌರಭ್ ಸ್ಪಂದಿಸಲಿಲ್ಲ. ಹೀಗಾಗಿ ನೆರೆ ಮನೆಯವರು ಬೆಲ್ ಮಾಡಿದ್ದಾರೆ. ಆಗಲೂ  ಸ್ಪಂದಿಸದಿದ್ದಾಗ ಎಚ್‌ಎಸ್‌ಆರ್ ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಸೌರಭ್ ಶವ ಹಾಲ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು.
ಪೊಲೀಸರು ಪತ್ನಿ ಅಂಕಿಶಾ ಹಾಗೂ ಲಖನೌದಲ್ಲಿರುವ ಪೋಷಕರಿಗೆ ಮಾಹಿತಿ ನೀಡಿದ್ದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂಶಿಕಾ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ವಿಚಾರಣೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಪುರದಲ್ಲಿ ವ್ಯಾಸಂಗ ಮುಗಿಸಿರುವ ಸೌರಭ್, ಜೈಪುರ, ಪುಣೆ, ಗುರ್‌ಗಾಂವ್‌ನಲ್ಲಿ ಕೆಲಸ ಮಾಡಿ 2011ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕೆಲಸದ ಮೇಲೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಸೌರಭ್ 10 ದಿನಗಳ ಹಿಂದಷ್ಟೇ ನಗರಕ್ಕೆ ವಾಪಸಾಗಿದ್ದರು.

ಸಿಸಿಟಿವಿ ಪರಿಶೀಲಿಸುತ್ತಿರುವ ಪೊಲೀಸರು...
ಮನೆಯೊಳಗೆ ಬಲವಂತದ ಪ್ರವೇಶವಾಗಿರುವ ಬಗ್ಗೆ ಯಾವುದೇ ಸುಳಿವಿಲ್ಲ. ಮುಖ್ಯ ಬಾಗಿಲಿನ ಬೀಗವನ್ನು ಹೊರಗಿನಿಂದ ಹಾಕಿರುವುದು ಕಂಡುಬಂದಿದೆ. ಹೀಗಾಗಿ ಪರಿಚಿತರೇ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ಗಳು, ಭೇಟಿ ನೀಡಿರುವವರ ಬಗ್ಗೆ ಸ್ವಾಗತಕಾರರ ಕೊಠಡಿಯಲ್ಲಿ ದಾಖಲಾಗಿರುವ ಹೆಸರುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್ನು ಸ್ವಾಗತಕಾರರ ಕೊಠಡಿ ಪಕ್ಕದಲ್ಲೇ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಅಪಾರ್ಟ್‌ಮೆಂಟ್‌ಗೆ ಬಂದು ಹೋದವರ ಚಹರೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.  ಅಪಾರ್ಟ್‌ಮೆಂಟ್ ವಾಸಿಗಳು, ಭದ್ರತಾ ಸಿಬ್ಬಂದಿ ಹಾಗೂ ಮನೆ ಕೆಲಸದವರು ಮಾತ್ರ ಅಪಾರ್ಟ್‌ಮೆಂಟ್‌ನಲ್ಲಿ ಓಡಾಡುತ್ತಾರೆ. ಇನ್ನು ಹೊರಗಿನ ವ್ಯಕ್ತಿಗಳು ಯಾರೇ ಬಂದರೂ ವಾಸಿಗಳ ಪರಿಚಿತರಾಗಿದ್ದರೆ ಮಾತ್ರ ಹೆಸರು, ದೂರವಾಣಿ ಮುಂತಾದ ಮಾಹಿತಿಗಳನ್ನು ಪಡೆದು ಒಳಗೆ ಬಿಡಲಾಗುತ್ತದೆ. ಹೀಗಾಗಿ ಪರಿಚಿತರಿಂದಲೇ ಕೃತ್ಯ ನಡೆದಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ತೀವ್ರ ಒದ್ದಾಟ
ಸೌರಭ್ ಶವ ಹಾಲ್‌ನಲ್ಲಿ ಸೋಫಾ ಪಕ್ಕದಲ್ಲೇ ಬಿದ್ದಿದ್ದು ಹಾಲ್ ತುಂಬಾ ರಕ್ತದ ಕಲೆಯಾಗಿದೆ. ದುಷ್ಕರ್ಮಿಗಳಿಗೆ ಸೌರಭ್ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಹಾಲ್‌ನಲ್ಲಿ ಒದ್ದಾಡಿರುವ ಲಕ್ಷಣಗಳು ಗೋಚರಿಸಿವೆ. ಕೊಲೆ ರಾತ್ರಿಯೇ ನಡೆದಿರುವುದರಿಂದ ಬೆಳಗ್ಗೆ ಪೊಲೀಸರು ಮಾಹಿತಿ ತಿಳಿದು ಆಗಮಿಸುವಷ್ಟರಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಕೊಲೆ ಬಳಿಕ ದುಷ್ಕರ್ಮಿಗಳು ಸೌರಭ್ ಧರಿಸಿದ ಟೀ ಶರ್ಟ್‌ನ್ನು ಎಳೆದು ಮುಖ ಮುಚ್ಚಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಚಿನ್ನಾಭರಣ, ನಗದು ಕಾಣೆಯಾಗಿರುವ ಬಗ್ಗೆ ಪತ್ನಿ ಬೆಂಗಳೂರಿಗೆ ಬಂದ ಬಳಿಕವೇ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್, ಜಂಟಿ ಪೊಲೀಸ್ ಆಯುಕ್ತ ಕೆ.ವಿ.ಶರಶ್ಚಂದ್ರ, ಡಿಸಿಪಿ ಟಿ.ಡಿ.ಪವಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.