ಎತ್ತಿನಹೊಳೆ ಯೋಜನೆ ರಾಜಕೀಯ ಲಾಭಕ್ಕೆ ಅಲ್ಲ
ದೊಡ್ಡಬಳ್ಳಾಪುರ: ಕುಡಿಯುವ ನೀರಿನ ಯೋಜನೆ ಜಾರಿ ಮಾಡಲು ಕೈಂಕರ್ಯ ಮಾಡುವ ದಿನ ಕರಾಳ ದಿನವಾಗಿ ಆಚರಿಸುತ್ತೇವೆ ಎಂದು ಹೇಳುವ ಜನರ ಮನಸ್ಸು ಅಕ್ಷರಶಃ ಕರಾಳವೇ ಆಗಿರುತ್ತದೆ. ಬರೀ ರಾಜಕಾರಣಕ್ಕಾಗಿ ಎತ್ತಿನಹೊಳೆ ವಿರೋಧಿಸುವ ಜನ ಜನಪರ ಹಿತಾಸಕ್ತಿಯ ರಾಜಕಾರಣ ಮಾಡಲಿ ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಾನವೀಯ ದೃಷ್ಟಿಕೋನ ಇದ್ದರೆ ಎತ್ತಿನಹೊಳೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಹೋರಾಟಗಾರರು ಮತ್ತು ಯೋಜನೆ ವಿರೋಧಿಸುತ್ತಿರುವ ಜನರಿಗೆ ಅವರು ಸಲಹೆ ನೀಡಿದ್ದಾರೆ. ಆದಾಗ್ಯೂ ತುರ್ತು ಸಂದರ್ಭದಲ್ಲಿ ನೀರು ತರಲು ಯಾವುದಾದರೂ ಪರ್ಯಾಯ ಮಾರ್ಗಗಳಿದ್ದರೆ ಅವರು ಸೂಚಿಸಲಿ ಎಂದ ಅವರು, ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸಲು ಪರಮಶಿವಯ್ಯ ವರದಿ ಜಾರಿ ಸೂಕ್ತವಾಗಿದೆ. ಆದರೆ ನಿಯಮಿತ ಅವಧಿಯಲ್ಲಿ ನೀರುತರಲು ಎತ್ತಿನಹೊಳೆ ಸೂಕ್ತ. ಈ ಬಗ್ಗೆ ಯಡಿಯೂರಪ್ಪ, ಸದಾನಂದಗೌಡ, ಜಗದೀಶಶೆಟ್ಟರ್ ಎಲ್ಲರೂ ಹೇಳಿದ್ದಾರೆ. ಅವರವರ ಅಧಿಕಾರಾವಧಿಯಲ್ಲಿ ಸೂಕ್ತ ಚರ್ಚೆಗಳನ್ನೂ ಮಾಡಿದ್ದಾರೆ. ಹಿಂದಿನ ಸರ್ಕಾರ 1 ಸಾವಿರ ಕೋಟಿ ಹಣ ನೀಡಿದ್ದರೆ ಈಗಿನ ಸರ್ಕಾರ 12 ಸಾವಿರ ಕೋಟಿ ಹಣ ನೀಡಿದೆ. ಬರುವ ಒಂದೆರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಂಡು ಈ ಭಾಗದ 5 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ಬರುತ್ತದೆ.
ನೇತ್ರಾವತಿ ತಿರುವು ಅಲ್ಲ: ಇದು ನೇತ್ರಾವತಿ ತಿರುವು ಯೋಜನೆ ಅಲ್ಲ. ನೇತ್ರಾವತಿ ನದಿಯಿಂದ ವರ್ಷಕ್ಕೆ ಬರೋಬ್ಬರಿ 1200 ಟಿಎಂಸಿಯಷ್ಟು ನೀರು ಸಮುದ್ರಕ್ಕೆ ಸೇರುತ್ತಿದೆ. ಈ ನೀರಿನಲ್ಲಿ 24 ಟಿಎಂಸಿಯಷ್ಟು ನೀರನ್ನು ಮಾತ್ರ ಪೈಪ್ಲೈನ್ ಮೂಲಕ ಬಯಲುಸೀಮೆಯ ಜಿಲ್ಲೆಗಳಿಗೆ ತರುವ ಪ್ರಯತ್ನ ಅಷ್ಟೇ. ಆದರೆ ಕೆಲವರು ಇದನ್ನು ನೇತ್ರಾವತಿ ತಿರುವು ಯೋಜನೆ ಎಂದು ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಈ ಬಗ್ಗೆ ಕರಾವಳಿ ಜಿಲ್ಲೆಗಳಲ್ಲಿ ದೊಡ್ಡ ಅಪಸ್ವರ ಎದ್ದಿದೆ ಎಂದರು.
ಬಯಲುಸೀಮೆಯಲ್ಲಿ ಜನ ನೀರಿನಿಂದ ಅನೇಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅವರ ಆರೋಗ್ಯ-ಬದುಕು ನನಗೆ ಮುಖ್ಯ. ಯಾರು ಏನೇ ಹೇಳಲಿ, ನನ್ನ ಆರೋಗ್ಯ ಏನೇ ಆಗಲಿ ಜನರ ಆರೋಗ್ಯ ರಕ್ಷಿಸುವ ಹೊಣೆ ನನ್ನದು. 5 ವರ್ಷಗಳಿಂದ ಈ ಹಂತದಲ್ಲಿ ಸತತ ಪ್ರಯತ್ನ ಮಾಡುತ್ತಲೇ ಬರುತ್ತಿದ್ದೇನೆ. ರಾಜ್ಯದಲ್ಲಿ ಉನ್ನತ ನೀರಾವರಿ ತಜ್ಞರಿದ್ದಾರೆ. ಅವರ ವರದಿಗಳ ಆಧಾರದಲ್ಲೇ ಸರ್ಕಾರ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆದರೆ ಇದನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ಮುನ್ನ ವಾಸ್ತವ ಅರ್ಥಮಾಡಿಕೊಳ್ಳಬೇಕು. ರಾಜಕೀಯ ಹಿಂದಿಡಿ- ನೀರಾವರಿಗಾಗಿ ಮುಂದೆ ಬನ್ನಿ ಎಂದು ಕರೆ ನೀಡಿದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

