ಎಚ್ಡಿಕೆ ಕ್ಷೇತ್ರಾಂತರವೇ ಹೊರತು ಪಲಾಯನವಲ್ಲ
ರಾಮನಗರ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಮುಂದಾಗಿರುವುದು ಕ್ಷೇತ್ರಾಂತರವೇ ಹೊರತು ಪಲಾಯನವಲ್ಲ. ರಾಜಕಾರಣದಲ್ಲಿ ಕ್ಷೇತ್ರ ಬದಲಾವಣೆ ಹೊಸದೇನೂ ಅಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದವರೇನಲ್ಲ. ದಕ್ಷಿಣ ಕನ್ನಡದ ಅವರು ಇಲ್ಲಿ ಬಂದು ಆಯ್ಕೆಯಾಗಿಲ್ಲವೇ. ಎಸ್.ಎಂ. ಕೃಷ್ಣ ಸಹಿತ ಕಾಂಗ್ರೆಸ್ ಮುಖಂಡರನೇಕರು ಕ್ಷೇತ್ರಾಂತರ ಮಾಡಿಲ್ಲವೇ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿಯಂತಹ ನಾಯಕರೇ ಕ್ಷೇತ್ರ ಬದಲಾವಣೆ ಬಯಸಿದ್ದಾರೆ. ಹೀಗಿರುವಾಗ ನಮ್ಮ ನಾಯಕ ಕುಮಾರಸ್ವಾಮಿ ಕ್ಷೇತ್ರ ಬದಲಿಸಿದರೆ ತಪ್ಪೇನು. ಇದರಲ್ಲಿ ಹುಳುಕು ಹುಡುಕಲು ಕಾಂಗ್ರೆಸ್ ಮುಖಂಡರು ಸಣ್ಣತನ ಪ್ರದರ್ಶಿಸುವುದು ಸರಿಯಲ್ಲ ಎಂದಿದ್ದಾರೆ. ಒಮ್ಮೆ ಲೋಕಸಭೆಗೆ ಸ್ಪರ್ಧಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು 2009ರ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗೆ ಸಿದ್ಧರಿರಲಿಲ್ಲ. ಈಗ ಅವರ ಕಾಲ ನಡೆಯುತ್ತಿದೆ. ಎಲ್ಲ ಕಾಲವೂ ಹೀಗೇ ಇರದು ಎಂದು ಬಾಲಕೃಷ್ಣ ಮಾರ್ಮಿಕವಾಗಿ ಹೇಳಿದರು.
ಬದಲಾದ ಧೋರಣೆ: ಸೈಕಲ್ ಏರಿದವರನ್ನು ಹತ್ತಿರ ಸುಳಿಯಲು ಬಿಟ್ಟುಕೊಳ್ಳಬೇಡಿ ಎಂದು ಹಿಂದಿನ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಇದೇ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅವರೇ ಯೋಗೇಶ್ವರ್ ಕಾಲಿಡಿದು, ಪಕ್ಷ ಸೇರಿಸಿಕೊಂಡಿದ್ದಾರೆ ಎಂದು ಅವರು ಛೇಡಿಸಿದರು.
ಸಚಿವರಾಗಿದ್ದಾಗ ಕನಕಪುರದ ಅರಣ್ಯವನ್ನೆಲ್ಲಾ ಅಡ್ಡಾಡಿ ಡಿಕೆಎಸ್ ಸಹೋದರರಿಗೆ ಕಾನೂನಿನ ಕುಣಿಕೆ ತೊಡಿಸಲು ಹೊರಟಿದ್ದ ಯೋಗೇಶ್ವರ್ ಕೂಡ ಅವಕಾಶವಾದಿತನ ಪ್ರದರ್ಶಿಸಿದ್ದಾರೆ. ಅವರ ಧೋರಣೆಗಳು ಬದಲಾಗಬಹುದು. ಬೇರೆಯವರ ವಿಷಯದಲ್ಲಿ ಮಾತ್ರ ಟೀಕೆ ಏಕೆ ಎಂದು ಪ್ರಶ್ನಿಸಿದರು.
ಸಚಿವ ಸ್ಥಾನದ ಅವಕಾಶ: ಕೇಂದ್ರದಲ್ಲಿ ತೃತೀಯ ರಂಗದ ಸರ್ಕಾರ ರಚನೆಯಾದಲ್ಲಿ ಕುಮಾರಸ್ವಾಮಿ ಅವರಿಗೆ ಪ್ರಮುಖ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಅವರು ಲೋಕಸಭೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು. ಈಗಲೂ ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ ಎಂದರು.
ಪಕ್ಷಕ್ಕೆ ಖಂಡಿತ ಹಿನ್ನೆಡೆ: ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಇಳಿಯುವುದೇ ಆದರೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ಗೆ ಖಂಡಿತ ಹಿನ್ನಡೆಯಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಒಪ್ಪಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

