ಟೊಯೋಟ ಆಡಳಿತ ಮಂಡಳಿ- ಕಾರ್ಮಿಕರ ಶೀತಲ ಸಮರ ನಿಲ್ಲಲಿ
ರಾಮನಗರ:ಟೊಯೋಟ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಶೀಘ್ರ ಪರಿಹಾರಗೊಳ್ಳದಿದ್ದಲ್ಲಿ ಬಿಡದಿ ಕೈಗಾರಿಕಾ ಪ್ರದೇಶವನ್ನೇ ನಂಬಿದ ಜನರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಬಿಡದಿ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಹಿತರಕ್ಷಣಾ ಸಮಿತಿ ವ್ಯಕ್ತಪಡಿಸಿದೆ.
ಬಿಡದಿ ಆಸುಪಾಸಿನಲ್ಲಿ ಈಗಾಗಲೇ ಕೆಲ ಕಾರ್ಖಾನೆಗಳು ಮುಚ್ಚಿ, ಅನೇಕ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಈಗ ಮತ್ತೆ ಅಂಥದ್ದೇ ಪರಿಸ್ಥಿತಿ ನಿರ್ಮಾಣಕ್ಕೆ ಟೊಯೋಟ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕರು ಆಸ್ಪದ ನೀಡಬಾರದು ಎಂದು ಸಮಿತಿ ಮುಖಂಡ ಎಲ್.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿ ಹತ್ತಾರು ಪ್ರತಿಷ್ಠಿತ ಕಾರ್ಖಾನೆಗಳಲ್ಲಿ 15 ಸಾವಿರದಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಒಂದು ಕಾರ್ಖಾನೆ ಬಿಕ್ಕಟ್ಟು ನೆರೆಹೊರೆ ಕಾರ್ಖಾನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ. ಈ ಬೆಳವಣಿಗೆಯಿಂದ ಈಗಷ್ಟೇ ನಿರ್ಮಾಣ ಹಂತದಲ್ಲಿರುವ ಮೈಕೋ ಬಾಷ್ ಕಂಪೆನಿಯೂ ಸ್ಥಳಾಂತರಕ್ಕೆ ಚಿಂತಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಹಸ್ರಾರು ಜನರ ಜೀವನಾಶ್ರಯ: ಕೈಗಾರಿಕಾ ಪ್ರದೇಶದ ಜತೆ ಜತೆಗೆ ಬಿಡದಿ ಭಾಗವೂ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಕಾರ್ಖಾನೆಗಳನ್ನು ಅವಲಂಬಿಸಿ ಸಹಸ್ರಾರು ಸ್ಥಳೀಯರು ಜೀವನ ನಡೆಸುತ್ತಿದ್ದಾರೆ.
ಬಿಕ್ಕಟ್ಟು ಉಲ್ಬಣಿಸಿ, ಕಾರ್ಖಾನೆ ಕದ ಮುಚ್ಚಿದ್ದೇ ಆದರೆ ಕಾರ್ಮಿಕರಷ್ಟೇ ಅಲ್ಲದೆ ಸ್ಥಳೀಯ ಬದುಕಿಗೂ ಬರೆ ಎಳೆದಂತಾಗಲಿದೆ ಎಂದು ಚಂದ್ರಶೇಖರ್ಹೇಳಿದರು.
ಟೊಯೋಟ ಕಿರ್ಲೋಸ್ಕರ್ ಮೋಟಾರ್ಸ್ ಮತ್ತು ಕಾರ್ಮಿಕರ ನಡುವೆ ಕಾರ್ಮಿಕ ಇಲಾಖೆ ತ್ರಿಪಕ್ಷೀಯ ಮಾತುಕತೆ ನಡೆಸಿದ್ದು, ರು.3100 ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.
ಅದನ್ನು ಒಪ್ಪಿಕೊಂಡು ಬಹುತೇಕ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಸಿದ್ಧರಿದ್ದಾರಾದರೂ ಕಾರ್ಮಿಕ ಸಂಘಟನೆಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ಅಡ್ಡಿಪಡಿಸುತ್ತಿವೆ ಎಂದು ಅವರು ದೂರಿದರು.
ಸ್ವಾರ್ಥ ಸಾಧನೆಗೆ ಕಾರ್ಮಿಕರ ಬಲಿ ಬೇಡ: ಕಾರ್ಖಾನೆ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಉಭಯತ್ರರು ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಂಡು ಮುಂದುವರೆಯಬೇಕು. ಒಂದೊಮ್ಮೆ ಕಾರ್ಮಿಕ ಸಂಘಟನೆಗಳು ಮತ್ತು ಮುಖಂಡರು ಸ್ವಾರ್ಥ ಸಾಧನೆಗಾಗಿ ಗೊಂದಲ ನಿರ್ಮಿಸಲು ಮುಂದಾದಲ್ಲಿ ಸ್ಥಳೀಯರಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಚಂದ್ರಶೇಖರ್ ಎಚ್ಚರಿಸಿದರು.
ಸಮಿತಿ ಮುಖಂಡರಾದ ಗಾಣಕಲ್ ನಟರಾಜ್, ಮಹಿಪತಿ,.ನಾಗರಾಜ್,ಲೋಕೇಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

