ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ
ರಾಮನಗರ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 177 ಪುರುಷ ಮತ್ತು 44 ಮಹಿಳಾ ಪೊಲೀಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಮಾ.27ರ ಸಂಜೆ 6ರವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಮಾ.28 ಕಡೆ ದಿನ. ಮಾ. 27, 2014ಕ್ಕೆ ಅಭ್ಯರ್ಥಿಗೆ ಕನಿಷ್ಟ 19 ವರ್ಷ ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 26 ಹಾಗೂ ಇತರೆ ಅಭ್ಯರ್ಥಿಗಳು 25 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು ರು.100, ಇತರೆ ಅಭ್ಯರ್ಥಿಗಳು ರು.250 ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ನಗದು ರೂಪದಲ್ಲಿ ಹಾಗೂ ಪರೀಕ್ಷಾ ಶುಲ್ಕವನ್ನು ಎಸ್ಬಿಎಂ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನಲ್ಲಿ ಪಾವತಿಸಬಹುದು. ಕೊರಿಯರ್ ಹಾಗೂ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪೂರೈಸಿರಬೇಕು. ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಅಧಿಸೂಚನೆಯಲ್ಲಿರುವ ಷರತ್ತುಗಳನ್ನು ಓದಿದ ನಂತರ ಅರ್ಜಿ ಭರ್ತಿ ಮಾಡುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಸರ್ಕಾರಿ ಪದವಿ ಕಾಲೇಜಲ್ಲಿ ಕಸದಿಂದ ರಸ ವಸ್ತು ಪ್ರದರ್ಶನ
ಕನಕಪುರ: ತ್ಯಾಜ್ಯ ವಸ್ತುಗಳ ನಿರ್ವಹಣೆ, ವಿಲೇವಾರಿ ಹಾಗೂ ಮರುಬಳಕೆಗಳು ಇಂದಿನ ಜ್ವಲಂತ ಸಮಸ್ಯೆಯಾಗಿದ್ದು ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕಸದಿಂದ ರಸವನ್ನು ಸೃಜಿಸುವ, ಉಪಯೋಗಿಸುವ ಮನೋಭಾವನೆ ರೂಪಿಸಬೇಕಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಮರಳವಾಡಿ ಉಮಾಶಂಕರ್ ಹೇಳಿದರು.
ಅವರು ಕೋಡಿಹಳ್ಳಿಯ ಗೌರಮ್ಮಕೆಂಪೇಗೌಡ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಕಸದಿಂದ ರಸ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಎ.ಸಿ.ಚೂಡಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಪದವಿ ಕಾಲೇಜು ವಿದ್ಯಾರ್ಥಿಗಳು ಐದು ಹಂತಗಳಲ್ಲಿ ತಾವೇ ಸ್ವತ: ನಿರುಪಯೋಗಿ ವಸ್ತುಗಳಿಂದ ತಯಾರಿಸಿದ ಆಕರ್ಷಕ ವಸ್ತು ಪ್ರದರ್ಶನ ನೀಡಿದರು. ತೀರ್ಪುಗಾರರಾಗಿ ಮ.ಉಮಾಶಂಕರ್, ಸತೀಶ್, ಚಿದಾನಂದ ಕಾರ್ಯನಿರ್ವಹಿಸಿದರು. ಸಂಚಾಲಕಿ ಪ್ರೊ.ನೂರ್ಫಾತಿಮಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರೊ.ಕೃಷ್ಣಮೂರ್ತಿ,ಅನಿಲ್,ವಾಣಿ, ಮರ್ಸಿ,ರಮ್ಯಾ ಪಾಲ್ಗೊಂಡಿದ್ದರು.
ಸಾಹಿತ್ಯ ಕಮ್ಮಟ: ಕೆ.ಎಸ್.ಲಾವಣ್ಯ ದ್ವಿತೀಯ ಸ್ಥಾನ
ರಾಮನಗರ: ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ್ದ ಜಿಲ್ಲಾ ಮಟ್ಟದ ಸಾಹಿತ್ಯ ಕಮ್ಮಟ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಕನಕಪುರ ತಾಲೂಕಿನ ಗ್ರಾಮಾಂತರ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕೆ.ಎಸ್.ಲಾವಣ್ಯ ಬಾಲಭವನ ಸೊಸೈಟಿಯು ಬೆಂಗಳೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಸಾಹಿತ್ಯ ಕಮ್ಮಟದಲ್ಲಿ ಪ್ರಬಂಧ ಸ್ಪರ್ಧೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು, ಜಿಲ್ಲೆಗೆ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಲಾವಣ್ಯಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ ಅಭಿನಂದಿಸಿದ್ದಾರೆ.
ಕಾರ್ಮಿಕರ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ
ರಾಮನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆಯಿಂದ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಬಾಷ್ ನ್ಯೂಮ್ಯಾನ್ಯುಫ್ಯಾಕ್ಚರ್ ಯೂನಿಟ್ನಲ್ಲಿ ಮಾ.6ರ ಬೆಳಗ್ಗೆ 9.30ಕ್ಕೆ ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯ್ದೆ-1996 ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್ ಉದ್ಘಾಟಿಸುವರು. ಬಾಷ್ ಕಂಪೆನಿಯ ಮೇನೇಜರ್ ಚಂದ್ರಮೌಳಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಮಿಕಾಧಿಕಾರಿ ಎಂ.ನಾಗರಾಜು, ಎ.ಕೆ.ಸಿಂಗ್, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್ ಭಾಗವಹಿಸುವರು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ-1996 ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ನಾಗರಾಜ್ ಉಪನ್ಯಾಸ ನೀಡುವರು.
ವಾದ್ಯ ಪರಿಕರ, ವೇಷಭೂಷಣಗಳಿಗೆ ನೆರವು: ಅರ್ಜಿ ಆಹ್ವಾನ
ರಾಮನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲಾವಿದರಿಗೆ ಸಂಘ ಸಂಸ್ಥೆಗಳನ್ನು ನಡೆಸಲು ಅಗತ್ಯವಾದ ವಾದ್ಯ ಪರಿಕರಗಳು ಅಥವಾ ವೇಷ-ಭೂಷಣಗಳಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕಲಾವಿದರು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಂ.38 ಲೋಕೋಪಯೋಗಿ ಇಲಾಖೆ, ವಸತಿ ಗೃಹ ಕಟ್ಟಡ, ರಾಮನಗರ ಇಲ್ಲಿಗೆ ಮಾ.10ರೊಳಗೆ ಅರ್ಜಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
9 ರಂದು ಶಿವಗಂಗಾ ಪ್ರಶಸ್ತಿ ಪ್ರದಾನ
ನೆಲಮಂಗಲ: ತಾ. ಶಿವಗಂಗೆಯ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ಮಾರ್ಚ್ 9 ಭಾನುವಾರ ಬೆಳಿಗ್ಗೆ 10-30ಕ್ಕೆ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಹಾಗೂ ಶಿವಗಂಗಾ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ ಧ್ವನಿಸುರುಳಿ ಹಾಗೂ ಇ.ಕೃಷ್ಣಪ್ಪ ದಿನದರ್ಶಿಕೆ ಬಿಡುಗಡೆಗೊಳಿಸಲಿದ್ದಾರೆ. ಮಾಜಿ ಸಚಿವ ಆಂಜನಮೂರ್ತಿ ಶ್ರೀ ಮಠದ ವೆಬ್ಸೈಟ್ ಬಿಡುಗಡೆ ಮಾಡುವರು. ಬೆಳಿಗ್ಗೆ 6-30 ಗಂಟೆಗೆ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ, ಕಂಬಾಳು ಸಂಸ್ಥಾನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮು, ತಮ್ಮಡಿಹಳ್ಳಿ ಮಠದ ಆನಂದ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ದೊಡ್ಡಬೆಲೆ ಕಾಲ್ವೆ ಮಠದ ರುದ್ರಮುನಿ ಸ್ವಾಮಿ ಸಮ್ಮುಖದಲ್ಲಿ ಬೆಳಿಗ್ಗೆ 7-30 ಗಂಟೆಗೆ ಧರ್ಮಧ್ವಜಾರೋಹಣ ನೆರವೇರಿಸಲಾಗುವುದು. ಸಿದ್ದಗಂಗಾ ಮಠದ ಸಿದ್ದಲಿಂಗ ಸಾನಿಧ್ಯ ವಹಿಸಲಿದ್ದು, ಶಾಂತಮುನಿ ಶಿವಾಚಾರ್ಯ ಸ್ವಾಮಿ ನುಡಿ ನೈವೇದ್ಯ, ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮಿ ನೇತೃತ್ವ ವಹಿಸಲಿದ್ದಾರೆ. ನಿಸರ್ಗಪ್ರಿಯ ಸಿದ್ದಗಂಗಯ್ಯ ಕಂಬಾಳು ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ
ನೆಲಮಂಗಲ: ಮಹಿಳೆ ಸ್ವಾವಲಂಬಿಯಾಗಲು ಸ್ತ್ರೀಶಕ್ತಿ ಸಂಘ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಾಜಿ ಜಿಪಂ ಸದಸ್ಯ ಸಿ.ಆರ್.ಗೌಡ ಹೇಳಿದರು. ಅವರು ಬುಧವಾರ ತಾಲ್ಲೂಕಿನ ಅರಿಶಿನಕುಂಟೆಯ ಆದರ್ಶನಗರದಲ್ಲಿ ಸರ್ಕಾರದ 5 ಲಕ್ಷ ರು. ಅನುದಾನದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಹಿಳೆಯರ ಗುಡಿ ಕೈಗಾರಿಕೆಗಳ ಪ್ರಾಯೋಗಿಕ ತರಭೇತಿ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮು, ಮಹಿಳಾ ಮುಖಂಡ ಹನುಮಂತಮ್ಮ, ಮುಖಂಡರಾದ ಮೂರ್ತಿ, ನಾಗರಾಜ್, ಚಂದ್ರಕುಮಾರ್, ರಾಜಣ್ಣ, ಬೈರೇಗೌಡ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಡಿ.ಎಂ.ಪದ್ಮನಾಭ್, ಶ್ರೀನಿವಾಸ್ ಸೇರಿದಂತೆ ನೂರಾರು ಜನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

