ಬೆಂಗಳೂರು ಗ್ರಾಮಾಂತರ

ಮಹಿಳಾ ದರ್ಬಾರ್‌ಗೆ ನಗರಸಭೆ ತಯಾರಿ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಇದೀಗ ಮಹಿಳಾ ಮಣಿಗಳ ಕೈಗೆ ಪೂರ್ಣ ಪ್ರಮಾಣದ ಅಧಿಕಾರ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ. ನಗರಸಭೆಯ ಇತಿಹಾಸದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗಳೆರಡೂ ಮಹಿಳೆಯರಿಗೆ ಮೀಸಲಾಗಿರುವುದು ಇದೇ ಮೊದಲು.
 ಮಾರ್ಚ್ 13ರ ಗುರುವಾರಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿದೆ. ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಕೆ ನಡೆಯಲಿದ್ದು, 11 ಗಂಟೆಯವರೆಗೆ ಉಮೇದುವಾರಿಕೆ ಸಲ್ಲಿಸಬಹುದು. ಮಧ್ಯಾಹ್ನ 1.15ರಿಂದ 1.30ರೊಳಗೆ ನಾಮಪತ್ರ ಹಿಂದಕ್ಕೆ ಪಡೆಯಬಹುದು. ಅಗತ್ಯಬಿದ್ದಲ್ಲಿ 1.30ರ ನಂತರ ಚುನಾವಣೆ ನಡೆಸಲಾಗುವುದು ಎಂದು ಉಪವಿಭಾಗಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಬಲಾಬಲ: ದೊಡ್ಡಬಳ್ಳಾಪುರ ನಗರಸಭೆಯ 31 ಸ್ಥಾನಗಳ ಪೈಕಿ ಜೆಡಿಎಸ್-14, ಬಿಜೆಪಿ-6, ಕಾಂಗ್ರೆಸ್-4, ಕನ್ನಡಪಕ್ಷ-2, ಪಕ್ಷೇತರ-5 ಸದಸ್ಯರ ಬಲಾಬಲ ಹೊಂದಿವೆ. ಈ ಪೈಕಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಹುಮತ ಪಡೆಯಬೇಕಾದ ವ್ಯಕ್ತಿ ಅಥವಾ ಪಕ್ಷ ಕನಿಷ್ಠ 17 ಸದಸ್ಯ ಬಲದ ಸರಳ ಬಹುಮತ ಪಡೆಯಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರು ಮತ್ತು ಶಾಸಕರಿರುವುದರಿಂದ ಕಾಂಗ್ರೆಸ್ ಪಾಲಿಗೆ 2 ಹೆಚ್ಚುವರಿ ಮತಗಳು ಇದ್ದಂತಾಗಿದೆ. ಆದಾಗ್ಯೂ ಜೆಡಿಎಸ್‌ಗೆ ಅಧ್ಯಕ್ಷ ಗಾದಿಯ ಅವಕಾಶ ಹೆಚ್ಚು ಎನ್ನಲಾಗುತ್ತಿದೆ.
ರೇಸ್‌ನಲ್ಲಿ ಯಾರ್ಯಾರು: ಅಧ್ಯಕ್ಷ ಗಾದಿ ಹಿಂದುಳಿದ ವರ್ಗ ಎ (ಮಹಿಳೆ)ಗೆ ಮೀಸಲಾಗಿರುವುದರಿಂದ ಈ ಬಾರಿ 7 ಮಂದಿ ಅರ್ಹ ಅಭ್ಯರ್ಥಿಗಳು ಅಧ್ಯಕ್ಷಗಾದಿಯ ಕನಸು ಕಾಣಬಹುದಾಗಿದೆ. ಅದರಲ್ಲಿ 3 ಮಂದಿ ಬಿಸಿಎಂ ಎ(ಮಹಿಳೆ) ಮತ್ತು 4 ಮಂದಿ ಸಾಮಾನ್ಯ (ಮಹಿಳೆ) ಕ್ಷೇತ್ರಗಳಿಂದ ಗೆದ್ದು ಬಂದವರಾಗಿದ್ದಾರೆ. ಜೆಡಿಎಸ್‌ನಲ್ಲಿ 4 ಮಂದಿಗೆ ಅಧ್ಯಕ್ಷ ಗಾದಿಯನ್ನೇರುವ ಅವಕಾಶ ಇದೆ. 9ನೇ ವಾರ್ಡ್ ಸಂಜಯನಗರದಿಂದ ಗೆದ್ದಿರುವ ಸುಶೀಲಮ್ಮ, 23ನೇ ವಾರ್ಡ್ ಚಿಕ್ಕಪೇಟೆಯಿಂದ ಗೆದ್ದಿರುವ ಶಂಶುನ್ನೀಸಾ, 25ನೇ ವಾರ್ಡ್ ಎಲೆಪೇಟೆಯಿಂದ ಗೆದ್ದಿರುವ ಯಶೋಧಮ್ಮ, 26ನೇ ವಾರ್ಡ್ ಕುಂಬಾರಪೇಟೆಯಿಂದ ಗೆದ್ದಿರುವ ಅನಸೂಯಮ್ಮ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.
ಉಳಿದಂತೆ 10ನೇ ವಾರ್ಡ್ ವೀರಭದ್ರನಪಾಳ್ಯದಿಂದ ಗೆದ್ದಿರುವ ಪಕ್ಷೇತರ ಸದಸ್ಯೆ ಕೆ.ಸಿ.ಭಾಗ್ಯ, 13ನೇ ವಾರ್ಡ್ ಭುವನೇಶ್ವರಿ ನಗರದಿಂದ ಗೆದ್ದಿರುವ ಕನ್ನಡಪಕ್ಷದ ಎನ್.ಮಂಜುಳಾ ಮತ್ತು 15ನೇ ವಾರ್ಡ್ ಚೌಡೇಶ್ವರಿಗುಡಿಬೀದಿಯಿಂದ ಗೆದ್ದಿರುವ ಕಾಂಗ್ರೆಸ್‌ನ ಜಯಲಕ್ಷ್ಮಿ ಕೂಡ ಅಧ್ಯಕ್ಷರಾಗುವ ಅವಕಾಶ ಹೊಂದಿದ್ದಾರೆ.
 ಈ ಪೈಕಿ ಜೆಡಿಎಸ್‌ನ ಯಶೋಧಮ್ಮ ಮತ್ತು ಶಂಶುನ್ನೀಸಾ, ಕನ್ನಡಪಕ್ಷದ ಎನ್. ಮಂಜುಳಾ 2ನೇ ಬಾರಿ ನಗರಸಭೆ ಪ್ರವೇಶಿಸಿದ್ದರೆ, ಉಳಿದ ನಾಲ್ವರು ಇದೇ ಮೊದಲ ಬಾರಿ ನಗರಸಭಾ ಸದಸ್ಯರಾಗಿದ್ದಾರೆ.
ಪಕ್ಷೇತರರತ್ತ ಎಲ್ಲರ ಚಿತ್ತ: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳ ಚಿತ್ತ ಪಕ್ಷೇತರರತ್ತ ನೆಟ್ಟಿದೆ. ನಗರಸಭೆ ಚುನಾವಣೆಯಲ್ಲಿ ಗಣನೀಯ ಸಾಧನೆ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಜೆಡಿಎಸ್‌ಗೆ ಗಾಡ್‌ಫಾದರ್ ಇಲ್ಲದಾಗಿದೆ. 5 ಬಾರಿ ಗೆದ್ದರೂ ತ.ನ.ಪ್ರಭುದೇವ್ ಅವರಿಗೆ ಅಧ್ಯಕ್ಷರಾಗುವ ಸುಯೋಗ ಬಂದಿಲ್ಲ. ಆದಾಗ್ಯೂ ಹೆಚ್ಚಿನ ಸದಸ್ಯ ಬಲ ಹೊಂದಿರುವುದು ಪಕ್ಷಕ್ಕೆ ಸಮಾಧಾನದ ಸಂಗತಿ. ಕನಿಷ್ಠ 2 ಅಥವಾ 3 ಮಂದಿ ಪಕ್ಷೇತರ ಸದಸ್ಯರ ಬೆಂಬಲ ಪಡೆದರೂ ಅಧ್ಯಕ್ಷ ಗಾದಿ ಹಾದಿ ಸುಗಮವಾಗುತ್ತದೆ. ಪಕ್ಷೇತರರಲ್ಲೂ ಒಬ್ಬರು ಅರ್ಹ ಸದಸ್ಯರಿರುವುದು ಸಮಸ್ಯೆ ಜಟಿಲವಾಗುವ ನಿರೀಕ್ಷೆ ಇದೆ. ಬಿಜೆಪಿಯಲ್ಲಿ ಮೀಸಲು ಅರ್ಹ ಅಭ್ಯರ್ಥಿ ಇಲ್ಲ. ಕಾಂಗ್ರೆಸ್, ಕನ್ನಡಪಕ್ಷದ ಹಾದಿಗೆ ಎಡರು-ತೊಡರುಗಳೇ ಹೆಚ್ಚು. ಕಳೆದ ಬಾರಿಯ ಲೋಪಗಳು ಕಲಿಸಿಕೊಟ್ಟ ಪಾಠದ ಪರಿಣಾಮ ಪಕ್ಷಾಂತರದ ಹಾರಾಟಗಳು ಈ ಬಾರಿ ಅಸಾಧ್ಯ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಅಧ್ಯಕ್ಷ ಗಾದಿ ಯಾರ ಪಾಲಾಗಲಿದೆ ಎಂಬುದು ಯಕ್ಷಪ್ರಶ್ನೆ.
ಉಪಾಧ್ಯಕ್ಷ ಗಾದಿಗೆ 12 ಅವಕಾಶ: 31 ಕ್ಷೇತ್ರಗಳ ಪೈಕಿ 12ರಲ್ಲಿ ಗೆದ್ದಿರುವ ಮಹಿಳೆಯರಲ್ಲಿ ಯಾರಾದರೂ ಒಬ್ಬರು ಉಪಾಧ್ಯಕ್ಷರಾಗಬಹುದು. ಆದರೆ ಎಲ್ಲ 12 ಮಂದಿಯೂ ಸ್ಪರ್ಧಾಳುಗಳು ಎನ್ನುವುದರಲ್ಲಿ ಸಂಶಯವಿಲ್ಲ.
ಏನೇ ಆಗಲಿ, ಅಪರೂಪಕ್ಕೊಮ್ಮೆ ಮಹಿಳೆಯರ ಕೈಗೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ.

ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಹೊಂದಿರುವವರು...
ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ(ಮಹಿಳೆ) ಮೀಸಲಾತಿ ಅರ್ಹತೆ ಹೊಂದಿರುವವರು
1. ಸುಶೀಲಮ್ಮ (ಜೆಡಿಎಸ್)-ವಾರ್ಡ್ ನಂ.9, ಸಂಜಯನಗರ.
2. ಕೆ.ಸಿ.ಭಾಗ್ಯ (ಪಕ್ಷೇತರ)- ವಾರ್ಡ್ ನಂ.10, ವೀರಭದ್ರನಪಾಳ್ಯ.
3. ಎನ್.ಮಂಜುಳಾ (ಕನ್ನಡಪಕ್ಷ)- ವಾರ್ಡ್ ನಂ.13, ಭುವನೇಶ್ವರಿನಗರ.
4. ಸಿ.ಜಯಲಕ್ಷ್ಮೀ (ಕಾಂಗ್ರೆಸ್)- ವಾರ್ಡ್ ನಂ.15, ಚೌಡೇಶ್ವರಿಗುಡಿ ಬೀದಿ.
5. ಶಂಶುನ್ನೀಸಾ (ಜೆಡಿಎಸ್)-ವಾರ್ಡ್ ನಂ.23, ಚಿಕ್ಕಪೇಟೆ.
6. ಯಶೋಧಮ್ಮ (ಜೆಡಿಎಸ್)- ವಾರ್ಡ್ ನಂ.25, ಎಲೆಪೇಟೆ.
7. ಅನಸೂಯಮ್ಮ (ಜೆಡಿಎಸ್)- ವಾರ್ಡ್ ನಂ.26, ಕುಂಬಾರಪೇಟೆ.

ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮಹಿಳೆ)
1. ಮಮತಾಶ್ರೀ (ಕಾಂಗ್ರೆಸ್)
2. ಸೌಭಾಗ್ಯನಾಯಕ್ (ಕನ್ನಡಪಕ್ಷ)
3. ಸುಶೀಲಮ್ಮ (ಜೆಡಿಎಸ್)
4. ಕೆ.ಸಿ.ಭಾಗ್ಯ  (ಪಕ್ಷೇತರ)
5. ಎನ್.ಮಂಜುಳಾ (ಕನ್ನಡಪಕ್ಷ)
6. ಸಿ.ಜಯಲಕ್ಷ್ಮೀ (ಕಾಂಗ್ರೆಸ್
7.ಗಾಯತ್ರಿಪ್ರಕಾಶ್ (ಪಕ್ಷೇತರ)
8. ಶಂಶುನ್ನೀಸಾ (ಜೆಡಿಎಸ್)
9. ಸುವರ್ಣ (ಪಕ್ಷೇತರ)
10.ಯಶೋಧಮ್ಮ (ಜೆಡಿಎಸ್)
11.ಅನಸೂಯಮ್ಮ (ಜೆಡಿಎಸ್)
12.ಎಸ್.ಸುಶೀಲ (ಜೆಡಿಎಸ್).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.