ಪುನರ್ವಸತಿ ಕೇಂದ್ರದಿಂದ ಎಂಟು ಮಕ್ಕಳು ಪರಾರಿ
ಬೆಂಗಳೂರು: ಸರ್ಕಾರಿ ಬಾಲಕರ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ 8 ಮಕ್ಕಳು ಶನಿವಾರ ಬೆಳಗ್ಗೆ ಹೊಸೂರು ರಸ್ತೆಯಲ್ಲಿರುವ ಕೇಂದ್ರದಿಂದ ಪರಾರಿಯಾಗಿದ್ದಾರೆ.ಈ ಸಂಬಂಧ ಕೇಂದ್ರದ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮಕ್ಕಳನ್ನು ಹುಡುಕಲು ಸಹಾಯ ಕೋರಿದ್ದಾರೆ.
ಎರಡು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಮೇ ತಿಂಗಳಲ್ಲಿ 25 ಮಕ್ಕಳು ಕೇಂದ್ರದಿಂದ ಪರಾರಿಯಾಗಿದ್ದರು. ಕಾರ್ಖಾನೆಗಳಲ್ಲಿ ಕೆಲಸ, ಭಿಕ್ಷಾಟನೆಯಲ್ಲಿ ತೊಡಗಿದ್ದ ಇವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಕ್ಷಿಸಿತ್ತು. ಇವರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು.ಈ ಸಂಬಂಧ ಕನ್ನಡಪ್ರಭದೊಂದಿಗೆ ಮಾತನಾಡಿದ ಅಧೀಕ್ಷಕ ರಾಜೇಂದ್ರ ಪ್ರಸಾದ್, 'ರಾತ್ರಿ ಮೂತ್ರ ವಿಸರ್ಜನೆಗೆಂದು ತೆರಳಿ ಪರಾರಿಯಾಗಿದ್ದಾರೆ. ಪರಾರಿಯಾದವರೆಲ್ಲ 16ರಿಂದ 18 ವಯೋವಾನದವರು. ಭಾಷೆ, ಸಾಂಸ್ಕೃತಿಕ ಭಿನ್ನತೆ ಮುಂತಾದ ಕಾರಣಗಳಿಂದ ಪರಾರಿಯಾಗುತ್ತಾರೆ' ಎಂದರು.
ಇಷ್ಟವಾಗದ ನಿಯಮ: ಕೇಂದ್ರದಲ್ಲಿ 200ಕ್ಕೂ ಅಧಿಕ ಮಕ್ಕಳಿದ್ದು ಇಲ್ಲಿನ ನಿಯಮಗಳು ಅವರಿಗೆ ಇಷ್ಟವಾಗುವುದಿಲ್ಲ. ಬೆಳಗ್ಗೆ 6 ಗಂಟೆಗೆ ಏಳಬೇಕು. ಸ್ನಾನ ಮಾಡಿ ಪ್ರಾರ್ಥನೆ ಮಾಡಿ ತಿಂಡಿ ಸೇವಿಸಬೇಕು. ಅವರನ್ನು ಶಾಲೆಗೆ ಕಳುಹಿಸಬೇಕು, ಆಟವಾಡಲು ಹೊರಗೆ ಬಿಡಬೇಕು. ಈ ರೀತಿಯ ಶಿಸ್ತಿನ ವಿಚಾರಗಳು ಇಷ್ಟವಾಗದ ದೊಡ್ಡ ಹುಡುಗರು ಪರಾರಿಯಾಗುತ್ತಾರೆ. ನಿಯಮ ಪಾಲಿಸದ ಹುಡುಗರನ್ನು ಬೈಯ್ಯುವಂತಿಲ್ಲ, ಜೋರಾಗಿ ಬುದ್ಧಿಮಾತು ಹೇಳುವಂತಿಲ್ಲ. ದೊಡ್ಡ ಹುಡುಗರು ಸಿಬ್ಬಂದಿ ಜತೆ ಜಗಳ ಮಾಡಿ ಪ್ರಚೋದಿಸುವಂತೆ ಮಾತನಾಡುತ್ತಾರೆ ಎಂದು ಪುನರ್ವಸತಿ ಕೇಂದ್ರದ ಮತ್ತೊಬ್ಬ ಅಧಿಕಾರಿ ಹೇಳಿದರು.ಕೇಂದ್ರದಲ್ಲಿ ಅಡುಗೆ, ಸ್ವಚ್ಛತೆ ಹಾಗೂ ಭದ್ರತಾ ಸಿಬ್ಬಂದಿ ಮಾತ್ರ ಇದ್ದಾರೆ. ಅವರು ಕೂಡಾ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ಸಿಬ್ಬಂದಿ ಕೊರತೆಯು ಹುಡುಗರು ಪರಾರಿಯಾಗಲು ಕಾರಣವಾಗುತ್ತದೆ. ಮೇಲಧಿಕಾರಿಗಳು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡರೆ ಕೆಲಸ ಬಿಟ್ಟು ಹೋಗುತ್ತಾರೆ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಅಮಾನತು: ಕರ್ತವ್ಯಲೋಪ ಹಾಗೂ ದುರ್ನಡತೆ ಆಧಾರದ ಮೇಲೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ರಾಜೇಶ್ವರಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಆಸ್ಪತ್ರೆಗೆ ಅಗತ್ಯವಾದ ಸಲಕರಣೆಗಳನ್ನು ತೆಗೆದುಕೊಳ್ಳುವಾಗ ತಮ್ಮಿಷ್ಟದ ಸಂಸ್ಥೆಯಿಂದ ಖರೀದಿಸಿ ಹಣ ಪಡೆಯುತ್ತಿದ್ದರು.ಅಷ್ಟೇ ಅಲ್ಲದೆ, ತಾಲೂಕಿನ ವೈದ್ಯಾಧಿಕಾರಿಗಳಿಂದ ಅವರ ಕೆಲಸ ಮಾಡಿಸಿಕೊಡುವುದಾಗಿ ಹೇಳಿಯೂ ಹಣ ಪಡೆದ ಆರೋಪ ಅವರ ಮೇಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

