ಬೆಂಗಳೂರು ಗ್ರಾಮಾಂತರ

ಆಮ್ ಆದ್ಮಿ ಎನ್‌ಆರ್‌ಐ ಅಕ್ರಮ ಕೂಸು

Published On :

ರಾಮನಗರ: ಆಮ್ ಆದ್ಮಿ ಪಕ್ಷವು ಎನ್.ಆರ್.ಐ.ಗಳ ಅಕ್ರಮ ಕೂಸು. ಅದರ ನೇತಾರ ಅರವಿಂದ ಕೇಜ್ರಿವಾಲ್ ನಯವಂಚಕ. ಅವರೆಲ್ಲ ಪೊರಕೆ ಹಿಡಿದು ಕಸ ಗುಡಿಸಲಷ್ಟೇ ಲಾಯಕ್ಕು. ಆಡಳಿತ ನಡೆಸಲು ನಾಲಾಯಕ್ಕು ಎಂದು ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಟೀಕಿಸಿದರು.
ಆಮ್ ಆದ್ಮಿ ಎಂದು ಹೆಸರಿಟ್ಟುಕೊಂಡ ಪಕ್ಷದಲ್ಲಿ ರು.100 ಕೋಟಿಗೂ ಅಧಿಕ ನಿಧಿಯಿದೆ. ಪಕ್ಷವು ಜನ ಸಾಮಾನ್ಯರ ನಡುವೆ ಇರುವವರ ಬದಲು ಐಟಿಬಿಟಿ ಉದ್ಯೋಗಿಗಳಿಗೆ ಟಿಕೆಟ್ ನೀಡುತ್ತಿದೆ. ಅಂಥವರಿಂದ ಜನಪರ ಆಡಳಿತ ಹೇಗೆ ಸಾಧ್ಯ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಹವಾನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡಿ, ಐಶಾರಾಮಿ ಕಾರುಗಳಲ್ಲಿ ಸಂಚರಿಸುವ ಐಟಿಬಿಟಿ ಉದ್ಯೋಗಿಗಳಿಗೆ ಶ್ರೀಸಾಮಾನ್ಯರ ಬವಣೆಗಳ ಬಗ್ಗೆ ಕಿಂಚಿತ್ ಅರಿವಿಲ್ಲ. ಹೀಗಾಗಿ ಅವರಿಗೆ ಅಧಿಕಾರ ಸಿಕ್ಕರೂ ಜನರ ಕಷ್ಟ-ಕಾರ್ಪಣ್ಯಗಳಿಗೆ ಅವರು ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು.
ಆಮ್ ಆದ್ಮಿ ಮತ್ತದರ ನೇತಾರರು ಹೇಗೆ ಏನು ಎಂಬುದು ಈಗಾಗಲೇ ದೆಹಲಿಯಲ್ಲಿ ಅನಾವರಣಗೊಂಡಿದೆ. ಪ್ರಭಾವಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಕೇಜ್ರಿವಾಲ್ ಮತ್ತು ಸಂಗಡಿಗರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದೇಶದಲ್ಲೆಲ್ಲೂ ಆಮ್ ಆದ್ಮಿ ಹವಾ ಇಲ್ಲ ಎಂದರು.
ಯಡಿಯೂರಪ್ಪ ಸೋಲು: ಕೆಜೆಪಿ ಕತ್ತು ಹಿಚುಕಿ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಶಿವಮೊಗ್ಗದಲ್ಲಿ ತಾವು ಕಣಕ್ಕೆ ಇಳಿಯುತ್ತಿದ್ದು, ಯಡಿಯೂರಪ್ಪ ಸೋಲಿಸಲು ಸಂಘ-ಪರಿವಾರ ಮತ್ತು ಬಿಜೆಪಿ ಹಲವು ಧುರೀಣರು ನನಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಪದ್ಮನಾಭ ಪ್ರಸನ್ನಕುಮಾರ್ ಹೇಳಿದರು. ಯಡಿಯೂರಪ್ಪ ಅವರಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಅವರು ತುಮಕೂರಿಗೆ ಕ್ಷೇತ್ರಾಂತರ ಮಾಡುವ ಹವಣಿಕೆಯಲ್ಲಿದ್ದಾರೆ. ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದರೂ ಅವರೆದುರು ಕೆಜೆಪಿಯಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲಾಗುವುದು. ಯಡಿಯೂರಪ್ಪ ಸೋಲಿಸುವುದೇ ಕೆಜೆಪಿ ಗುರಿ ಎಂದರು.
ಗ್ರಾಮಾಂತರಕ್ಕೆ ಷರೀಫ್: ರಾಷ್ಟ್ರೀಯ ಪಕ್ಷಗಳು ಅಲ್ಪ ಸಂಖ್ಯಾತರನ್ನು ನ್ಯಾಪ್ಕಿನ್ ರೀತಿ ಬಳಸಿಕೊಳ್ಳುತ್ತಿವೆ. ಅವರಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ. ತಮ್ಮ ಪಕ್ಷವು ರಾಜ್ಯದ 7 ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತರನ್ನು ಕಣಕ್ಕಿಳಿಸಲಿದೆ. ಬೆಂಗಳೂರು ಗ್ರಾಮಾಂತರಕ್ಕೆ ಕನಕಪುರ ಮೂಲದ ಅಕ್ಮಲ್ ಷರೀಫ್ ಅಭ್ಯರ್ಥಿ ಎಂದು ಪದ್ಮನಾಭ ಪ್ರಸನ್ನಕುಮಾರ್ ಘೋಷಿಸಿದರು.
ಎಲ್ಲ 28 ಕ್ಷೇತ್ರಗಳಲ್ಲೂ ಕೆಜೆಪಿ ಸ್ಪರ್ಧಿಸುತ್ತಿದ್ದು, ಸ್ವತಃ ತಮ್ಮ ಸ್ಪರ್ಧೆಯ ಕ್ಷೇತ್ರವಾದ ಶಿವಮೊಗ್ಗ ಸೇರಿದಂತೆ 2 ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಅಕ್ಮಲ್ ಷರೀಫ್, ವಸೀಂ ಪಾಷ, ಸಲೀಂ ಖಾನ್, ವೆಂಕಟೇಶ್, ಶಿವಕುಮಾರ್ ಹಾಜರಿದ್ದರು.
ಕಾಂಗ್ರೆಸ್ ವಿರುದ್ಧ ಕೆಜೆಪಿ ದೂರು
ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಭಾರತ್ ನಿರ್ಮಾಣ ಯಾತ್ರೆಯಲ್ಲಿ ಭಾರಿ ಪ್ರಮಾಣದಲ್ಲಿ ಫ್ಲೆಕ್ಸ್ ಸಹಿತ ಪ್ರಚಾರ ಸಾಮಗ್ರಿಗಳು, ಧ್ವನಿವರ್ಧಕ, ಪಟಾಕಿ ಸಿಡಿತ ಮತ್ತು ಅನುಮತಿ ರಹಿತ ವಾಹನಗಳ ಬಳಕೆಯಾಗುತ್ತಿರುವ ಸಂಬಂಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಅನುಮತಿ ಇಲ್ಲದೆ ಲಕ್ಷಾಂತರ ರು. ವೆಚ್ಚದ ಪ್ರಚಾರ ಸಾಮಗ್ರಿಗಳನ್ನು ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಅಳವಡಿಸಲಾಗಿದೆ. ಅದೆಲ್ಲದರ ವೀಡಿಯೋ ಚಿತ್ರೀಕರಣ ಮಾಡಿ, ಸಂಭಾವ್ಯ ಅಭ್ಯರ್ಥಿ ಲೆಕ್ಕಕ್ಕೆ ಪರಿಗಣಿಸಬೇಕು. ಯಾತ್ರೆ ಜತೆಗಿರುವ ವಾಹನಗಳನ್ನು ವಶಪಡಿಸಿಕೊಂಡು, ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.