ಎಷ್ಟೇ ದೊಡ್ಡವರಾದರೂ ಮೂಲ ಬೇರು ಮರೆಯದಿರಿ
ರಾಮನಗರ: ಮನುಷ್ಯ ಎಷ್ಟೇ ದೊಡ್ಡವನಾಗಿ ಎತ್ತರಕ್ಕೆ ಬೆಳೆದರೂ ಮೂಲ ಬೇರನ್ನು ಮಾತ್ರ ಮರೆಯಬಾರದು ಎಂದು ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿ ಕರೆ ನೀಡಿದರು. ನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅಂಧ ಮಕ್ಕಳ ಶಾಲೆಯಲ್ಲಿ ರಾಜ್ಯ ಮಟ್ಟದ 19ನೇ ಜನಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಒಳ್ಳೆಯ ಭಾವನೆ ಮೂಡಿಸಿದರೆ ಮುಂದೆ ಒಳ್ಳೆಯ ಫಲ ನೀಡುತ್ತದೆ ಎಂದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ 19 ವರ್ಷದ ಹಿಂದೆ ಮಕ್ಕಳ ಶಿಬಿರಕ್ಕೆ ಚಾಲನೆ ನೀಡಿದ್ದರು. ಈ ಬಾರಿ ಶಿಬಿರದಲ್ಲಿ 1780 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದರು. ಸಾಹಿತಿ ದೊಡ್ಡರಂಗೇಗೌಡ, ರಾಜೇಶ್ವರಿ ದೊಡ್ಡರಂಗೇಗೌಡ, ಗಾಂಧಿವಾದಿ ಡಾ.ಹೊ.ಶ್ರೀನಿವಾಸಯ್ಯ, ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ ಇದ್ದರು.
ಎಚ್ಐವಿ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸಬೇಕು
ರಾಮನಗರ: ಎಚ್ಐವಿ ಸೋಂಕು ಹರಡುವುದು ಆಕಸ್ಮಿಕ ಮತ್ತು ಅರಿವಿನ ಕೊರತೆಯ ಪರಿಣಾಮವಷ್ಟೇ. ಹೀಗಾಗಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಎಚ್ಐವಿ ನಿಯಂತ್ರಣ ಜಿಲ್ಲಾ ಸಂಯೋಜಕರಾದ ನಳಿನಾ ಅಭಿಪ್ರಾಯಪಟ್ಟರು. ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಆಯೋಜಿಸಿದ್ದ ಎಚ್ಐವಿ ರೋಗಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಗತ್ಯ ಚಿಕಿತ್ಸೆ ಪಡೆದರೆ ಎಚ್ಐವಿ ಸೋಂಕಿತರೂ ಸಾವನ್ನು ದೂರ ಮಾಡಿಕೊಳ್ಳಬಹುದು ಎಂದರು. ಸೋಂಕಿತರನ್ನು ಕೀಳಾಗಿ ಕಂಡರೆ ಅವರು ಮನನೊಂದು ಆರೋಗ್ಯದ ಕಡೆ ಗಮನಕೊಡುವುದಿಲ್ಲ. ಸೋಂಕು ಹರಡುವಿಕೆ ಬಗ್ಗೆ ಪ್ರೌಢಶಾಲೆ ಹಂತದಿಂದಲೇ ಅರಿವು ಕಾರ್ಯಕ್ರಮ, ಪಠ್ಯದ ಮೂಲಕ ತಿಳವಳಿಕೆ ಮೂಡಿಸುವುದು ಸೂಕ್ತ ಎಂದು ಸಲಹೆ ನೀಡಿದರು. ರೆಡ್ ರಿಬ್ಬನ್ ಕ್ಲಬ್ನ ಕಾರ್ಯಕ್ರಮಾಧಿಕಾರಿ ಜಿ.ಶಿವಣ್ಣ, ಪ್ರಾಂಶುಪಾಲ ಭೈರೇಶ್ ಇದ್ದರು.
ರಜೆ ದಿನವೂ ದುಡಿಮೆ ಕಾರ್ಖಾನೆಗಳ ವಿರುದ್ಧ ಕ್ರಮವಿಲ್ಲ
ರಾಮನಗರ: ಲೋಕಸಭೆ ಸಾರ್ವತ್ರಿಕ ಚುನಾವಣೆ ಮತ್ತು ಕಾರ್ಮಿಕರ ದಿನಾಚರಣೆಯಂದು ವೇತನ ಸಹಿತ ರಜೆ ಘೋಷಿಸಿದ್ದರೂ ಜಿಲ್ಲೆಯಲ್ಲಿರುವ ಕೆಲ ಕಾರ್ಖಾನೆಗಳಲ್ಲಿ ಕಾರ್ಮಿಕರಿಂದ ದುಡಿಸಿಕೊಳ್ಳಲಾಗಿರುವ ಆರೋಪ ಕೇಳಿ ಬಂದಿದೆ. ಮತದಾನದಂದು ರಜೆ ನೀಡದ ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್, ಈ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ಮತ್ತು ಸರ್ಕಾರವನ್ನು ಆಗ್ರಹಿಸಿದ್ದರು. ಮೇ 1ರಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕೆಲ ಪ್ರತಿಷ್ಠಿತ ಕಾರ್ಖಾನೆಗಳೂ ಸೇರಿ ವಿವಿಧೆಡೆ ಅರೆಕಾಲಿಕ, ಗುತ್ತಿಗೆ ಸಿಬ್ಬಂದಿಯಿಂದ ಹೆಚ್ಚುವರಿ ಕೆಲಸ ಮಾಡಿಸಲಾಗಿದೆ. ಹೆಚ್ಚುವರಿ ಸಮಯದ ಕೆಲಸಕ್ಕೆ ಸಿಗುವ ಹಣದಾಸೆಗೆ ಬಿದ್ದು ಕಾರ್ಮಿಕರು ಉನ್ನತಾಧಿಕಾರಿಗಳ ಆದೇಶ ಪಾಲಿಸಿದ್ದಾರೆ. ಚುನಾವಣೆ, ಕಾರ್ಮಿಕರ ದಿನ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡುವ ಬದಲಾಗಿ ಅವರಿಂದ ದುಡಿಮೆ ಮಾಡಿಸಿಕೊಂಡ ಕಾರ್ಖಾನೆಗಳ ಮಾಹಿತಿ ಇದ್ದಾಗ್ಯೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಡಿಕೆಸ್ ಸಹೋದರರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಹೇಬಿಯಸ್ ಕಾರ್ಪಸ್ ವಜಾ, ಫಿರ್ಯಾದಿಗೆ ದಂಡ
ರಾಮನಗರ: ಬಾಲಕನ ನಾಪತ್ತೆ ಪ್ರಕರಣದ ಸಂಬಂಧ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ಸುಳ್ಳು ಮಾಹಿತಿ ನೀಡಿದ್ದ ಅರ್ಜಿದಾರರಿಗೆ 5 ಸಾವಿರ ದಂಡ ವಿಧಿಸಿದೆ. ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಕೋಣನಕುಂಟೆ 4ನೇ ಕ್ರಾಸ್ ನಿವಾಸಿ ಲಕ್ಷ್ಮೀ ಕೋಂ ಲೇಟ್ ಗುಳಪ್ಪ ಅವರು 5 ವರ್ಷದ ಹಿಂದೆ ಕಾಣೆಯಾದ ತಮ್ಮ ಮಗ ನಾರಾಯಣ(14) ಅಪಹರಣವಾಗಿರುವ ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದರು. ಕುಂಬಳಗೋಡು ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದರು. ಅದೇ ವೇಳೆಗೆ ತಮ್ಮ ಮಗನನ್ನು ಸಂದೀಪ್ ಎಂಬುವರು ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಫಿರ್ಯಾದಿ ಲಕ್ಷ್ಮೀ, ಆಕೆಯ ಪುತ್ರಿ ಈ ಹಿಂದೆ ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಿದ್ದರು. ಅದನ್ನು ಒಪ್ಪದ ನಾರಾಯಣ 2009ರಲ್ಲಿ ಶಾಲೆಗೆ ಹೋದವನು ಮತ್ತೆ ಮನೆಗೆ ವಾಪಸಾಗಿರಲಿಲ್ಲ. ಈ ಸಾಕ್ಷ್ಯಾಧಾರಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಧೀಶರು ಏ.30ರಂದು ಅರ್ಜಿ ವಜಾಗೊಳಿಸಿದ್ದು, ಫಿರ್ಯಾದಿಗೆ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಮಕ್ಕಳ ಉಚಿತ ಆರೋಗ್ಯ ಶಿಬಿರ ಇಂದು
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ ನೇತೃತ್ವದಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆಯ 5ನೇ ಶಿಬಿರ ಮೇ 4ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ವಿಶೇಷವಾಗಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ದೃಷ್ಟಿಯಿಂದಲೇ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಅವಶ್ಯಕತೆಯುಳ್ಳ ಸಣ್ಣ ಮಕ್ಕಳನ್ನು ಶಿಬಿರಕ್ಕೆ ಕರೆತಂದು ಆರೋಗ್ಯದ ಸಲಹೆ ಪಡೆಯಬಹುದಾಗಿದೆ. ಅದೇ ರೀತಿ ಶಿಬಿರದಲ್ಲಿ ಉಚಿತ ಔಷಧ ವಿತರಣೆ ಕೂಡ ನಡೆಯಲಿದೆ. ಶ್ರೀಶಿರಡಿ ಸಾಯಿ ಮಂದಿರದ ಅಧ್ಯಕ್ಷ ಎಚ್.ಪಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಶಿಬಿರದಲ್ಲಿ ಮಕ್ಕಳ ತಜ್ಞ ವೈದ್ಯರಾದ ಡಾ.ಟಿ.ವೇಣುಗೋಪಾಲ್, ಡಾ.ಸುಭಾಷ್ ಶಿಂಪಿಗೇರ್ ಮತ್ತಿತರರು ಭಾಗವಹಿಸಲಿದ್ದಾರೆ. ಮಾರುತಿನಗರದ ಟಿ.ಎನ್. ತಿಮ್ಮರಾಜು ಮತ್ತು ಸಹೋದರರು ಶಿಬಿರ ಪ್ರಾಯೋಜಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬನ್ನೇರುಘಟ್ಟ ಕಾಡಿಗೆ ಬೆಂಕಿ
ಸಸ್ಯರಾಶಿ ಅಗ್ನಿಗಾಹುತಿ
ಆನೇಕಲ್ಲು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಜೈವಿಕ ವನಕ್ಕೆ ಹೊಂದಿಕೊಂಡಿರುವ ಸುವರ್ಣಮುಖಿ ಕಾಡಿಗೆ ಬೆಂಕಿ ಬಿದ್ದಿದೆ. ಸುಮಾರು 16 ಎಕರೆ ವ್ಯಾಪ್ತಿಯ ಕಾಡಿಗೆ ಬೆಂಕಿ ಹರಡಿದ್ದು ಅಮೂಲ್ಯ ಸಸ್ಯ ರಾಶಿ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಬೆಂಕಿಯನ್ನು ನಂದಿಸಲು ಅರಣ್ಯ ಸಿಬ್ಬಂದಿ ಶ್ರಮಿಸುತ್ತಿದ್ದು ಅಗ್ನಿ ಶ್ಯಾಮಕ ದಳದ ನೆರವು ಕೋರಿದ್ದಾರೆ. ಬೇಸಿಗೆಯಲ್ಲಿ ಸಹಜವಾಗಿ ಈ ಕಾಡು ಬೆಂಕಿಗೆ ಆಹುತಿಯಾಗುತ್ತಿದ್ದು ತಹಬಂದಿಗೆ ತರಲು ಪ್ರಯತ್ನಿಸಿದ್ದಾರೆ. ಜೊತೆಗೆ ಸ್ಥಳೀಯರು ಬೆಂಕಿ ನಂದಿಸಲು ಮಣ್ಣ ಎರಚುವುದು, ಹಸಿ ಸೊಪ್ಪನ್ನು ಬಡಿಯುವ ಮೂಲಕ ಪ್ರಾಥಮಿಕ ಪ್ರಯತ್ನ ಮಾಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಅರಣ್ಯಾ ಸಿಬ್ಬಂದಿ ತಿಳಿಸಿದ್ದಾರೆ.
ಬೇಸಿಗೆ ಶಿಬಿರಗಳಿಂದ ಮಕ್ಕಳಿಗೆ ಕೌಶಲ್ಯ ಕಲಿಯಲು ಸಹಕಾರಿ
ಚನ್ನಪಟ್ಟಣ: ಬೇಸಿಗೆ ಶಿಬಿರಗಳಿಂದ ಮಕ್ಕಳಿಗೆ ಮನರಂಜನೆ ಜತೆಗೆ ಜೀವನ ಕೌಶಲ್ಯ ಕಲಿಯಲು ಸಹಕಾರಿಯಾಗುತ್ತವೆ ಎಂದು ಸಾರ್ವಜನಿಕ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎಸ್. ಗೌಡ ಅಭಿಪ್ರಾಯಪಟ್ಟರು. ಸಂಸ್ಥೆಯ ಆವರಣದಲ್ಲಿ ಸೌಭಾಗ್ಯ ಯೋಗಾ ಕೇಂದ್ರ ಹಮ್ಮಿಕೊಂಡಿದ್ದ 15 ದಿನಗಳ ಬೇಸಿಗೆ ಶಿಬಿರ ಮತ್ತು ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಜಾದಿನದಲ್ಲಿ ಮಕ್ಕಳನ್ನು ಮನೆಯಲ್ಲಿ ಕೂರಿಸುವ ಬದಲು ಇಂತಹ ಶಿಬಿರಗಳಿಗೆ ಸೇರಿಸುವುದರಿಂದ ಅವರನ್ನು ಪ್ರಬುದ್ಧರಾಗಿಸಲು ಸಾಧ್ಯವಾಗುತ್ತದೆ ಎಂದರು. ಯುವಜನ ಸೇವಾ ಕ್ರೀಡಾ ಇಲಾಖೆ ಸಹ ನಿರ್ದೇಶಕಿ ನವಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿದರು. ಪುಟ್ಟಮಕ್ಕಳಲ್ಲಿ ಕಲೆ, ಕ್ರೀಡಾ, ತರಬೇತಿ ನೀಡಿ, ಮಕ್ಕಳ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಸಹಕಾರ ನೀಡುವ ಶಿಬಿರಗಳಿಗೆ ಇಲಾಖೆಯಿಂದಲೂ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಡಾ.ಎಸ್.ಬಾಲಾಜಿ, ಸಾರ್ವಜನಿಕ ವಿದ್ಯಾಸಂಸ್ಥೆಯ ಖಜಾಂಚಿ ಮಲ್ಲಯ್ಯ, ಕಾರ್ಯದರ್ಶಿ ರಾಜು, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವರಾಮಯ್ಯ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮರಿಯಪ್ಪ, ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಮಾದು, ರಾಜೇಶ್ವರಿ ಇದ್ದರು.
ಲಯನ್ಸ್ ಕ್ಲಬ್ನಿಂದ 195ನೇ ಕಣ್ಣಿನ ಚಿಕಿತ್ಸಾ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 195ನೇ ಮಾಸಿಕ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಲಯನ್ಸ್ ಭವನದಲ್ಲಿ ಮೇ 5ರ ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಶಿಬಿರವನ್ನು ಜಿ.ಬಾಲರಾಜ್ ಮತ್ತು ಕುಟುಂಬ ಮತ್ತು ಪ್ರಿಯಾ ಟ್ರೇಡರ್ಸ್ನ ಎ.ವೆಂಕಟೇಶ್ ಪ್ರಾಯೋಜಿಸಿದ್ದಾರೆ. ಜಿ.ಬಾಲರಾಜು ಶಿಬಿರವನ್ನು ಉದ್ಘಾಟಿಸಲಿದ್ದು, ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಶಂಕರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ದೊಡ್ಡಬಳ್ಳಾಪುರದ ಲಯನ್ಸ್ ಮತ್ತು ಲಯನೆಸ್ ಕ್ಲಬ್, ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ, ಅಕ್ಷಿ ಜೋಡಣಾ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಸತತ 195 ಶಿಬಿರಗಳು ನಡೆದಿರುವುದು ಮಹತ್ವದ ದಾಖಲೆ. ಪ್ರತಿ ಶಿಬಿರದಲ್ಲೂ ಹತ್ತಾರು ರೋಗಿಗಳು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ದೊಡ್ಡಬಳ್ಳಾಪುರ ಲಯನ್ಸ್ ಸಂಸ್ಥೆಯ ಈ ಶಿಬಿರ ಗ್ರಾಮಾಂತರದ ಜನರಿಗೆ ದೃಷ್ಟಿದಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಪುರಸಭೆ ಅಧ್ಯಕ್ಷರಿಗೆ ಮದರ್ ತೆರೇಸಾ ಪ್ರಶಸ್ತಿ
ಹೊಸಕೋಟೆ: ಬೆಂಗಳೂರಿನ ಇಂಟರ್ನ್ಯಾಶನಲ್ ಇಂಟಿಗ್ರಿಟಿ ಪೀಸ್ ಹಾಗೂ ಘ್ರೆಂಡ್ಶಿಪ್ ಸೊಸೈಟಿ ಪಟ್ಟಣದ ಪುರಸಭೆ ಅಧ್ಯಕ್ಷೆ ಗುಲಾಬ್ಜಾನ್ರಿಗೆ ಸಮಜಸೇವೆಯಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ಮದರ್ ತೆರೆಸಾ ಪ್ರಶಸ್ತಿ ನೀಡಿದೆ. ಎರಡು ಅವಧಿ ಪುರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದು ಪ್ರಸ್ತುತ ಪುರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಮುಂಬೈನ ಆಯುರ್ವೇದ ವೈದ್ಯ ಡಾ. ವಿಜಯಾ ಅಯ್ಯರ್ ಪ್ರಶಸ್ತಿ ವಿತರಿಸಿದರು. ಪ್ರಸಸ್ತಿ ಪಡೆದ ಗುಲಾಬ್ಜಾನ್ರಿಗೆ ಶಾಸಕ ಎನ್. ನಾಗರಾಜ್ ಅಭಿನಂದಿಸಿದ್ದಾರೆ.
ಮಕ್ಕಳ ಮುಗ್ಧಭಾವನೆ ಕದಡಬೇಡಿ: ಡಾ.ಕೋಡಿ ರಂಗಪ್ಪ
ದೊಡ್ಡಬಳ್ಳಾಪುರ: ಮಕ್ಕಳ ಮುಗ್ಧಭಾವನೆಗಳನ್ನು ಕದಡುವ ಪ್ರಯತ್ನಗಳು ಸಲ್ಲದು. ಯಾವಾಗಲೂ ಮುಗ್ಧಭಾವನೆಗಳು ಕಟ್ಟಿಕೊಡುವ ಪ್ರಪಂಚವನ್ನು ಅಷ್ಟೇ ಮುಗ್ಧತೆಯಿಂದ ನೋಡುವ, ಬೆರಗುಗಣ್ಣಿನಿಂದ ವಿಶ್ಲೇಷಿಸುವ ಮನೋಧರ್ಮ ಮುಖ್ಯ ಎಂದು ಚಿಕ್ಕಬಳ್ಳಾಪುರದ ಮುನಿಸಿಪಲ್ ಬಿಇಡಿ ಕಾಲೇಜು ಉಪನ್ಯಾಸಕ ಡಾ.ಕೋಡಿ ರಂಗಪ್ಪ ಹೇಳಿದರು. ವೈಶ್ಯರ ಬೀದಿಯಲ್ಲಿ ಆರಂಭವಾಗಿರುವ ಅಮೇಜಿಂಗ್ ಕಿಡ್ಸ್ ಮಾಂಟೇಸರಿ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ತಾಳ್ಮೆ, ಸಂಯಮ, ಶಿಸ್ತು, ಕರುಣೆ ಇತ್ಯಾದಿ ಮಹತ್ವದ ವಿಚಾರಗಳು ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸಲು ಬಹುಮುಖ್ಯ. ಶಿಕ್ಷಕರು ಯಾವತ್ತೂ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಮಕ್ಕಳನ್ನು ಸೆಳೆಯಬೇಕು. ಮಕ್ಕಳ ಮುಂದೆ ಮಕ್ಕಳಾಗಿ ಮಕ್ಕಳೊಂದಿಗೆ ಬೆರೆತಾಗ ಮಾತ್ರ ಅವರ ಭಾವನೆಗಳನ್ನು ಸಮರ್ಥವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು. ಕೊಂಗಾಡಿಯಪ್ಪ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಸ್. ಮಹಾಬಲೇಶ್ವರ್, ಚಿಕ್ಕಬಳ್ಳಾಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಸುಬ್ಬರಾಯಪ್ಪ, ದರ್ಗಾಜೋಗಿಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಹನುಮಂತರಾವ್ ಮತ್ತಿತರರು ಇದ್ದರು.
ಕಾಲೇಜು ಜೀವನ ಮರೆಯಲಾರದ ಅನುಭವ
ಕನಕಪುರ: ಕನಕಪುರ ತಾಲೂಕು ಕೋಡಿಹಳ್ಳಿಯ ಶ್ರೀಮತಿ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು. ಜಿಪಂ ಸದಸ್ಯ ಮುನಿಹುಚ್ಚೇಗೌಡ ಉದ್ಘಾಟನೆಯನ್ನು ನೆರವೇರಿಸಿದರು. ಪ್ರಾಂಶುಪಾಲ ಪ್ರೊ.ಎ.ಸಿ.ಚೂಡಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಕಾಲೇಜು ಜೀವನ ಮರೆಯಲಾರದ ಅನುಭವ ನೀಡುತ್ತದೆ. ಶೈಕ್ಷಣಿಕ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳ ಭವಿಷ್ಯದ ಜೀವನ ಸುಗಮವಾಗಿರಲಿ ಎಂದು ಜಿಪಂ ಸದಸ್ಯ ಮಾದೇಶ್ ಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ವಿವಿ ಕಲಾವಿಭಾಗದಲ್ಲಿ 6ನೇ ರ್ಯಾಂಕ್ ಪಡೆದ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೆ.ಎಸ್.ನಾಗರತ್ನ ಹಾಗೂ ಡಾಕ್ಟೋರೇಟ್ ಗಳಿಸಿದ ಡಾ.ಎನ್.ಪಿ. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾರದಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಸವರಾಜಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಸುರೇಶ್ ಆಗಮಿಸಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಅಕ್ರಮ ಮರಳು ಗಣಿಗಾರಿಕೆ: ಯಂತ್ರ, ವಾಹನ ವಶಕ್ಕೆ
ರಾಮನಗರ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಎಎಸ್ಪಿ ಕುಲದಿಪ್ ಜೈನ್ ನೇತೃತ್ವದ ಪೊಲೀಸರ ತಂಡ ಅಕ್ರಮ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರಗಳು, ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಾಲೂಕಿನಲಿ ಮರಳು ತೆಗೆಯುವುದನ್ನು ನಿಷೇಧಿಸಿದ್ದರೂ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿರತರಾಗಿದ್ದ ವೇಳೆ ಮರಳು ಮಾಫಿಯ ತನ್ನ ದಂಧೆಯನ್ನು ರಾಜಾರೋಷವಾಗಿ ಮುಂದುವರೆಸಿತ್ತು. ಈ ಬಗ್ಗೆ ನಾಗರಿಕರು, ಮಾಧ್ಯಮಗಳು ಅಧಿಕಾರಿಗಳ ಗಮನ ಸೆಳೆದಿದ್ದರು. ಇದೀಗ ಪೊಲೀಸ್ ಇಲಾಖೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮತ್ತೆ ಮುಂದಾಗಿದ್ದಾರೆ. ರಾಮನಗರದ ಕೂಟಗಲ್ ಹೋಬಳಿ ತಿಮ್ಮಸಂದ್ರ ಗ್ರಾಮದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಯ ಮೇಲೆ ಶನಿವಾರ ಸಂಜೆ ದಾಳಿ ನಡೆಸಿದ ತಂಡ 2 ಜೆಸಿಬಿ ಯಂತ್ರಗಳು, 2 ಟ್ರ್ಯಾಕ್ಟರ್, 2 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಗಡಿಯನ್ನು ಕನಕಪುರ ಮಾಡಲು ನಾವು ಬಿಡುವುದಿಲ್ಲ
ಮಾಗಡಿ: ಕನಕಪುರದಂತೆ ಮಾಗಡಿಯನ್ನು ಮಾದರಿ ಮಾಡುವುದಾಗಿ ಎ.ಮಂಜು ಹೇಳಿಕೆ ನೀಡಿದ್ದಾರೆ. ಕನಕಪುರದ ಜನತೆಯನ್ನು ಬೆದರಿಸಿ ಮತ ಹಾಕಿಸಿಕೊಂಡಂತೆ ಇಲ್ಲೂ ಮತಗಳಿಕೆಗೆ ಮತದಾರರನ್ನು ಬೆದರಿಸುವ ಕುತಂತ್ರ ಬೇಡ, ಮಾಗಡಿಯನ್ನು ಕನಕಪುರ ಮಾಡಲು ನಾವ್ಯಾರು ಬಿಡುವುದೂ ಇಲ್ಲ ಎಂದು ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಧನಂಜಯ ಕೆಪಿಸಿಸಿ ಸದಸ್ಯ ಎ.ಮಂಜು ಅವರಿಗೆ ಎಚ್ಚರಿಕೆ ನೀಡಿದರು. ಅವರು ಕುದೂರಿನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹುಲೀಕಲ್ನಲ್ಲಿ ಕೊಲ್ಲಾಪುರದಮ್ಮದೇವಿ ಉತ್ಸವಮೂರ್ತಿ ಮೆರವಣಿಗೆಯಲ್ಲಿ ಕುಣಿತದ ವಿಚಾರವಾದಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವ ಎ.ಮಂಜು ಅವರು ಮೊದಲು ಆತ್ಮಶೋಧನೆ ಮಾಡಿಕೊಳ್ಳಲಿ. ಕಾಂಗ್ರೆಸ್ ಮುಖಂಡರನ್ನು ಎ.ಮಂಜು ಅವರೇ ಎತ್ತಿ ಕಟ್ಟಿ ಒಳಸಂಚು ರೂಪಿಸಿದ್ದಾರೆ. ಉತ್ಸವ ಮೂರ್ತಿ ಮೆರವಣೆಗೆಯಲ್ಲಿ ಮಾತಿನ ಚಕಮುಕಿ ನಡೆಸಿ ಘರ್ಷಣೆ ಇಳಿದಿದ್ದು, ಹಲ್ಲೆಗೆ ಕಾರಣರಾಗಿದ್ದಾರೆ. ಕೇವಲ ಓಟಿಗಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಧನಂಜಯ ಆರೋಪಿಸಿದರು.
ಕಾನೂನಿನ ಅರಿವಿಂದ ಕಾರ್ಮಿಕ ಸಮಸ್ಯೆಗಳ ಪರಿಹಾರ ಸಾಧ್ಯ
ಆನೇಕಲ್ಲು: ಕಾರ್ಮಿಕ ಮುಖಂಡರು ತಮ್ಮ ಹಕ್ಕುಗಳನ್ನು ಅರಿತು ಕಾರ್ಮಿಕರಿಗೆ ತಿಳಿ ಹೇಳಬೇಕು. ದುಡಿಮೆಗೆ ತಕ್ಕ ವೇತನ, ಕೈಗಾರಿಕೆಗಳಲ್ಲಿ ನೀಡಬೇಕಾದ ಸವಲತ್ತುಗಳು, ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸೌಹಾರ್ದ ಸಂಬಂಧ ಬಗ್ಗೆ ಅರಿತಿರಬೇಕು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ವಿ.ವಿ. ಮಲ್ಲಾಪುರ ತಿಳಿಸಿದರು. ಅವರು ತಾಲೂಕಿನ ಹೆಬ್ಬಗೆಡಿಯಲ್ಲಿ ಸಿಐಟಿಯು, ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಇಲಾಖೆ ಹಾಗೂ ಅಸಂಘಟಿತ ಕೂಲಿ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ, ಅಸಹಕಾರ ಬದಿಗೊತ್ತಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಯುತವಾಗಿ ಹಕ್ಕನ್ನು ಪಡೆದುಕೊಳ್ಳಲು ಉಚಿತ ಕಾನೂನು ಸಲಹಾ ಕೇಂದ್ರದ ಸಹಾಯ ಪಡೆಯಬಹುದು ಎಂದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕಾಂ. ಪ್ರಕಾಶ್, ನ್ಯಾ. ಈಶ್ವರ್, ಕಾರ್ಮಿಕ ನಿರೀಕ್ಷಕ ಶೇಖರ್ ನಾಯಕ್, ಮುಖಂಡರಾದ ಬಿ.ಎಸ್. ಮಂಜುನಾಥ್, ವಕೀಲರ ಸಂಘದ ವೈ. ಪ್ರಕಾಶ್, ಕಾಂ. ಡಿ. ಮಾದೇಶ್, ಕಾಂ.ಡಿ.ಮಾದೇಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

