ಬೆಂಗಳೂರು ಗ್ರಾಮಾಂತರ

ಮೊಯ್ಲಿ ಮಹಾನ್ ಸುಳ್ಳುಗಾರ

Published On :

ನೆಲಮಂಗಲ: ಎತ್ತಿನಹೊಳೆ ನಾಟಕವಾಡಿದ ಮಹಾನ್ ಸುಳ್ಳುಗಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಎಂದು ಜೆಡಿಎಸ್  ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು. ಅವರು ಭಾನುವಾರ ಪಟ್ಟಣದ ಗಾರ್ಡನ್ ಸಭಾಂಗಣದಲ್ಲಿ ತಾಲೂಕು ಜೆಡಿಎಸ್ ಕರೆದಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮೊಯ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಷೇತ್ರದಾದ್ಯಂತ 28 ಬೋರ್‌ವೆಲ್ ಕೊರೆಸಿಕೊಡುವುದಾಗಿ ಭರವಸೆ ನೀಡಿ ಮಾಯವಾದರು. ನಾವು ಶಾಸಕರ ಯೋಜನೆಯ ಅನುದಾನದಲ್ಲಿ 28 ಬೋರ್‌ವೆಲ್‌ಗಳನ್ನು ಕೊರೆಯಿಸಿದೆವು. ಇದೇ ರೀತಿ ಕ್ಷೇತ್ರ ಪ್ರವಾಸ ಮಾಡಿದಾಗಲೆಲ್ಲ ಜನತೆಗೆ ಸುಳ್ಳು ಭರವಸೆ ನೀಡಿ 5 ವರ್ಷ ಕಾಲಕಳೆದು, ಕೇಂದ್ರ ಸಚಿವರಾಗಿದ್ದುಕೊಂಡು ಜನರ ನಿರೀಕ್ಷೆಗೆ ಸ್ಪಂದಿಸಿಲ್ಲ ಎಂದು ದೂರಿದರು. ಜೆಡಿಎಸ್‌ನಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಮನಗರ ಜನತೆಗೆ ಸೀಮಿತವಾಗಬಾರದು. ಅವರಂತಹ ಜನಪರ ಕಾಳಜಿಯುಳ್ಳ ನಾಯಕರು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ದೊರಕಬೇಕು ಎಂಬ ದೃಷ್ಟಿಯಿಂದ ಚುನಾವಣೆಗೆ  ಸ್ಪರ್ಧಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಮಾಡಿದಂತಹ ಜನಪರ ಸೇವೆ ಸ್ಮರಣೀಯವಾಗಿದ್ದು ಜನತೆ ಅವರಿಗೆ ಅತ್ಯಧಿಕ ಮತ ನೀಡಿ ಆಶೀರ್ವದಿಸಿ ಎಂದರು.  ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಬಿ.ಟಿ ರಾಮಕೃಷ್ಣಪ್ಪ, ಮುಖಂಡರಾದ ಕೇಶವಮೂರ್ತಿ, ಗಂಗಣ್ಣ, ಪುರಸಭೆ ಅಧ್ಯಕ್ಷ ಎಂ.ನಾರಾಯಣ್, ಕಾರ್ಯದರ್ಶಿ ಹೇಮಂತ್ ಕುಮಾರ್ ಇದ್ದರು.
ಮದ್ದೂರಮ್ಮನ ವೈಭವದ ಜಾತ್ರೆ
ಆನೇಕಲು: ಆನೇಕಲ್ಲು ತಾಲೂಕಿನ ಹುಲ್ಕೂರು ಮದ್ದೂರಮ್ಮನ ಜಾತ್ರೆ  ವೈಭವದಿಂದ ನಡೆಯಿತು. ಸುತ್ತ ಮುತ್ತಲಿನ ಒಂಬತ್ತು ಗ್ರಾಮಗಳಿಂದ ಆಗಮಿಸಿದ್ದ ಮಹೋತ್ಸವಕ್ಕೆ ಸಹಸ್ರಾರು ಜನರ ಜಮಾವಣೆ ಆಗಿತ್ತು.
ಹೀಲಲಿಗೆ, ರಾಮನಗರ, ದೊಡ್ಡನಾಗಮಂಗಲ, ಕಗ್ಗಲೀಪುರ, ನಾರಾಯಣಘಟ್ಟ, ರಾಯಸಂದ್ರ, ಕೊಡತಿ, ಚೊಕ್ಕಸಂದ್ರ ಮತ್ತು ಹಾರೋಹಳ್ಳಿಗಳಿಂದ ಊರ ದೇವಿ ತೇರುಗಳು (ಎತ್ತರದ ಕುರ್ಜು) ಆಗಮಿಸಿದ್ದವು.
ತೇರುಗಳು ದೇವಾಲಯದ ಬಯಲಿಗೆ ಬರುತಿದ್ದಂತೆ ನೆರೆದಿದ್ದ ಜನರು ತಮ್ಮ ಹರಕೆಯಂತೆ ಹಣ್ಣು ಮತ್ತು
ಪತ್ರೆಯನ್ನು ಭಕ್ತಿಯಿಂದ ಸಮರ್ಪಿಸಿದರು. ಈ ವರ್ಷದ ವಿಶೇಷವೆಂದರೆ ರಾಮಸಾಗರದ ತೇರು 20 ಲಕ್ಷ ರು.ಗಳ ವೆಚ್ಚದಲ್ಲಿ ನಿಮಿಸಲಾಗಿತ್ತು.
ತೇರುಗಳನ್ನು ಏಳೆಂಟು ಜೊತೆ ಎತ್ತುಗಳು ಎಳೆದುಕೊಂಡು ಸುಮಾರು ರಾತ್ರಿ 7.30 ರ ಸಮಯಕ್ಕೆ ದೇವಾಲಯದ ಆವರಣ ತಲುಪಿತು.120 ಎತ್ತರದ ಹೀಲಲಿಗೆ ತೇರು ಮಾರ್ಗ ಮಧ್ಯದಲ್ಲಿ ಚಕ್ರ ಮಣ್ಣಿನಲ್ಲಿ ಹೂತು ಹುಸ್ಕೂರಿಗೆ ಬರುವ ವೇಳೆಗೆ ಸಂಜೆ 6 ಘಂಟೆಯಾಗಿತ್ತು. ಎಲ್ಲಾ ತೇರುಗಳ ಜಮಾವಣೆಯಾಗಿ ಜಾತ್ರೆ ಸುಸೂತ್ರವಾಗಿ ನೆರವೇರಿದೆ ಎಂದು ದೇವಾಲಯದ ಸಮಿತಿ ತಿಳಿಸಿದೆ. ಜಾತ್ರೆಯ ಅಂಗವಾಗಿ ಭಾನುವಾರ ಮೆರವಣಿಗೆ ಮತ್ತು ದನಗಳ ಜಾತ್ರೆ ನಂತರ ರಾತ್ರಿ ಧರ್ಮರಾಯಸ್ವಾಮಿ ಕರಗ ಮಹೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ. ಪಾಪ್ಪಣ್ಣ ತಿಳಿಸಿದರು.   
ಎತ್ತಿನಹೊಳೆಯಿಂದ 34 ಟಿಎಂಸಿ ನೀರು
ದೇವನಹಳ್ಳಿ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಚುನಾವಣಾ ಪ್ರಚಾರ ಸಭೆ ಹಾಗೂ ಐದು ಹೋಬಳಿಗಳ ಜೆಡಿಎಸ್ ಮತ್ತು ಬಿಜೆಪಿ ಪ್ರಮುಖ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ ಸಮಾರಂಭ ಇಲ್ಲಿನ ಹಳೇ ಬಸ್ ನಿಲ್ದಾಣದ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಮೊಯ್ಲಿ ಮಾತನಾಡಿ ಬಯಲು ಸೀಮೆ ಪ್ರದೇಶದ ಜಿಲ್ಲೆಗಳ ಜನರಿಗೆ ಕೇವಲ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯಿಂದ ಎಲ್ಲ ಕೆರೆಗಳು ಭರ್ತಿಯಾಗಲಿವೆ. ಅಲ್ಲದೆ ಈ ಯೋಜನೆಯಿಂದ 24 ಟಿಎಂಸಿಗೆ ಬದಲಾಗಿ 34 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ನೀರಾವರಿ ತಜ್ಞರು ವರದಿ ನೀಡಿದ್ದಾರೆ ಎಂದರು.  ಚಿಕ್ಕಬಳ್ಳಾಪುರ ಮತದಾರರ ಉತ್ಸಾಹ ನೋಡಿಸಂತಸವಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.