ಬೆಂಗಳೂರು ಗ್ರಾಮಾಂತರ

ವರ್ಷ ಕಳೆದರೂ ಅನುಮೋದನೆ ಸಿಗದ ಪ್ರಸ್ತಾವನೆ

Published On :

ಕ.ಪ್ರ.ವಾರ್ತೆ,  ರಾಮನಗರ , ಮೇ 5
ಲಂಡನ್‌ನ ಥೇಮ್ಸ್ ಮಾದರಿಯಲ್ಲಿ ಅರ್ಕಾವತಿ ನದಿಯನ್ನು ರಾಮನಗರ ನಗರಸಭೆ ವ್ಯಾಪ್ತಿ ಮಟ್ಟಿಗೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿ ವರ್ಷ ಕಳೆದರೂ ಅನುಮೋದನೆ ಸಿಗದಾಗಿದೆ.
ಅರ್ಕಾವತಿಯು ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ 2.5 ಕಿ.ಮೀ. ಉದ್ದವಿದೆ. ಥೇಮ್ಸ್ ಮಾದರಿಯಲ್ಲಿ ಈ ನದಿ ಅಭಿವೃದ್ಧಿಪಡಿಸಲು ರು.9.5 ಕೋಟಿ ವೆಚ್ಚದ ಯೋಜನೆಗೆ ಖಾಸಗಿ ಸಂಸ್ಥೆಯಿಂದ ಸಿದ್ಧಪಡಿಸಿದ್ದ ನೀಲನಕ್ಷೆಯೊಂದಿಗೆ ಪ್ರಾಧಿಕಾರ 2013ರ ಮೇ ಮಾಹೆಯಲ್ಲೇ ಪ್ರಸ್ತಾವನೆ ಸಲ್ಲಿಸಿದೆ.
ಬರೋಬ್ಬರಿ ಒಂದು ವರ್ಷವಾದರೂ ಒಂದು ಮಹತ್ವಾಕಾಂಕ್ಷಿ ಯೋಜನೆಯ ಪ್ರಸ್ತಾವನೆ ಬಗ್ಗೆ ಸರ್ಕಾರ ಗಮನ ಹರಿಸಿಯೇ ಇಲ್ಲ. ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಅರ್ಕಾವತಿ ನದಿ ರಾಮನಗರದ ನಾಗರಿಕರ ಪಾಲಿಗೆ ಶಾಪವಾಗಿದೆ.
ಪ್ರಸ್ತಾವನೆಯಲ್ಲಿ ಏನಿದೆ: ಸುಮಾರು 60 ರಿಂದ 65 ಮೀಟರ್ ಅಗಲವಿರುವ ಅರ್ಕಾವತಿ ನದಿ ಪಾತ್ರವನ್ನು ಆಸುಪಾಸಿನ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಮೊದಲಿಗೆ ಅದೆಲ್ಲವನ್ನೂ ತೆರವುಗೊಳಿಸಿ, ನಂತರ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸುವುದು ಪ್ರಸ್ತಾವನೆಯಲ್ಲಿ ಸೇರಿರುವ ಅಂಶವಾಗಿದೆ.
ನದಿಯ ನಡು ಮಧ್ಯೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ 15 ಮೀಟರ್ ಅಗಲದ ಕಾಲುವೆ ನಿರ್ಮಿಸುವುದು,  ಇಕ್ಕೆಲಗಳಲ್ಲಿ ಕಲ್ಲು ಹಾಸು ಅಳವಡಿಸಿ, ಅಲ್ಲಲ್ಲಿ ಗಿಡಗಳನ್ನು ನೆಟ್ಟು ನಾಗರಿಕರ ವಾಯು ವಿಹಾರಕ್ಕೆ ಯೋಗ್ಯವಾದ ವ್ಯವಸ್ಥೆ ಕಲ್ಪಿಸುವುದು ಯೋಜನೆಯಲ್ಲಿ ಸೇರಿದೆ.
ವಾಯು ವಿಹಾರ ನಡೆಸುವವರು ವಿಶ್ರಮಿಸಲು ಅನುಕೂಲವಾಗುವಂತೆ ಸೀಮಿತ ಕಡೆ ನೆರಳಿನ ವ್ಯವಸ್ಥೆ, ಕಲ್ಲು ಬೆಂಚುಗಳ ಅಳವಡಿಕೆ, ಅಲ್ಲಲ್ಲಿ ಸೇತುವೆಗಳ ನಿರ್ಮಾಣ, ರಾಸಾಯನಿಕ ಮಿಶ್ರಣ ಮಾಡಿ ಕೊಳಚೆ ನೀರಿನ ಹರಿವಿನಿಂದ ಕೆಟ್ಟ ವಾಸನೆ ಬರದಂತೆ ತಡೆಯುವ ವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದೆ.
ಶಾಪವಾದ ಅರ್ಕಾವತಿ: ಈಗ್ಗೆ 15 ವರ್ಷದ ಹಿಂದಿನವರೆಗೂ ಜೀವನದಿಯಾಗಿ ರಾಮನಗರದ ಪಾಲಿಗೆ ವರವಾಗಿದ್ದ ಅರ್ಕಾವತಿ ನದಿಯು ಈಗ ಮಳೆಗಾಲದಲ್ಲೂ ನೀರು ಕಾಣದೆ ಬರಿದಾಗಿದೆ. ಗಿಡ-ಗಂಟಿಗಳಿಂದ ಆವರಿಸಲ್ಪಟ್ಟ ನದಿಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ.  ನಗರದ ವಿವಿಧೆಡೆ ಚರಂಡಿ, ಒಳ ಚರಂಡಿಯ ಸಂಪರ್ಕವನ್ನು ಈ ನದಿಗೆ ಕಲ್ಪಿಸಿರುವುದರಿಂದ ಕಲುಷಿತ ನೀರು ಹರಿಯುತ್ತಿದೆ. ದಟ್ಟ ಕಾನನವನ್ನೂ ಮೀರಿಸುವಂತೆ ಬೆಳೆದಿರುವ ಜೊಂಡು ಮಧ್ಯೆ ವಿಷಜಂತುಗಳೇ ತುಂಬಿವ. ಇನ್ನೊಂದೆಡೆ ಈ ನದಿ ಸೊಳ್ಳೆಗಳ ಉತ್ಪಾದನಾ ಕೇಂದ್ರವೂ ಹೌದು.      
ಹರಿದ ಹಣದ ಹೊಳೆ: ವರ್ಷದ ಹಿಂದಷ್ಟೇ ನಗರ ಪರಿಮಿತಿಯಲ್ಲಿ ಅರ್ಕಾವತಿ ನದಿ ಶುಚೀಕರಣಕ್ಕಾಗಿ ರು.58 ಲಕ್ಷ ಬಿಡುಗಡೆಯಾಗಿತ್ತು. ಜೆಸಿಬಿ ಯಂತ್ರಗಳನ್ನು ನದಿಗೆ ಇಳಿಸಿದ ಗುತ್ತಿಗೆದಾರರು ಬೆಳೆದು ನಿಂತ ಜೊಂಡು ತೆಗೆಸಿ, ಹಣ ಜೇಬಿಗಿಳಿಸಿಕೊಂಡರೇ ಹೊರತು ಶಾಶ್ವತ ಕಾಯಕಲ್ಪ ಸಿಗಲಿಲ್ಲ.
ನಾಲ್ಕೇ ತಿಂಗಳಲ್ಲೇ ಗಿಡ-ಗಂಟಿ ಬೆಳೆದುಕೊಂಡು ನದಿ ಯಥಾಸ್ಥಿತಿಗೆ ಬಂದಿತು. ನದಿ ಆಸುಪಾಸಿನ ನಿವಾಸಿಗಳು ಈಗಲೂ ನೆಮ್ಮದಿಯಿಂದ ಬದುಕಲಾಗದೆ ಪರಿತಪಿಸುತ್ತಿದ್ದಾರೆ. ಥೇಮ್ಸ್ ಮಾದರಿಯಲ್ಲಿ ಅರ್ಕಾವತಿ ಅಭಿವೃದ್ಧಿಪಡಿಸಿದರೆ ನಗರದ ಅಂದ ಹೆಚ್ಚು ಜತೆಗೆ ಪರಿಸರ ಮಾಲಿನ್ಯವೂ ತಪ್ಪುತ್ತದೆ.


-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.