ಬೆಂಗಳೂರು ಗ್ರಾಮಾಂತರ

ಜೆಡಿಎಸ್- ಕಾಂಗ್ರೆಸ್ ನಾಯಕರ ಕೆಸರೆರಚಾಟ

Published On :

ರಾಮನಗರ: ಹೇಮಾವತಿಯಿಂದ ಮಾಗಡಿ ತಾಲೂಕಿನ ಕೆರೆಗಳನ್ನು ತುಂಬಿಸುವ ಶ್ರೀರಂಗ ನೀರಾವರಿ ಯೋಜನೆ ಮುಂದಿಟ್ಟುಕೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಕೆಸರೆರೆಚಾಟದಲ್ಲಿ ತೊಡಗಿದ್ದು, ಬುಧವಾರವೂ ಪರಸ್ಪರ ವಾಕ್ಸಮರ ಮುಂದುವರೆಸಿದ್ದಾರೆ.  
ಮೊನ್ನೆಯಷ್ಟೇ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಬಹಿರಂಗ ಅಧಿವೇಶನದಲ್ಲೂ ಶ್ರೀರಂಗ ಯೋಜನೆ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಪಸ್ವರ ವ್ಯಕ್ತಪಡಿಸಿದ್ದರು. ಯೋಜನೆ ಪ್ರಕಟಿಸಿದಾಗ ಸ್ವಾಗತಿಸಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಇದೀಗ ರಾಗ ಬದಲಿಸಿದ್ದು, ತಮ್ಮ ನಾಯಕ ಕುಮಾರಸ್ವಾಮಿ ವಾದವನ್ನೇ ಪುಷ್ಠೀಕರಿಸುತ್ತಿದ್ದಾರೆ.
ಜನರ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮಂಜೂರು ಮಾಡಿಸಿರುವ ಯೋಜನೆ ಬಗ್ಗೆ ಜೆಡಿಎಸ್ ನಾಯಕರ ಅಪಸ್ವರಕ್ಕೆ ಕೆಪಿಸಿಸಿ ಸದಸ್ಯ ಎ.ಮಂಜುನಾಥ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ತಿರುಗೇಟು ನೀಡಿದ್ದು, ಇತರೆಡೆಯ ಏತ ನೀರಾವರಿ ಯೋಜನೆಗಳು ಸಾಕಾರಗೊಂಡಿರುವಾಗ ಶ್ರೀರಂಗ ಯೋಜನೆ ಮಾತ್ರ ಅವೈಜ್ಞಾನಿಕ ಎನ್ನಲು ರಾಜಕೀಯ ದುರುದ್ದೇಶ ಕಾರಣವೆಂದು ಟೀಕಿಸಿದ್ದಾರೆ.
ಬಾಲಕೃಷ್ಣ ಆರೋಪ: ಈ ಯೋಜನೆ ಅನುಷ್ಠಾನಕ್ಕಾಗಿ 20 ವರ್ಷಕ್ಕೂ ಹಿಂದೆಯೇ ಕೂಗು ಎದ್ದಿತ್ತು. ವಿಧಾನ ಪರಿಷತ್ ಸದಸ್ಯ ಟಿ.ಎ.ರಂಗಯ್ಯ ಈ ಬಗ್ಗೆ ಹೋರಾಟ ನಡೆಸಿದ್ದರು. ಸದರಿ ಯೋಜನೆಯಿಂದ ವೈ.ಜಿ.ಗುಡ್ಡ ಮತ್ತು ಮಂಚನಬಲೆಯನ್ನು ಹೊರಗಿಟ್ಟಿರುವುದು ಸರಿಯಲ್ಲ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.
ಬಿಡದಿ ಹೋಬಳಿಯ ಕಲ್ಲುಗೋಪಹಳ್ಳಿ ಸೇರಿದಂತೆ ವಿವಿಧೆಡೆ ಪ್ರವಾಸ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಸೇರಿದಂತೆ ಶ್ರೀರಂಗ ಯೋಜನೆ ಮಂಜೂರು ಮಾಡಿಸಲು ಹೋರಾಟ ನಡೆಸಿದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ ನೀರಾವರಿ ಜ್ಞಾನವೇ ಇಲ್ಲ ಎಂದು ಕಟಕಿಯಾಡಿದ್ದಾರೆ.
ನನ್ನ ಪ್ರಕಾರ ಶ್ರೀರಂಗ ಯೋಜನೆ ಮಾಗಡಿ ತಾಲೂಕಿನ ನೀರಿನ ಬವಣೆ ನೀಗಿಸುವ ಶಾಶ್ವತ ಯೋಜನೆ ಆಗಲಾರದು. ಆದಾಗ್ಯೂ ಇನ್ನು ಮೂರು ವರ್ಷ ಆ ವಿಚಾರದಲ್ಲಿ ಅಪ್ಪಿತಪ್ಪಿಯೂ ಬಾಯಿ ಬಿಚ್ಚದೆ ಮೌನವಾಗಿರುತ್ತೇನೆ. ಅದೇನು ಸಾಧಿಸುತ್ತಾರೋ ನೋಡಿಕೊಂಡು ಪ್ರತಿಕ್ರಿಯಿಸುತ್ತೇನೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಬ್ಯಾಟಪ್ಪ ಮತ್ತಿತರರಿದ್ದರು.
ಮಂಜುನಾಥ್ ಎದಿರೇಟು: ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಸಿ.ಬಾಲಕೃಷ್ಣ ಅವರೇನೂ ನೀರಾವರಿ ತತಜ್ಞರಲ್ಲ. ಶ್ರೀರಂಗ ಯೋಜನೆಗೆ ಅವರ ಅಪಸ್ವರ ಬಾಯಿ ಚಪಲ ಮತ್ತು ರಾಜಕೀಯ ಪ್ರೇರಿತವಷ್ಟೇ. ವಿಸ್ತೃತ ವರದಿ ತಯಾರಿಸಿ, ಈಗಾಗಲೇ ಟೆಂಡರ್ ಕರೆಯಲಾಗಿದೆ. ಯೋಜನೆ ಪ್ರಾರಂಭಗೊಂಡ 24 ತಿಂಗಳಲ್ಲಿ ಮಾಗಡಿ ತಾಲೂಕಿನ ಕೆರೆಗಳು ತುಂಬುವುದು ನಿಶ್ಚಿತ ಎಂದು ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಎದಿರೇಟು ನೀಡಿದ್ದಾರೆ.
ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾ.6ಕ್ಕೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಚುನಾವಣಾ ನೀತಿ ಸಂಹಿತೆ ಜಾರಿ ಕಾರಣ ಕಾರ್ಯಕ್ರಮ ರದ್ದಾಗಿದೆ. ಫಲಿತಾಂಶ ಏನೇ ಆಗಲಿ ನೀತಿ ಸಂಹಿತೆ ಮುಕ್ತಾಯದ ಬಳಿಕ ಯೋಜನೆಗೆ ಶಂಕುಸ್ಥಾಪನೆ ನೆರವೇರುವುದು ನಿಶ್ಚಿತ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸಾಕಷ್ಟು ಏತ ನೀರಾವರಿ ಯೋಜನೆಗಳು ಸಫಲವಾಗಿವೆ. ಆಲಮಟ್ಟಿಯಿಂದ ಎತ್ತರದ ಪ್ರದೇಶಕ್ಕೂ ಯೋಜನೆ ವಿಸ್ತರಿಸಲಾಗಿದೆ. 90 ಕಿ.ಮೀ.ಯಿಂದ 3 ಕಡೆ ಪಂಪ್ ಮಾಡಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹೀಗಿರುವಾಗ ಶ್ರೀರಂಗ ನೀರಾವರಿ ಯೋಜನೆಯನ್ನು ಕಾಮಾಲೆ ಕಣ್ಣಿನಿಂದ ನೋಡುವ ಜೆಡಿಎಸ್ ನಾಯಕರ ವರ್ತನೆ ಸರಿಯಲ್ಲ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಇಗ್ಗಲೂರು ಜಲಾಶಯದ ನಿರ್ಮಾತೃ ಎಚ್.ಡಿ.ದೇವೇಗೌಡರೇ. ಸ್ವತ: ಅವರೇ ಕೋಡಂಬಳ್ಳಿ ಕೆರೆಗೆ ನೀರು ಹರಿಸುವ ಬಯಕೆ ವ್ಯಕ್ತಪಡಿಸಿದ್ದರು. ಈಗ ಅದು ನನಸಾಗುತ್ತಿದೆ. ಇಷ್ಟೆಲ್ಲ ನಿದರ್ಶನ ನಮ್ಮ ಕಣ್ಮುಂದೆ ಇರುವುದನ್ನು ಕುಮಾರಸ್ವಾಮಿ, ಬಾಲಕೃಷ್ಣ ಸಹಿತ ಜೆಡಿಎಸ್ ನಾಯಕರು ಗಮನಿಸುತ್ತಿಲ್ಲ. ಅವರು ಪ್ರತಿಯೊಂದನ್ನೂ ಪೂರ್ವಾಗ್ರಹಪೀಡಿತರಾಗಿ ನೋಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮರಿದೇವರು, ಕೆ.ರಮೇಶ್, ವಿ.ಎಚ್.ರಾಜು, ಜಯಣ್ಣ, ಎಲ್.ಚಂದ್ರಶೇಖರ್, ಕಾಂತರಾಜಜ್ಪಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.