ಬೆಂಗಳೂರು ಗ್ರಾಮಾಂತರ

ಎಪಿಎಂಸಿ ಅಭಿವೃದ್ಧಿಗೆ ಯೋಜನೆ ರೂಪಿಸಿ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆರ್ಥಿಕ ಸ್ಥಿತಿ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದ್ದು, ಸಮಿತಿ ಸುಮಾರು 3 ಕೋಟಿ ಆದಾಯದಲ್ಲಿದೆ. ಇದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು
ಅಭಿವೃದ್ಧಿಗೊಳಿಸಲು ನೂತನ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಎಪಿಎಂಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ನಿರ್ದೇಶಕರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ ಗಣನೀಯವಾಗಿ ಗುರುತಿಸಿಕೊಂಡಿದೆ. ರಾಜ್ಯದ ಹಳೆಯ ಎಪಿಎಂಸಿಗಳಲ್ಲಿ ಒಂದಾದ ಈ ಎಪಿಎಂಸಿ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ದೇವನಹಳ್ಳಿ ತಾಲೂಕುಗಳಿವೆ. 3 ತಾಲೂಕಿನ ರೈತರ ಕಷ್ಟ-ನಷ್ಟಗಳಿಗೆ ಸಮಿತಿ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮತ್ತು ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಲು ಅವಕಾಶ ಮಾಡಿಕೊಡಬೇಕು. ದಲ್ಲಾಳಿಗಳಿಂದ ರೈತರಿಗೆ ಯಾವುದೇ ರೀತಿಯಲ್ಲೂ ನಷ್ಟವಾಗದಂತೆ ಎಚ್ಚರ ವಹಿಸಬೇಕು. ಹರಾಜು, ಮಾರಾಟ, ಹಣ ಸಂದಾಯ ಸೇರಿದಂತೆ ಪ್ರತಿ ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆಯಬೇಕು. ಯಾವ ರೈತರೂ ಮೋಸಕ್ಕೊಳಗಾಗದ ರೀತಿಯಲ್ಲಿ ಸಮಿತಿ ನಿಗಾವಹಿಸಿ ಕಾರ್ಯೋನ್ಮುಖವಾಗಬೇಕು. ಯಶವಂತಪುರ ಎಪಿಎಂಸಿ ಮಾದರಿಯಲ್ಲಿ ಇಲ್ಲಿನ ಸವಲತ್ತುಗಳು ಸಿಗುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಆಂಜನಮೂರ್ತಿ, ಸಮಿತಿ ವ್ಯಾಪ್ತಿಗೆ ಒಳಪಡುವ ಎಲ್ಲ ತಾಲೂಕುಗಳ ರೈತರ ಹಿತ ಕಾಪಾಡುವುದು ಮೊದಲ ಆದ್ಯತೆಯಾಗಬೇಕು. ತರಕಾರಿ, ಹಣ್ಣು ಸೇರಿದಂತೆ ರೈತರ ಬೆಳೆಗಳಿಗೆ ಉತ್ತಮ ದರ ಸಿಗುವಂತೆ ಮಾರುಕಟ್ಟೆ ಸಮನ್ವಯತೆ ಕಾಪಾಡಲು ಪ್ರಾಧಾನ್ಯತೆ ನೀಡಬೇಕು ಎಂದರು.
ಪದಗ್ರಹಣ: ಎಪಿಎಂಸಿಯ ನೂತನ ಅಧ್ಯಕ್ಷರಾಗಿ ತಿ.ರಂಗರಾಜು, ಉಪಾಧ್ಯಕ್ಷರಾಗಿ ಆರ್.ಚಂದ್ರಕುಮಾರ್, ನಿರ್ದೇಶಕರಾಗಿ ಜಿ. ಲಕ್ಷ್ಮೀಪತಿ, ಕೆ.ವಿ.ಪ್ರಭುಸ್ವಾಮಿ, ನಾರಾಯಣಪ್ಪ, ಯೋಗಾನಂದೀಶ್, ಎಸ್.ಕೆ.ಕೋದಂಡರಾಮಯ್ಯ, ಕೆ.ವೆಂಕಟೇಶ್ ದಿಣ್ಣೂರು, ನಾಗರತ್ನಮ್ಮ, ಗಂಗಾಧರ್‌ತಳಗವಾರ, ರಾಜ್‌ಕುಮಾರ್, ರಮೇಶ್ ಪದಗ್ರಹಣ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ತಿ.ರಂಗರಾಜು ಮಾತನಾಡಿ, ಎಪಿಎಂಸಿ ಆಡಳಿತ ನಿರ್ವಹಣೆಯಲ್ಲಿ ಈ ಹಿಂದೆ ಕೂಡ ಸಾಕಷ್ಟು ಅನುಭವ ಹೊಂದಿದ್ದೇನೆ. ಕೃಷಿಕರು ಮತ್ತು ಮಾರುಕಟ್ಟೆ ಕುರಿತ ಸಮಗ್ರ ಮಾಹಿತಿ ಮತ್ತು ಸಂಪರ್ಕ ಇರುವುದರಿಂದ ಸಮಿತಿಯನ್ನು ಮತ್ತಷ್ಟು ಸದೃಢವಾಗಿ ಕಟ್ಟಲು ಶ್ರಮಿಸಲಾಗುವುದು. ಎಲ್ಲ ಪದಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕೃಷಿಕಸ್ನೇಹಿ ಎಪಿಎಂಸಿಯಾಗಿ ದೊಡ್ಡಬಳ್ಳಾಪುರ ಎಪಿಎಂಸಿಯನ್ನು ಅಭಿವೃದ್ಧಿ ಪಡಿಸುವ ಕನಸಿದೆ ಎಂದರು.
ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳ ಮುಖಂಡರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ದೇವನಹಳ್ಳಿ ತಾಲೂಕಿನ ಹಲವು ಮುಖಂಡರು, ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಾಗೂ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.