ಬೆಂಗಳೂರು ಗ್ರಾಮಾಂತರ

ನಗರಸಭೆಯಲ್ಲಿ ಮಹಿಳಾ ದರ್ಬಾರ್ ಆರಂಭ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಮಹಿಳಾ ದರ್ಬಾರ್ ಆರಂಭವಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗಳೆರಡೂ ಮಹಿಳೆಯರ ಪಾಲಾಗಿದ್ದು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಅಧ್ಯಕ್ಷ ಪದವಿಗೆ ಭಾಜನರಾಗಿರುವುದು ವಿಶೇಷವಾಗಿದೆ.
ಅಷ್ಟೇನೂ ಕುತೂಹಲ ಕೆರಳಿಸದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಿರೀಕ್ಷೆಯಂತೆ ನಡೆಯಿತು. ಕೊನೆ ಹಂತದಲ್ಲಿ ನಡೆದ ರಾಜಕೀಯ ಮೇಲಾಟಗಳಲ್ಲಿ ಪಕ್ಷೇತರ ಸದಸ್ಯರೊಬ್ಬರು ಜೆಡಿಎಸ್-ಕನ್ನಡಪಕ್ಷದ ಮೈತ್ರಿ ರಾಜಕಾರಣಕ್ಕೆ ಅಸ್ತು ಎಂದ ಮೇಲೆ ಜಟಿಲಗೊಂಡಿದ್ದ ಸಮಸ್ಯೆ ನೀರಿನಂತೆ ತಿಳಿಗೊಂಡಿತು. ಇದರಿಂದಾಗಿ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ, ಬಿಜೆಪಿ ಮತ್ತು ಇತರ ಪಕ್ಷೇತರ ಸದಸ್ಯರೊಡಗೂಡಿ ಮಾಡಿದ ಸಾಹಸ ವ್ಯರ್ಥವಾಯಿತು. ಜೊತೆಗೆ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು.
ರಾಜಕೀಯ ಮೇಲಾಟ: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಕೊನೆಯ ಹಂತದಲ್ಲಿ ರಾಜಕೀಯ ಮೇಲಾಟ ಕೆಲ ಕಾಲ ಚರ್ಚೆಗೆ ಕಾರಣವಾಯಿತು. ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್‌ನ 4, ಬಿಜೆಪಿಯ 6, ಪಕ್ಷೇತರ 3 ಸದಸ್ಯರೂ ಸೇರಿದಂತೆ ಜೆಡಿಎಸ್ ಪಕ್ಷದ ಪ್ರಭಾವಿ ಸದಸ್ಯರೊಬ್ಬರನ್ನು ಸೆಳೆಯುವ ತಂತ್ರ ಮಾಡಿದರು. ಜೆಡಿಎಸ್‌ನ ಯಶೋಧಮ್ಮ ಕೊನೆಗೂ  ಮತ ಚಲಾಯಿಸಲಿಲ್ಲ. ಆದರೆ ಇದೇ ಸಂದರ್ಭಕ್ಕೆ ಪಕ್ಷೇತರ ಸದಸ್ಯ ಗಾಯತ್ರಿ ಜೆಡಿಎಸ್‌ನ ಬೆಂಬಲಿಸುವ ಮೂಲಕ ಶಂಶುನ್ನೀಸಾ ಆಯ್ಕೆ ಅಧಿಕೃತಗೊಂಡಿತು.
ಉಳಿದಂತೆ ಉಪಾಧ್ಯಕ್ಷ ಸ್ಥಾನ ಪೂರ್ವನಿಗದಿಯಂತೆ ಕನ್ನಡಪಕ್ಷದ ಸದಸ್ಯೆ ಮಂಜುಳಾ ಅವರ ಪಾಲಾಯಿತು. ಸತತ 2 ಬಾರಿ ಗೆಲವು ಸಾಧಿಸುವ ಮೂಲಕ ಗುರುತಿಸಿಕೊಂಡಿದ್ದ ಮಂಜುಳಾ ಅವರಿಗೆ ಪ್ರಬಲ ಪೈಪೋಟಿ ಇರಲಿಲ್ಲ. ಕನ್ನಡಪಕ್ಷದವರೇ ಆದ ಸೌಭಾಗ್ಯಮ್ಮ ಇದೇ ಮೊದಲ ಬಾರಿ ನಗರಸಭೆಗೆ ಆಯ್ಕೆಯಾಗಿದ್ದು, ಜೇಷ್ಠತೆ ಆಧಾರದಲ್ಲಿ ಮಂಜುಳಾ ಅಧಿಕಾರ ಪಡೆದರು.
ವಿಜಯೋತ್ಸವ: ಶಂಶುನ್ನೀಸಾ ಮತ್ತು ಮಂಜುಳಾ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗುತ್ತಿದ್ದಂತೆ ಜೆಡಿಎಸ್ ಮತ್ತು ಕನ್ನಡಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಲವೆಡೆ ಕಾರ್ಯಕರ್ತರು ಸಿಹಿ ಹಂಚಿ ಸಡಗರ ಹಂಚಿಕೊಂಡರು.

ಶಾಸಕರಿಗೆ ನೈತಿಕ ರಾಜಕಾರಣ ಗೊತ್ತಿಲ್ಲ: ಆಕ್ರೋಶ
ದೊಡ್ಡಬಳ್ಳಾಪುರ:
ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ನೈತಿಕ ರಾಜಕಾರಣ ಗೊತ್ತಿಲ್ಲ. ಜನ ತಿರಸ್ಕರಿಸಿದ್ದರೂ ಅಡ್ಡದಾರಿಯ ಮೂಲಕ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಿದ್ದು ಅಕ್ಷಮ್ಯ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಗೋವಿಂದರಾಜು ಟೀಕಿಸಿದ್ದಾರೆ.
ನಗರಸಭೆಯಲ್ಲಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬದ್ಧ ಎದುರಾಳಿ ಬಿಜೆಪಿಯ ಸದಸ್ಯರನ್ನೂ ಒಳಗೊಂಡಂತೆ ಅಪವಿತ್ರ ಮೈತ್ರಿಗೆ ಮುಂದಾಗುವ ಮೂಲಕ ಅವರ ಸಣ್ಣತನ ಮೆರೆದಿದ್ದಾರೆ. ಅಲ್ಲದೆ ಜೆಡಿಎಸ್ ಪಕ್ಷದ ಸದಸ್ಯರೊಬ್ಬರಿಗೆ ಆಮಿಷ ಒಡ್ಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ನೈತಿಕತೆಗೆ ಕಳಂಕ ತಂದಿದ್ದಾರೆ. ಜನ ಕೇವಲ 4 ಸ್ಥಾನಗಳನ್ನು ಕೊಡುವ ಮೂಲಕ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಆದರೆ ಇವರ ಅಧಿಕಾರ ಬಲ ಬಳಸಿಕೊಂಡು ಸದಸ್ಯರನ್ನು ಖರೀದಿಸುವ ಹೊಣೆಗೇಡಿತನಕ್ಕೆ ಇಳಿದದ್ದು ಖಂಡನೀಯ. ರಾಷ್ಟ್ರ ಮಟ್ಟದಿಂದ ಹಿಡಿದು ಸ್ಥಳೀಯ ಹಂತದವರೆಗೆ ಬದ್ಧ ವೈರಿಗಳಾಗಿ ಗುರುತಿಸಿಕೊಳ್ಳುವ ಬಿಜೆಪಿ-ಕಾಂಗ್ರೆಸ್ ತನ್ನೆಲ್ಲ ತತ್ವ ಸಿದ್ಧಾಂತಗಳನ್ನೂ ಬದಿಗಿಟ್ಟು ಬೀದಿ ರಾಜಕಾರಣ ಮಾಡಲು ಮುಂದಾದದ್ದು ಆಕ್ಷೇಪಾರ್ಹ. ಈ ಬಗೆಯ ರಾಜಕಾರಣ ನಗರಸಭೆಯಲ್ಲಿ ಸುಳಿಯುವುದು ಬೇಡ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.