ಸ್ವಕ್ಷೇತ್ರ ಬೆಂ. ಗ್ರಾ. ದಿಂದಲೇ ಸ್ಪರ್ಧಿಸಿ
ರಾಮನಗರ: ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಪಲಾಯನದ ಅಪಕೀರ್ತಿ, ಕ್ಷೇತ್ರಾಂತರಿ ಪಟ್ಟ ಕಟ್ಟಿಕೊಳ್ಳುವ ಜತೆಗೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ತರ್ಪಣ ಬಿಡುವ ಬದಲು ಸ್ವಕ್ಷೇತ್ರ ಬೆಂಗಳೂರು ಗ್ರಾಮಾಂತರದಿಂದಲೇ ಕಣಕ್ಕೆ ಇಳಿಯುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲಿಗರು ದುಂಬಾಲು ಬಿದ್ದಿದ್ದಾರೆ.
ಕ್ಷೇತ್ರಾಂತರ ಸುಳಿವಿನ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ, ಇಲ್ಲಿನ ಹಾಲಿ-ಮಾಜಿ ಶಾಸಕರು, ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗಿಳಿಯುವ ತೀರ್ಮಾನ ಕೈಗೊಳ್ಳದಂತೆ ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ದಕ್ಕಿಸಿಕೊಳ್ಳಲು ತಮ್ಮ ಸ್ಪರ್ಧೆಯ ಅನಿವಾರ್ಯತೆಯನ್ನು ಕುಮಾರಸ್ವಾಮಿ ಮುಂದಿಟ್ಟಿದ್ದು, ಒಂದೊಮ್ಮೆ ತೀರಾ ಅಗತ್ಯ ಎನ್ನುವುದೇ ಆದರೆ ಬೆಂಗಳೂರು ಗ್ರಾಮಾಂತರದಿಂದಲೇ ಸ್ಪರ್ಧಿಸಿ ಎಂದು ಬೆಂಬಲಿಗರು ಒತ್ತಡ ಹೇರಿದ್ದಾರೆ.
ಜೆಡಿಎಸ್ ಈ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ. ಕುಮಾರಸ್ವಾಮಿ ಚಿಕ್ಕಬಳ್ಳಾಪುರಕ್ಕೋ ಅಥವಾ ಬೆಂಗಳೂರು ಗ್ರಾಮಾಂತರಕ್ಕೋ ಎನ್ನುವ ಗೊಂದಲ ಎದುರಾಳಿ ಪಕ್ಷದವರನ್ನು ಕಾಡುತ್ತಿದೆ. ನಮಗೆ ತಪ್ಪಿದರೆ ಸಾಕು ಎಂದು ಎರಡೂ ಕಡೆಯ ಪ್ರತಿಸ್ಪರ್ಧಿಗಳು ಬಯಸುತ್ತಿದ್ದಾರೆ.
ಅಭ್ಯರ್ಥಿಯಿಂದಲೇ ಆಹ್ವಾನ: ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರಕ್ಕೆ ಹೋಗುವುದಾದರೆ ಇಲ್ಲಿ ತಮಗೆ ಹಿನ್ನೆಡೆ ಆಗುವ ಭೀತಿ ಬೆಂಗಳೂರು ಗ್ರಾಮಾಂತರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ಅವರನ್ನು ಸಹಜವಾಗಿಯೇ ಕಾಡುತ್ತಿದೆ. ಸ್ವತಃ ಅವರೂ ಕೂಡ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆಗೆ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದಾರೆ.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಬುಧವಾರವೂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದು, ಕ್ಷೇತ್ರ ಬದಲಾವಣೆ ನಿಲುವಿನಿಂದ ಹಿಂದೆ ಸರಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ
ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೌಡರ ಬಳಿಗೂ ನಿಯೋಗ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾದ ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರನೇಕರು, ಚಿಕ್ಕಬಳ್ಳಾಪುರದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಯಾವ ಕಾರಣಕ್ಕೂ ಅವಕಾಶ ನೀಡಕೂಡದು ಎಂದು ಆಗ್ರಹಿಸಿದ್ದಾರೆ. ಕುಮಾರಸ್ವಾಮಿ ಕ್ಷೇತ್ರಾಂತರದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಅದರಲ್ಲೂ ರಾಮನಗರ ಜಿಲ್ಲೆಯಲ್ಲಿ ಪಕ್ಷದ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳನ್ನು ವಿವರಿಸಿದ್ದು, ಈ ಅಭಿಪ್ರಾಯಕ್ಕೆ ಸ್ವತಃ ದೇವೇಗೌಡರೂ ತಲೆದೂಗಿದ್ದಾರೆ.
ರಾಮನಗರದಿಂದ ತೆರಳಿದ್ದ ನಿಯೋಗ, ದೂರವಾಣಿ ಕರೆ ಮಾಡಿದವರಿಗೆ ಚಿಕ್ಕಬಳ್ಳಾಪುರದಲ್ಲಿ ತಮ್ಮ ಸ್ಪರ್ಧೆಯಿಂದ ಅಲ್ಲಿ ಮತ್ತು ಆಸುಪಾಸಿನ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಆಗುವ ಅನುಕೂಲತೆಗಳನ್ನು ಮನದಟ್ಟು ಮಾಡಿಕೊಡಲು ಕುಮಾರಸ್ವಾಮಿ ಯತ್ನಿಸಿರುವುದನ್ನು ಗಮನಿಸಿದರೆ ಅವರು ಸ್ಪರ್ಧೆಗೆ ಸಿದ್ಧವಾದಂತಿದೆ.
ಗೆಲ್ಲಿಸಿ ಕೊಡುತ್ತೇವೆ...
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸುವುದೇ ಆದರೆ ಬೆಂಗಳೂರು ಗ್ರಾಮಾಂತರದಲ್ಲೇ ಕಣಕ್ಕಿಳಿಯಬೇಕು. ಅವರನ್ನು ಇಲ್ಲಿ ಗೆಲ್ಲಿಸಿಕೊಳ್ಳುವ ಹೊಣೆ ನಮ್ಮದು. ಯಾವ ಕಾರಣಕ್ಕೂ ಬೇರೆಡೆ ಸ್ಪರ್ಧೆಗೆ ಹೋಗಲು ನಾವು ಅವರನ್ನು ಬಿಟ್ಟುಕೊಡುವುದಿಲ್ಲ.
ಟಿ ಪ್ರಭಾಕರರೆಡ್ಡಿ, ಜೆಡಿಎಸ್ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ.
ದಾಖಲೆ ಇಲ್ಲದೆ ಒಯ್ಯುತ್ತಿದ್ದ ರು. 1.80 ಲಕ್ಷ ವಶ, ಪ್ರಕರಣ
ಚನ್ನಪಟ್ಟಣ: ತಾಲೂಕಿನ ಕುಂಬಾರಕಟ್ಟೆ ಬಳಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ನಲ್ಲಿ ಯಾವುದೇ ದಾಖಲಾತಿ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಒಟ್ಟೂ 1.80 ಲಕ್ಷ ರು.ಗಳನ್ನು ಪೊಲೀಸರು ಬುಧವಾರ ಸಂಜೆ ವಶಪಡಿಸಿ ಕೊಂಡಿದ್ದಾರೆ.
ಚುನಾವಣಾ ನಿಮಿತ್ತ ಜಿಲ್ಲೆಯ ಗಡಿಭಾಗವಾದ ಕುಂಬಾರಕಟ್ಟೆ ಗೇಟ್ ಬಳಿ ಚೆಕ್ಪೋಸ್ಟ್ ಸ್ಥಾಪಿಸಿದ್ದು ಮೊದಲ ಪ್ರಕರಣದಲ್ಲಿ ಕಾರಿನಲ್ಲಿ ಸಾಗಣಿಕೆ ಮಾಡುತ್ತಿದ್ದ 90 ಸಾವಿರ ರು.ಹಣವನ್ನು ವಶಕ್ಕೆ ಪಡಿಸಿಕೊಂಡು ಕಾರಿನ ಮಾಲೀಕ ಬೆಂಗಳೂರು ಮೂಲದ ಸತೀಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಇದೇ ಚೆಕ್ ಪೋಸ್ಟ್ನಲ್ಲಿ ಟೆಂಪೋದಲ್ಲಿ ಹಣ ತೆಗೆದು ಕೊಂಡುಹೋಗುತ್ತಿದ್ದ ರಾಜೇಶ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ಬಳಿಇದ್ದ 90 ಸಾವಿರ ನಗದನ್ನು ವಶಪಡಿಸಿ ಕೊಳ್ಳಲಾಗಿದೆ. ತಮ್ಮ ಬಳಿ ಇರುವ ಹಣದ ಬಗ್ಗೆ ಇಬ್ಬರೂ ಸೂಕ್ತ ದಾಖಲೆ ನೀಡದಿರುವುದರಿಂದ ಇಬ್ಬರ ವಿರುದ್ಧ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಅರುಣಪ್ರಭ ತಿಳಿಸಿದ್ದಾರೆ.
ಸಹಾಯಕ ಚುನಾವಣಾಧಿಕಾರಿಗಳ ನೇಮಕ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಿಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಆದೇಶ ಹೊರಡಿಸಿದ್ದು, ಕನಕಪುರಕ್ಕೆ ಜಿ.ಪಂ. ಉಪ ಕಾರ್ಯದರ್ಶಿ ಆರ್.ಲತಾ ಅವರನ್ನು ನೇಮಿಸಲಾಗಿದೆ.
ಲತಾ ಅವರ ಮೊಬೈಲ್ ಸಂಖ್ಯೆ- 9480875001 ಆಗಿರುತ್ತದೆ. ಮಾಗಡಿ ಕ್ಷೇತ್ರಕ್ಕೆ ಡಿಡಿಪಿಐ ಪ್ರಹ್ಲಾದಗೌಡ, ಮೊ.9448999440, ರಾಮನಗರಕ್ಕೆ ಉಪ ವಿಭಾಗಾಧಿಕಾರಿ ಬಿ.ಎಚ್.ಸಿದ್ದಪ್ಪ, ಮೊ.9535222666, ಚನ್ನಪಟ್ಟಣಕ್ಕೆ ವಿಶೇಷ ಭೂಸ್ವಾಧೀನಾಧಿಕಾರಿ ಜಯಮಾಧವ, ಮೊ.9448888282 ನೇಮಕಗೊಂಡಿದ್ದಾರೆ. ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ತುಮಕೂರಿನ ಕೃಷಿ ಜಂಟಿ ನಿರ್ದೇಶಕ ಕೆ.ಜಿ.ಅನೂಪ್, ಮೊ.9591987400, ರಾಜರಾಜೇಶ್ವರಿ ನಗರಕ್ಕೆ ಆಯುಷ್ ಮುಖ್ಯ ಆಡಳಿತಾಧಿಕಾರಿ ಅಸ್ಲಂ ಪಾಷ, ಮೊ. 9141820285, ಬೆಂಗಳೂರು ದಕ್ಷಿಣಕ್ಕೆ ಅಲ್ಲಿನ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜು, ಮೊ.9448089753, ಆನೇಕಲ್ ಕ್ಷೇತ್ರಕ್ಕೆ ಬಿಬಿಎಂಪಿ ವಿಶೇಷ ಜಿಲ್ಲಾಧಿಕಾರಿ ಪ್ರಭುಲಿಂಗ ಕಾವಲೀಕಟ್ಟಿ, ಮೊ.9480832135 ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.
ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

