ಜಯದ ಸ್ವಾಗತಕ್ಕೆ ಸಂಭ್ರಮದ ಸಿದ್ಧತೆ
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ವಿಜಯ ಸಂವತ್ಸವರ ಮುಗಿದು ಜಯ ಸಂವತ್ಸರದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಲೋಕಸಭಾ ಚುನಾವಣೆ ಬಿಸಿ ಒಂದೆಡೆ ದಿನೇ ದಿನೇ ಕಾವೇರುತ್ತಿದೆ. ಮತ್ತೊಂದೆಡೆ ಬೆಲೆ ಏರಿಕೆ ಗ್ರಾಹಕರ ಜೇಬು ಸುಡುತ್ತಿದೆ. ಸುಡುಬಿಸಿಲು-ಬೆಲೆ ಏರಿಕೆ ನಡುವೆ ಯುಗಾದಿಯ ಸಂಭ್ರಮವೂ ಮನೆ ಮಾಡಿದೆ.
ಕಳೆದು ಹೋದ ನಿನ್ನೆಗಳ ನೆನಪಿನ ಬುತ್ತಿಯಲ್ಲಿ ಬರುವ ನಾಳೆಯ ಕನಸುಗಳ ಭಾವಕ್ಕೆ ಮುನ್ನುಡಿಯಾಗಿ ಬರುತ್ತಿರುವ ಯುಗಾದಿಯ ಸ್ವಾಗತಕ್ಕೆ ದೊಡ್ಡಬಳ್ಳಾಪುರದ ಜನ ಸಜ್ಜಾಗಿದ್ದಾರೆ. ನಿರೀಕ್ಷೆಗಳ ಭರದಲ್ಲೇ ಹುಟ್ಟಿ ಬಂದ ವಿಜಯ ಸಂವತ್ಸರ ನಿರೀಕ್ಷೆಗಳ ಭರವನ್ನು ನೀಗುವಲ್ಲಿ ವಿಫಲವಾದರೂ ಒಂದಿಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಿರುವುದಂತೂ ಈ ಊರಿನ ಮಟ್ಟಿಗೆ ಸತ್ಯ. ಹೀಗಾಗಿ ಹೊಸ ಭರವಸೆ ಮತ್ತು ಆಕಾಂಕ್ಷೆಗಳಿಗೆ ಸಾಕ್ಷೀಭೂತವಾಗಿ ಇಲ್ಲಿನ ಜನ ಜಯ ಸಂವತ್ಸರಕ್ಕೆ ಆತ್ಮೀಯ ಸ್ವಾಗತ ನೀಡುತ್ತಿದ್ದಾರೆ.
ಹೊಸತನದ ನಿರೀಕ್ಷೆ: ಈ ವರ್ಷದಲ್ಲಾದರೂ ನಮ್ಮೂರಿಗೆ ಒಂದಿಷ್ಟು ಒಳ್ಳೆಯ ಕೆಲಸಗಳಾಗಲಿ. ಸಮಸ್ಯೆಗಳೇ ಸೋಪಾನವಾಗದಿರಲಿ ಎಂಬುದೊಂದು ಜನರ ಮಹತ್ವಾಕಾಂಕ್ಷೆ. ದೊಡ್ಡಬಳ್ಳಾಪುರ ದಿನೇ ದಿನೇ ತನ್ನ ಬೆಳವಣಿಗೆಯ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಆದರೆ ಆ ಬಾಹುಗಳ ಹಿಡಿತಕ್ಕೆ ಅಭಿವೃದ್ಧಿಯ ಹೂರಣ ಸಿಗದೇ ಹೋಗುತ್ತಿರುವುದೇ ಹೋಳಿಗೆ ರುಚಿಸದಿರಲು ಕಾರಣವಾಗಿದೆ. ಇಂತಹ ಬಹುಸೂಕ್ಷ್ಮ ವಿಚಾರಗಳತ್ತ ಇಲ್ಲಿನ ಆಡಳಿತಯಂತ್ರ ಇಚ್ಛಾಶಕ್ತಿ ಪ್ರದರ್ಶಿಸಿ ತೊಡಗಿಕೊಳ್ಳುವ ಜಾಣತನ ಪ್ರದರ್ಶಿಸಬೇಕು. ಜನರ ಸಂಕಷ್ಟಗಳಿಗೆ ಕನಿಷ್ಠ ಉತ್ತರಗಳನ್ನಾದರೂ ಹುಡುಕುವ ಪ್ರಯತ್ನ ಮಾಡಬೇಕು ಎಂಬುದು ವರ್ಷಾರಂಭದಲ್ಲಿ ಜನರ ಬೇಡಿಕೆ. ಇನ್ನು ಉಳಿದದ್ದು ಇದ್ದದ್ದೇ.
ವ್ಯಾಪಾರ ಭರಾಟೆ: ಮಾರುಕಟ್ಟೆಯಲ್ಲಿ ಹಬ್ಬದ ಮಾರಾಟ ಭರಾಟೆ ಜೋರಾಗಿಯೇ ನಡೆದಿದೆ. ಗ್ರಾಹಕರು ಭಾನುವಾರ ದಿನವಿಡೀ ದೊಡ್ಡಬಳ್ಳಾಪುರದ ಕೃಷ್ಣರಾಜೇಂದ್ರ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ, ಮಾವಿನ ತಳಿರು, ಬೇವಿನ ಹೂವು ಸೇರಿದಂತೆ ಹಬ್ಬದ ವಸ್ತುಗಳ ಖರೀದಿಯಲ್ಲಿ ಮುಳುಗಿದ್ದರು. ಹೊಸ ವರ್ಷದ ಸ್ವಾಗತಕ್ಕೆ ಸಂಭ್ರದ ಸಿದ್ಧತೆಗಳಲ್ಲಿ ತೊಡಗಿರುವ ಜನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯಲ್ಲಿ ತೊಡಗಿದ್ದಾರೆ. ಹೊಸ ಬಟ್ಟೆ ಖರೀದಿಯಲ್ಲೂ ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಜೊತೆಗೆ ಆಭರಣ, ಗೃಹೋಪಯೋಗಿ ವಸ್ತುಗಳ ಖರೀದಿ ಭರಾಟೆ ಕೂಡಾ ಜೋರಾಗಿತ್ತು.
ಬೆಲೆ ಏರಿಕೆ ಬಿಸಿ: ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಬಿಸಿ ಗ್ರಾಹಕರನ್ನು ಕಂಗಾಲಾಗಿಸಿದೆ. ದಿನೋಪಯೋಗಿ ವಸ್ತುಗಳ, ಹೂವು, ಹಣ್ಣಿನ ಬೆಲೆಯೂ ಗಗನಕ್ಕೇರಿರುವುದು ಇದಕ್ಕೆ ಕಾರಣ. ಅಬ್ಬಾ ಅದೇನು ಹಬ್ಬವೋ...ಹಣ ಉಳ್ಳವರಿಗಷ್ಟೇ ಈ ಹಬ್ಬಗಳೆಲ್ಲಾ ಎನ್ನುವಷ್ಟರ ಮಟ್ಟಿಗೆ ಬಡ ಮತ್ತು ಮಧ್ಯಮ ವರ್ಗದ ಜನ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.
ವಿಜಯ ಸಂವತ್ಸರದಲ್ಲಿ ಹೊಸತನದ ನಿರೀಕ್ಷೆ ಎಲ್ಲರಲ್ಲೂ ಇದೆ. ಕಳೆದು ಹೋದ ಕಾಲದ ಕುರಿತು ಚಿಂತಿಸುವುದಕ್ಕಿಂತ ಬರುವ ಭವಿಷ್ಯದ ಕುರಿತ ಚಿಂತನೆ ಮಹತ್ವದ್ದು. ಹೀಗಾಗಿ ನಾಳಿನ ಕುರಿತು ಎಲ್ಲರಲ್ಲೂ ನಿರೀಕ್ಷೆಗಳು ಇದ್ದೇ ಇರುತ್ತದೆ. ಹೀಗಾಗಿ ದೇವಾಲಯಗಳಲ್ಲಿ ಯುಗಾದಿ ವಿಶೇಷ ಪೂಜಾ ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

