ಬೆಂಗಳೂರು ಗ್ರಾಮಾಂತರ

ಬಾಲಕಿ ಮದುವೆಗೆ ಯತ್ನ: ಅಧಿಕಾರಿಗಳ ದಾಳಿ

Published On :

ಸೂಲಿಬೆಲೆ:  ಹೋಬಳಿಯ ಯನಗುಂಟೆ ಗ್ರಾಮದ ಛತ್ರವೊಂದರಲ್ಲಿ ಅಪ್ರಾಪ್ತ ಬಾಲಕಿ ಮದುವೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧರಿಸಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬಾಲಕಿ ಮದುವೆ ತಪ್ಪಿಸಿ ಗಂಡಿನ ಕಡೆಯವರ ಗಂಟುಮೂಟೆ ಕಟ್ಟಿಸಿ ಛತ್ರದಿಂದ ಎತ್ತಂಗಡಿ ಮಾಡಿಸಿದ ಘಟನೆ ಮಾ.5 ರಂದು ನಡೆದಿದೆ.
ನಡೆದಿದ್ದೇನು?: ಹೊಸಕೋಟೆ ತಾ. ಸೂಲಿಬೆಲೆ ಹೋಬಳಿಯ ಯನಗುಂಟೆ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದ ಕಲ್ಯಾಣ ಮಂಟಪದಲ್ಲಿ ಮದುವೆಗಳು ನಡೆಯುತ್ತಲೇ ಇರುತ್ತವೆ. ಬೆಂಗಳೂರು ಮೂಲದ ಮಂಡೂರಿನ ಹುಡುಗ ಕೇಶವ ಹಾಗೂ ಯಲಹಂಕದ ಜಾಲ ಹೋಬಳಿ ಅರೆ ಬನ್ನಿಮಂಗಲ ಗ್ರಾಮದ ಸುಷ್ಮಾ(ಹೆಸರು ಬದಲಿಸಿದೆ) ಜೊತೆ ಹಿರಿಯರು ಒಪ್ಪಿ ಮದುವೆ ಗೊತ್ತು ಪಡಿಸಿದ್ದರು.
ಮಾ 5 ಮತ್ತು 6 ರಂದು ಮದುವೆಯನ್ನು ಯನಗುಂಟೆ ಛತ್ರದಲ್ಲಿ ನಡೆಸಲು ನಿಶ್ಚಯಿಸಿದ್ದಾರೆ. ಬಂಧು, ಬಳಗದವರು ಸಂಭ್ರಮದ ಮಧ್ಯ ನೂತನ ಜೋಡಿ ಆರತಕ್ಷತೆಯಲ್ಲಿ ತಲ್ಲಿನರಾಗಿದ್ದರು. ಇತ್ತ ಆಕೇಸ್ಟ್ರಾದವರು ಮದುವೆಯ ಈ ಬಂಧ..ಅನುರಾಗದ ಅನುಬಂಧ ಎಂದು ಹಾಡುತ್ತಿದಂತೆ ಮಾ.5 ರಂದು ರಾತ್ರಿ 11 ಗಂಟೆ ವೇಳೆಯಲ್ಲಿ ಪೊಲೀಸರೊಂದಿಗೆ ದಾಳಿ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ ಅಧಿಕಾರಿಗಳು ಮದುವೆಯನ್ನು ನಿಲ್ಲಿಸುವಂತೆ ಸೂಚಿಸಿದರು.
ಇದರಿಂದ ತಬ್ಬಿಬ್ಬಾದ ಪೋಷಕರು, ಬಂಧುಗಳಿಗೆ ಅಧಿಕಾರಿಗಳು ಸುಷ್ಮಾಳ ವಯಸ್ಸಿನ ದಾಖಲೆಗಳನ್ನು ತೋರಿಸುವಂತೆ ಕೇಳಿದಾಗ ಸುಷ್ಮಾ ಆಪ್ರಾಪ್ತೆ ಎಂಬುದು ಪತ್ತೆಯಾಯಿತು. ಮಾತಿನ ಜಟಾಪಟಿ, ಬಂಧುಗಳಲ್ಲಿ ನಿರಾಸೆ. ಇದರ ನಡುವೆ ಅಧಿಕಾರಿಗಳು ಅಪ್ರಾಪ್ತೆಗೆ ಮದುವೆ ಮಾಡಿದರೆ ಕಾನೂನು ಕ್ರಮದ ಬಗ್ಗೆ ತಿಳಿಹೇಳಿದರು.
ಸುಷ್ಮಾಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡುವುದಾಗಿ ಅಧಿಕಾರಿಗಳಿಗೆ ಮುಚ್ಚಳಿಕೆ ಬರೆದುಕೊಟ್ಟು ಅಂದೇ ರಾತ್ರಿ 12 ಗಂಟೆಗೆಲ್ಲ ಬಂಧು, ಬಳಗದೊಂದಿಗೆ ಸಾಮಾನುಗಳನ್ನು ಗಂಟು ಮೂಟೆ ಕಟ್ಟಿ ಛತ್ರದಿಂದ ಅವರನ್ನು ಎತ್ತಂಗಡಿ ಮಾಡಿಸುವಲ್ಲಿ ಅಧಿಕಾರಿಗಳು ಸಫಲರಾದರು.
ರಾತ್ರಿ ನಡೆದ ವಿಚಾರ ತಿಳಿಯದ ಆಮಂತ್ರಿತರು, ಬಂಧುಗಳು ಮಾ.6 ರಂದು ಮುಹೂರ್ತಕ್ಕೆ ಹಾಜರಾಗಲು ಛತ್ರಕ್ಕೆ ಬಂದು ವಿಚಾರ ತಿಳಿದು ವಾಪಸ್ಸು ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.