ಸದ್ಗತಿಗೆ ಮಂಕುತಿಮ್ಮನ ಕಗ್ಗ ದಾರಿ
ಚನ್ನಪಟ್ಟಣ: ಮನುಷ್ಯನ ಎಲ್ಲಾ ಗೊಂದಲಗಳಿಗೆ ಸೂಕ್ತ ಪರಿಹಾರ ನೀಡುವ ಶಕ್ತಿ ಮಂಕುತಿಮ್ಮನ ಕಗ್ಗಕ್ಕಿದೆ. ಇದು ಭವಿಷ್ಯದಲ್ಲಿ ಮೌಲ್ಯಯುತ ಜೀವನ ಕಟ್ಟಿಕೊಳ್ಳಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯೂ ಓದಲೇಬೇಕಾದ ಉತ್ತಮ ಗ್ರಂಥ ಎಂದು ಸಾಹಿತಿ ಎಚ್.ಎಸ್. ಲಕ್ಷ್ಮೀನಾರಾಯಣಭಟ್ಟ ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಿವಿಜಿ ಅವರ ಬದುಕು-ಬರಹ ಹಾಗೂ ಮಂಕುತಿಮ್ಮನ ಕಗ್ಗ-ವಾಚನ ಮತ್ತು ವಿಶ್ಲೇಷಣೆ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಮನುಷ್ಯನ ನಡುವಿನ ವೈಷಮ್ಯ ತೀವ್ರಗೊಂಡು ಶೀತಲ ಸಮರಕ್ಕೆ ಎಡೆಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಮಾನವನನ್ನು ರಾಗ ದ್ವೇಷಗಳಿಂದ ಮುಕ್ತ ಕೊಳಿಸುವ ಸಂಜೀವಿನಿ ಶಕ್ತಿ ಕಗ್ಗಕ್ಕಿದೆ ಎಂದರು.
ಕಗ್ಗ ಅನುಭವಗಳ ಸಾರ: ಕಗ್ಗವು ಗುಂಡಪ್ಪ ಅವರ ಜೀವನದಲ್ಲಿ ಪಡೆದ ಎಲ್ಲಾ ಅನುಭವಗಳ ಸಾರ. ಅವರ ಅರಿವಿನ ನವನೀತ.
ನುಡಿದಂತೆ ನಡೆದು ಎಲ್ಲರಿಗೂ ಆದರ್ಶಪ್ರಾಯರಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಪ್ರತಿಯೊಬ್ಬರು ಓದುವ, ವಾಚಿಸುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪತ್ರಿಕೋದ್ಯಮ ಪಿತಾಮಹ: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಪತ್ರಿಕೋದ್ಯಮದ ಪಿತಾಮಹ ಎಂದರೆ ತಪ್ಪಾಗಲಾರದು. ಶ್ರೀಯುತರು ಕಸಾಪ ಉಪಾಧ್ಯಕ್ಷರಾಗಿದ್ದರು.1934ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಡಿವಿಜಿ ಮಂಕುತಿಮ್ಮನ ಕಗ್ಗ ಮರುಳ ಮುನಿಯನ ಕಗ್ಗ, ಮುಕ್ತಕಗಳು ಅಂತಃಪುರ ಗೀತೆಗಳು, ಜೀವನ ಧರ್ಮ ಯೋಗ, ಹಸಿರು-ಹೊನ್ನು ಮುಂತಾದ ಮೌಲ್ಯಯುತ ಗ್ರಂಥಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಹಾಗೆಯೇ ಆಧ್ಯಾತ್ಮಿಕತೆಗೆ ಹೆಚ್ಚು ಒತ್ತುಕೊಟ್ಟ ಮಹಾಕವಿ ಡಿವಿಜಿ ಎಂದು ಅಭಿಪ್ರಾಯಪಟ್ಟರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಭಾರತೀಯ ಸಾಹಿತ್ಯದ ಅಶ್ವಥವೃಕ್ಷ ಡಿ.ವಿ.ಗುಂಡಪ್ಪ ದಿನನಿತ್ಯದ ಮಾನಸಿಕ ತುಮುಲಗಳಿಗೆ ಮಂಕುತಿಮ್ಮನ ಕಗ್ಗ ಸಿದ್ಧ ಔಷಧವಾಗಿದೆ ಎಂದರು.
ವಿದ್ಯಾರ್ಥಿಗಳು ಇಂತಹ ಉಪನ್ಯಾಸಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜದ ಆಸ್ತಿಯಾಗಲಿ ಎಂದು ಕರೆ ನೀಡಿದರು.
ದತ್ತಿದಾನಿ ಸಿ.ಜಿ.ಸುರೇಶ್ಕುಮಾರ್ ಮಾತನಾಡಿ, ಡಿವಿಜಿ
ಅವರಂತಹ ಮೇರು ಕವಿಯ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ತನ್ಮೂಲಕ ಸಂಪಧ್ಬರಿತ ಬದುಕನ್ನು ಕಟ್ಟಿಕೊಳ್ಳಲು ಅವರ ಬರಹಗಳು ಪ್ರಸ್ತುತ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಲಿಂಗಣ್ಣಯ್ಯ,ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಬಿ.ಟಿ ನೇತ್ರಾವತಿಗೌಡ, ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜು, ಪ್ರಾಧ್ಯಾಪಕ ಡಾ.ಮಧುಸೂದನ ಆಚಾರ್ಯ ಜೋಷಿ, ಸಿ.ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಗಾಯಕ ಚೌ.ಪು.ಸ್ವಾಮಿ ಪ್ರಾರ್ಥಿಸಿದರೆ, ತಾಲೂಕು ಕಸಾಪ ಕಾರ್ಯದರ್ಶಿ ವಿಜಯ್ರಾಂಪುರ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಸ್ವಾಮಿ ನಿರೂಪಿಸಿ, ಸಿ.ರಾಜಶೇಖರ್ ವಂದಿಸಿದರು.
ಮನುಷ್ಯ ಮನುಷ್ಯನ ನಡುವಿನ ವೈಷಮ್ಯ ತೀವ್ರಗೊಂಡು ಶೀತಲ ಸಮರಕ್ಕೆ ಎಡೆಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಮಾನವನನ್ನು ರಾಗ ದ್ವೇಷಗಳಿಂದ ಮುಕ್ತಗೊಳಿಸುವ ಸಂಜೀವಿನಿ ಶಕ್ತಿ ಕಗ್ಗಕ್ಕಿದೆ. ಕಗ್ಗವು ಗುಂಡಪ್ಪ ಅವರ ಜೀವನದಲ್ಲಿ ಪಡೆದ ಎಲ್ಲಾ ಅನುಭವಗಳ ಸಾರ. ಅವರ ಅರಿವಿನ ನವನೀತ. ನುಡಿದಂತೆ ನಡೆದು ಎಲ್ಲರಿಗೂ ಆದರ್ಶಪ್ರಾಯರಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಪ್ರತಿಯೊಬ್ಬರು ಓದುವ, ವಾಚಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಟಿ ಎಚ್.ಎಸ್. ಲಕ್ಷ್ಮೀನಾರಾಯಣಭಟ್ಟ, ಸಾಹಿತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

