ಬೆಂಗಳೂರು ಗ್ರಾಮಾಂತರ

ತರಾತುರಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

Published On :

ದೊಡ್ಡಬಳ್ಳಾಪುರ:  ತಿಂಗಳುಗಳಲ್ಲಿ ಆಗದ ಕೆಲಸ ಒಂದೇ ದಿನದಲ್ಲಿ ಆಗಿದೆ. ತರಾತುರಿಯಲ್ಲಿ ಹತ್ತಾರು ಕಾಮಗಾರಿಗಳಿಗೆ ಚಾಲನೆ ಕೊಟ್ಟ ಕೀರ್ತಿಗೆ ಶಾಸಕ ಟಿ.ವೆಂಕಟರಮಣಯ್ಯ ಪಾತ್ರರಾಗಿದ್ದಾರೆ.
ಇದೆಲ್ಲ ಜನಪರ ಹಿತಾಸಕ್ತಿಯ ಒಂದು ಭಾಗ ಎಂದು ವಿಶ್ಲೇಷಿಸುವ ಮುನ್ನ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನೈತಿಕ ಹೊಣೆಗಾರಿಕೆ ಪ್ರದರ್ಶಿತವಾದದ್ದು ಎಂಬುದನ್ನು ಮರೆಯುವ ಹಾಗಿಲ್ಲ. ಶಾಸಕರು ದೊಡ್ಡಬೆಳವಂಗಲ, ಮಧುರೆ, ಸಾಸಲು ಮತ್ತು ಕಸಬಾ ಹೋಬಳಿಯ ಅನೇಕ ಗ್ರಾಮಗಳಿಗೆ ಬೆಳಗ್ಗಿನಿಂದಲೇ ಪ್ರವಾಸ ಮಾಡಿ, ಗುದ್ದಲಿ ಪೂಜೆ, ಶಂಕುಸ್ಥಾಪನೆ, ಸವಲತ್ತುಗಳ ವಿತರಣೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ನಿಷ್ಠೆಯಿಂದ ಭಾಗವಹಿಸಿದ್ದರು.
ಅಂದ ಹಾಗೆ ಅವರು ತಾಲೂಕಿನ ಕಸಬಾ ಹೋಬಳಿ ಸೊಣ್ಣಪ್ಪನಹಳ್ಳಿ ಮತ್ತು ಕೋಡಿಹಳ್ಳಿಯಲ್ಲಿ ರಸ್ತೆ, ಕೊನಘಟ್ಟದಲ್ಲಿ ರಂಗ ಮಂದಿರ, ಲಿಂಗನಹಳ್ಳಿಯಲ್ಲಿ ರಸ್ತೆ, ರಾಜಘಟ್ಟದಲ್ಲಿ ರಂಗಮಂದಿರ ಮತ್ತು ಶಾಲಾ ಕೊಠಡಿ, ಕಂಟನಕುಂಟೆಯಲ್ಲಿ ಕಲಾಕ್ಷೇತ್ರ, ರಾಜೀವಗಾಂಧಿ ಬಡಾವಣೆಯಲ್ಲಿ ಶಾಲೆ ಕಟ್ಟಡ, ನಾಗಸಂದ್ರದಲ್ಲಿ ಸಮುದಾಯಭವನ, ಹೊನ್ನಾಘಟ್ಟ, ಶ್ರವಣೂರಿನಲ್ಲಿ ಸಮುದಾಯ ಭವನ, ದೊಡ್‌ಡಬೆಳವಂಗಲ ಹೋಬಳಿಯ ನಾರನಹಳ್ಳಿ, ದೊಡ್‌ಡಬೆಳವಂಗಲದಲ್ಲಿ ವಿವಿಧ ಕಾಮಗಾರಿಗಳು, ಮಧುರೆ ಹೋಬಳಿಯ ಕಾಡನೂರು, ಕಕ್ಕೇಹಳ್ಳಿ, ಮಧುರೆ ಕ್ರಾಸ್, ಸಾಸಲು ಹೋಬಳಿಯ ಹೊಸಹಳ್ಳಿ, ಸಾಸಲು ಬೀಕನಹಳ್ಳಿಯಲ್ಲಿ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಅದೇ ರೀತಿ ಕಳೆದ 3 ದಿನಗಳಲ್ಲಿ ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಜಲಾನಯನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಲವು ಕಾಮಗಾರಿಗಳು, ನಗರಸಭೆ ವ್ಯಾಪ್ತಿಯಲ್ಲಿ ಹಲವು ಕಾರ್ಯಕ್ರಮಗಳು, ಹಣಬೆ, ವಡೇರಹಳ್ಳಿ ಕಾಡನೂರು, ಕಾರೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳು,ಮಧುರೆಯಲ್ಲಿ ಬಸ್ ಶೆಲ್ಟರ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಹೀಗೆ ಪಟ್ಟಿ ಹೇಳುತ್ತಾ ಹೋದರೆ ಅಬ್ಬಬ್ಬಾ ಎನ್ನುವಷ್ಟು ಬೆಳೆಯುತ್ತದೆ. ಬರಿಯ ಶಂಕುಸ್ಥಾಪನೆಯೇ: ಇದೆಲ್ಲವೂ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ತರಾತುರಿಯಲ್ಲಿ ಆಗಿರುವ ಕೆಲಸ. ಇದು ಬರೀ ಶಂಕುಸ್ಥಾಪನೆ ಮಾತ್ರವಾಗಿರದೆ ವಾಸ್ತವದಲ್ಲಿ ಕಾಮಗಾರಿಗಳು ಆರಂಭವಾಗಿ ಯಶಸ್ವಿಯಾಗಿ ಮುಗಿದರೆ ಮತದಾರ ಪ್ರಭು ಸಂತೃಪ್ತನಾಗಬಹುದು. ತಪ್ಪಿದಲ್ಲಿ ಅದೇ ರಾಗ ಅದೇ ಹಾಡು.
ಬುಧವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ತಾ.ಪಂ ಅಧ್ಯಕ್ಷೆ ನರಸಮ್ಮ, ಕಾಂಗ್ರೆಸ್ ತಾಲೂಕು ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ನಗರ ಕಾರ್ಯದರ್ಶಿ ಡಿ.ವಿ.ಅಶ್ವತ್ಥಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಸ್ಥಳೀಯ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.