'ಬಯಲುಸೀಮೆ ನೀರಾವರಿ ಬಗ್ಗೆ ಉಡಾಫೆ ಮಾತು ಸಲ್ಲ'
ಚನ್ನಪಟ್ಟಣ: ಬಯಲು ಸೀಮೆಯ ನೀರಾವರಿ ಯೋಜನೆಗಳ ಬಗ್ಗೆ ರಾಜಕೀಯ ಮುಖಂಡರು ಉಡಾಫೆ ಮಾತು ಬಿಟ್ಟು ಸಮಗ್ರ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ತೋರಲಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಸಲಹೆ ನೀಡಿದರು.
ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕಣ್ವ ಕೋಡಂಬಹಳ್ಳಿ ಏತನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕುಮಾರಸ್ವಾಮಿ ಹೇಮಾವತಿ ಸಾಧ್ಯವಿಲ್ಲ, ಮೇಕೆದಾಟು, ಸಂಗಮ ಎಂದು ಕೇವಲ ಭಾಷಣ ಮಾಡುವುದರಿಂದ ಬಯಲು ಸೀಮೆಯ ನೀರಾವರಿ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ ಎಂದರು. ಮೇಕೆದಾಟುವಿನಿಂದ ತನ್ನಿ ಇಲ್ಲ ಹೇಮಾವತಿಯಿಂದ ಹೇಗೆ ತರಲು ಸಾಧ್ಯ, ಅಲ್ಲಿಂದ ತರಬಹುದು ಇಲ್ಲಿಂದ ತರಬಹುದು ಎಂದು ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಭಾಷಣ ಮಾಡುವ ಬದಲು ಈ ಭಾಗದ ಜನತೆಗೆ ನೀರಾವರಿ ಸೌಕರ್ಯ ಕಲ್ಪಿಸ ಬೇಕಿರುವುದು ನಮ್ಮ ಕರ್ತವ್ಯ ಎಂಬುದನ್ನು ಅರಿತು ಮಾತನಾಡಲಿ ಎಂದರು.
ತಮಿಳುನಾಡಿಗೆ ವೃತಾ ನೀರು: ಕಾವೇರಿ ನ್ಯಾಯಾಧಿಕರಣ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಬಿಡುವಂತೆ ಸೂಚಿಸಿದೆ. ಆದರೆ ಕಳೆದ ಸಾಲಿನಲ್ಲಿ ನಾವು 300 ಟಿಎಂಸಿಗೂ ಅಧಿಕ ನೀರು ಬಿಟ್ಟಿದ್ದೇವೆ. ಕೆಆರ್ಎಸ್ ಬಿಟ್ಟರೆ ಕಾವೇರಿ ನೀರನ್ನು ಹಿಡಿದಿಟ್ಟು ಕೊಳ್ಳಲು ನಮ್ಮಲ್ಲಿ ಯಾವುದೇ ಅಣೆಕಟ್ಟೆ ಇಲ್ಲವಾಗಿದ್ದು, ತಮಿಳುನಾಡಿನವರು ಹೆಚ್ಚುವರಿ ನೀರನ್ನು ವಿನಾಕಾರಣ ಸಮುದ್ರಕ್ಕೆ ಬಿಡುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.
ವರ್ಷದೊಳಗೆ ನೀರು: ತಾಲೂಕಿನ ಕಣ್ವ ಪೈಪ್ ಲೈನ್ ಕಾಮಗಾರಿ ಭಾಗಶಃ ಮುಗಿದಿದ್ದು, ತೊರೆಕಾಡನಹಳ್ಳಿಯಿಂದ ವಿದ್ಯುತ್ ಲೈನ್ ಎಳೆಯುವ ಕಾಮಗಾರಿ ಭರದಿಂದ ಸಾಗಿದೆ. ಕಣ್ವ ಕೋಡಂಬಹಳ್ಳಿ ಮೂಲಕ ಸಿಂಗರಾಜಿಪುರದ ವರೆಗಿನ ಪೈಪ್ಲೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುತ್ತಿದ್ದು ಆಗಸ್ಟ್ ಒಳಗೆ ಕಾಮಗಾರಿ ಕಾರ್ಯಾರಂಭ ಮಾಡಲಿದೆ ಎಂದರು.
ತಾಲೂಕಿನ ಕೋಡಂಬಹಳ್ಳಿ, ಸಿಂಗರಾಜಿಪುರ, ಬೈರಶೆಟ್ಟಿಹಳ್ಳಿ, ಅರಳಾಳುಸಂದ್ರ, ವಿರೂಪಸಂದ್ರ, ಬಿ.ವಿ.ಹಳ್ಳಿ, ಭೂಹಳ್ಳಿ , ಮೆಣಸಿಗನಹಳ್ಳಿ ಮತ್ತು ವಿಠಲೇನಗಳ್ಳಿ, ಜೆ. ಬ್ಯಾಡರಹಳ್ಳಿ ಸೇರಿದಂತೆ ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದರು.
ಜಿ.ಪಂ ಮಾಜಿ ಸದಸ್ಯ ಸಿದ್ದರಾಮು, ಕೆ.ವಿ.ಪುಟ್ಟಸ್ವಾಮಿಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಕ್ಕೆರೆ ರಾಜು, ಮಾಜಿ ಅಧ್ಯಕ್ಷ ರಾಮಯ್ಯ, ನೀರಾವರಿ ನಿಗಮದ ಎಇಇ ಶಂಕರ್, ಕಿರಿಯ ಎಂಜಿನಿಯರ್ ವೆಂಕಟೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

