ಟೋಲ್ಗೆ ಮುತ್ತಿಗೆ ಯತ್ನ, ಲಾಠಿ ಪ್ರಹಾರ
ಕ.ಪ್ರ. ವಾರ್ತೆ , ದೇವನಹಳ್ಳಿ , ಮೇ 6
ನವಯುಗ ಸಂಸ್ಥೆ ಟೋಲ್ ಶುಲ್ಕವನ್ನು 4 ಪಟ್ಟು ಹೆಚ್ಚು ಮಾಡಿರುವುದರ ವಿರುದ್ಧ 3 ನೇ ದಿನವಾದ ಮಂಗಳವಾರವೂ ಪ್ರತಿಭಟನೆ ಮುಂದುವರೆದಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಭಾರತೀಯ ಜನತಾ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಲ್ಲದೆ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಟ್ಯಾಕ್ಸಿ ಚಾಲಕರ ಸಂಘ ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಟೋಲ್ ರಸ್ತೆಯ ವಿವಿಧ ಸ್ಥಳಗಳಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಮಾಜಿ ಉಪಮುಖ್ಯಮಂತ್ರಿ ಅಶೋಕ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮಿಸಬೇಕಾಯಿತು.
ಹಗಲು ದರೋಡೆ: ನವಯುಗ ಸಂಸ್ಥೆ ಅವೈಜ್ಞಾನಿಕವಾಗಿ ಟೋಲ್ ಶುಲ್ಕ ಹೆಚ್ಚು ಮಾಡಿ ಹಗಲು ದರೋಡೆ ಮಾಡುತ್ತಿದೆ. ಈ ಕಾರ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶೋಕ್ ಆರೋಪಿಸಿದರಲ್ಲದೆ ಬಡವರ ಪರ ಎಂದು ಹೇಳುವ ಈ ಸರ್ಕಾರ ಗಾಢ ನಿದ್ರೆಯಲ್ಲಿದೆ, ಈಗಾಗಲೇ ಎರಡು ಬಾರಿ ಬಸ್ ಪ್ರಯಾಣದ ದರ ಏರಿಸಿದೆ, ವಿದ್ಯುತ್ ಶುಲ್ಕ ಏರಿಸಿದ್ದಾರೆ, ಕೆಲವೇ ದಿನಗಳಲ್ಲಿ ನೀರಿನ ದರವನ್ನೂ ಹೆಚ್ಚು ಮಾಡಲಿದ್ದಾರೆ ಎಂದು ಆರೋಪಿಸಿದರು. ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಇದೇ ನವಯುಗ ಸಂಸ್ಥೆಯವರು ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದು ಟೋಲ್ ಸಂಗ್ರಹ ನಿಲ್ಲಿಸಿದ್ದೆ ಎಂಬುದನ್ನು ನೆನಪಿಸಿದರು.
ಸರ್ವೀಸ್ ರಸ್ತೆ ಅಗತ್ಯ: ಈ ಟೋಲ್ ಮೂಲಕ ಅನೇಕ ಮಂದಿ ರೈತರು ಚಿಕ್ಕ ವಾಹನಗಳಲ್ಲಿ ತರಕಾರಿ, ಹಣ್ಣು ಹಂಪಲು ಸಾಗಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅನೇಕ ಮಂದಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಬರುತ್ತಾರೆ. ಕೂಡಲೇ ನವಯುಗ ಸಂಸ್ಥೆಯವರು ಹಿಂದೆ ಇದ್ದ ಟೋಲ್ ಶುಲ್ಕ ವಸೂಲಿ ಮಾಡಬೇಕು. ಜೊತೆಗೆ ಸರ್ವೀಸ್ ರಸ್ತೆ ಮಾಡಲೇ ಬೇಕೆಂದು ಆಗ್ರಹಿಸಿದರು.
ದೋಹದ ಕೆಲಸ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ನಮ್ಮ ನೆಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ನವಯುಗ ಸಂಸ್ಥೆಯವರು ನಮ್ಮ ಅನ್ನ ತಿಂದು ನಮ್ಮ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಹೆಚ್ಚುವರಿಯಾಗಿ ವಸೂಲು ಮಾಡುತ್ತಿರುವ ಶುಲ್ಕವನ್ನು ನಿಲ್ಲಿಸಬೇಕು. ಅಲ್ಲದೆ ಜನ ಸಾಮಾನ್ಯರು ಬಳಸಲು ಸರ್ವೀಸ್ ರಸ್ತೆ ಮಾಡಲೇ ಬೇಕು ಎಂದರು.
ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದರು. ಒಂದು ಹಂತದಲ್ಲಿ ಪೊಲೀಸರು ಎಷ್ಟೇ ತಡೆದರೂ ಪ್ರತಿಭಟನಾಕಾರರು ಟೋಲ್ ಹತ್ತಿರ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ, ಮಾಜಿ ಉಪಮುಖ್ಯಮಂತ್ರಿ ಆರ್.ಆಶೋಕ್, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಶಾಸಕ ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ರವಿ, ಬಿಜೆಪಿ ನಗರ ಜಿಲ್ಲೆ ಅಧ್ಯಕ್ಷ ಮುನಿರಾಜು, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ನಾಗೇನಹಳ್ಳಿ ಕೃಷ್ಣಮೂರ್ತಿ ಅಲ್ಲದೆ ನೂರಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ರಾಜಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ನಾಗೇಶ್, ದೇ.ಸೂ.ನಾಗರಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಯಾವುದೇ ಅನಾಹುತಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಟೋಲ್ ಎಲ್ಲ ಗೇಟ್ಗಳು ಬಂದಾಗಿದ್ದವು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಮಹಿಳಾ ಪ್ರತಿಭಟನಾಕಾರರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿಮಾನ ನಿಲ್ದಾಣದಿಂದ ಬರುವ ವಾಹನಗಳಿಗೆ ರಸ್ತೆಗೆ ಅಡ್ಡವಾಗಿ ಹಾಕಲಾಗಿದ್ದ ಸಿಮೆಂಟ್ ದಿಮ್ಮಿಗಳನ್ನು ಕ್ರೇನ್ ಮೂಲಕ ಸರಿಸಿ ವಿಮಾನ ನಿಲ್ದಾಣದಿಂದ ಬರುವ ವಾಹನಗಳಿಗೆ ದಾರಿ ಮಾಡಿಕೊಟ್ಟರು.
ಜೆಡಿಎಸ್ ಪ್ರತಿಭಟನೆ ಇಂದು
ದೇವನಹಳ್ಳಿ: ನವಯುಗ ಸಂಸ್ಥೆಯವರು ಟೋಲ್ ಕುರಿತಂತೆ ಅವೈಜ್ಞಾನಿಕವಾಗಿ ನಿರ್ಧಾರ ಕೈಗೊಂಡಿದ್ದು ನಾಲ್ಕು ಪಟ್ಟು ಹೆಚ್ಚು ಶುಲ್ಕ ವಸೂಲು ಮಾಡುತ್ತಿರುವುದರ ವಿರುದ್ದ ಜೆಡಿಎಸ್ ಕಾರ್ಯಕರ್ತರು ಬುಧವಾರ ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಪ್ರತಿಭಟನಾ ಸಭೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ನಡೆಯಲಿದ್ದು ಜೆಡಿಎಸ್ ಮುಖಂಡ ರತನ್ ಸಿಂಗ್, ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಭಾಗವಹಿಸಲಿದ್ದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು. ಜೆಡಿಎಸ್ ಜಿಲ್ಲಾ ಖಜಾಂಚಿ ಬಿ.ಮುನೇಗೌಡ. ತಾಲೂಕು ಅಧ್ಯಕ್ಷ ಮುನಿಶಾಮಯ್ಯ ಕಾರ್ಯಾಧ್ಯಕ್ಷ ಆರ್.ಮುನೇಗೌಡ ಉಪಸ್ಥರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

