ಬೇಡಿಕೆ ಈಡೇರಿಕೆಗೆ ದಿನಗೂಲಿ ನೌಕರರ ಧರಣಿ
ಕ.ಪ್ರ.ವಾರ್ತೆ ರಾಮನಗರ, ಜೂ.26
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ಸಂಘಟನೆಯ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಂದಾಯ ಭವನದ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಕೆಲ ಕಾಲ ಧರಣಿ ಸತ್ಯಾಗ್ರಹ ನಡೆಸಿದರು. ಸರ್ಕಾರದ ವಿಳಂಬ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸತಾಯಿತು. ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರನ್ವಯ ಅರ್ಹ ದಿನಗೂಲಿ ನೌಕರರ ಹೆಸರುಗಳನ್ನು ಸರ್ಕಾರ ಈ ಹಿಂದೆಯೇ ಪ್ರಕಟಿಸಬೇಕಾಗಿತ್ತು. ಹೆಸರು ಪ್ರಕಟಣೆಗೆ ಕಾಯ್ದೆಯಲ್ಲಿ ನೀಡಿದ್ದ ಗಡುವು ಮುಗಿದು ಹಲವಾರು ತಿಂಗಳುಗಳೇ ಕಳೆದಿದ್ದರೂ ಹೆಸರುಗಳ ಪ್ರಕಟಣೆಗೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ತಾನೇ ಮಾಡಿದ ಕಾನೂನನ್ನು ಸರ್ಕಾರ ತಾನೇ ಕಡೆಗಣಿಸುತ್ತಿದೆ. ಅಧಿನಿಯಮದ ಅನ್ವಯ ಬಿ, ಸಿ, ಡಿ ಕೆಟಗರಿಯ ದಿನಗೂಲಿ ನೌಕರರಿಗೆ ಫೆ.15, 2013ರಿಂದ ಜಾರಿಗೆ ಬರುವಂತೆ ಮೂಲ ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ ಮತ್ತು ಇತರ ಸೌಲಭ್ಯಗಳು ದೊರಕಿಸಿಕೊಡಬೇಕಿತ್ತು. ಆದರೆ ಸರ್ಕಾರ ಈ ವಿಚಾರದಲ್ಲೂ ವಿಳಂಬ ಮಾಡುತ್ತಿದೆ ಎಂದರು.
ಫೆ.23, 1990ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನನ್ವಯ ದಿನಗೂಲಿಯಿಂದ ಕಾಯಂಗೊಂಡ ನೌಕರರಿಗೆ, ಅವರು ಕಾಯಂಗೊಳ್ಳುವ ಮೊದಲು ಸಲ್ಲಿಸಿದ 10 ವರ್ಷಗಳ ಸೇವೆಯನ್ನು ನಿವೃತ್ತ ಸೌಲಭ್ಯಗಳಿಗೆ ಪರಿಗಣಿಸಬೇಕು. ಈ ವಿಚಾರದಲ್ಲಿ ನ್ಯಾಯಾಲಯ 2006ರಲ್ಲಿ ದೃಢಪಡಿಸಿದ ತೀರ್ಪಿನಂತೆ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಜನಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದಿನಗೂಲಿ ನೌಕರರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ಜು.7ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದ ಲಕ್ಷಾಂತರ ದಿನಗೂಲಿ ನೌಕರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರಾಜ್ಯ ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ರೇಣುಕಾಚಾರ್, ಕಾರ್ಯದರ್ಶಿ ಎಂ.ಗೋಪಾಲ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

