'ಕಾರ್ಯಕರ್ತರಿಗೆ ಸ್ಪಂದಿಸದ ಜೆಡಿಎಸ್'
ಚನ್ನಪಟ್ಟಣ: 25 ವರ್ಷಗಳಿಂದ ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತನಾಗಿದ್ದ ನಾನು ಪಕ್ಷದಲ್ಲಿ ಇತ್ತೀಚಿಗೆ ಕಾಡುತ್ತಿರುವ ನಾಯಕತ್ವ ಕೊರತೆಯಿಂದಾಗಿ ಜೆಡಿಎಸ್ಗೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವುದಾಗಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ವಾಸೀಲ್ ಆಲಿಖಾನ್ ತಿಳಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭೆ ಮತ್ತು ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪರಾಜಿತಗೊಂಡ ಬಳಿಕ ತಾಲೂಕು ಜೆಡಿಎಸ್ನಲ್ಲಿ ಸಮರ್ಥ ನಾಯಕರಿಲ್ಲವಾಗಿದ್ದಾರೆ. ನಮ್ಮ ಕುಂದು ಕೊರತೆಗೆ ಯಾರೂ ಸ್ಪಂದಿಸದಿದ್ದು ರಾಜ್ಯ ಸರ್ಕಾರದ ಆಡಳಿತ ವೈಖರಿ ಮತ್ತು ಶಾಸಕ ಯೋಗೇಶ್ವರ್ ಅವರ ಅಭಿವೃದ್ಧಿಪರ ಕಾಳಜಿಯನ್ನು ಮನಗಂಡು ಪಕ್ಷಾಂತರ ಮಾಡುತ್ತಿರುವುದಾಗಿ ತಿಳಿಸಿದರು. ಕಾರ್ಯಕರ್ತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯ ನಾಯಕರು ನಮಗೆ ಸಿಗುತ್ತಿರಲಿಲ್ಲ. ತಾಲೂಕು ಮಟ್ಟದ ಮುಖಂಡರ ಜತೆ ಈ ಬಗ್ಗೆ ಚರ್ಚಿಸಿ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆನಾದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಅನಿವಾರ್ಯವಾಗಿದೆ ಎಂದರು.
ಕುಮಾರಸ್ವಾಮಿ ಏನೂ ಮಾಡಿಲ್ಲ: 6 ತಿಂಗಳ ಹಿಂದೆ ಸಂಸದರಾದ ಡಿ.ಕೆ.ಸುರೇಶ್ ಮಾಡಿರುವ ಕೆಲಸದಲ್ಲಿ ಅರ್ಧದಷ್ಟನ್ನೂ ಕುಮಾರಸ್ವಾಮಿ ನಾಲ್ಕೂವರೆ ವರ್ಷ ಸಂಸದರಾಗಿ ಮಾಡಿಲ್ಲ. ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ನಮ್ಮ ವಾರ್ಡುಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ 1.50 ಕೋಟಿ ಹಣವನ್ನು ಸಂಸದ ನಿಧಿಯಿಂದ ನೀಡುವುದಾಗಿ ಪಟ್ಟಿ ಮಾಡಿಕೊಂಡವರು ಇದುವರೆಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದರು.
ಕುಮಾರಸ್ವಾಮಿ ಈ ಕ್ಷೇತ್ರವನ್ನು ಮರೆತಿದ್ದಾರೆ. ಅವರ ನಿರ್ಲಕ್ಷ್ಯದಿಂದ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಳ್ಳುವಂತಾಗಿದೆ. ಅನಿತಾಕುಮಾರಸ್ವಾಮಿ ಅಭ್ಯರ್ಥಿಯಾದಾಗ ನಮಗೆ ಸಮರ್ಥ ನಾಯಕತ್ವ ದೊರೆಯುತ್ತದೆ ಎಂಬ ವಿಶ್ವಾಸ ಇತ್ತು. ಆದರೆ ಅವರು ಸೋತ ಬಳಿಕ ಕ್ಷೇತ್ರದತ್ತ ತಿರುಗಿ ನೋಡುತ್ತಿಲ್ಲ. ಇದರಿಂದಾಗಿ ತಾಲೂಕು ಜೆಡಿಎಸ್ ತಬ್ಬಲಿಯಾಗಿದೆ ಎಂದರು.
ರಾಮನಗರ ಜಿಲ್ಲೆಯಲ್ಲಿ ತಮ್ಮ ಭವಿಷ್ಯದ ಬೇರು ಅಲುಗಾಡುತ್ತಿದೆ ಎಂಬ ಸೂಚನೆಯನ್ನರಿತ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಗಿಳಿಯಲು ತಯಾರಿ ನಡೆಸುವ ಮೂಲಕ ತಮ್ಮ ಕ್ಷೇತ್ರ ಬದಲಾಯಿಸಿದ್ದಾರೆ. ಇಂಥ ಸ್ಥಿತಿಯಲ್ಲಿ ಸಾಮಾನ್ಯ ಕಾರ್ಯಕರ್ತರಾದ ನಾವು ನಮಗೆ ನೆರವಾಗಬಲ್ಲ ಪಕ್ಷದೊಂದಿಗೆ ರಾಜಜಿಯಾಗಬೇಕಾದ್ದು ಅನಿವಾರ್ಯ ಎಂದರು.
ಕಾಂಗ್ರೆಸ್ ಮುಖಂಡರಾದ ಫೈಯಾಜ್, ನಗರಸಭಾ ಸದಸ್ಯ ಲಿಯಾಖತ್, ಮುಖಂಡ ಶಬೀರ್ಉಲ್ಲಾ ಬೇಗ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

