ಬೆಂಗಳೂರು ಗ್ರಾಮಾಂತರ

ಭಾಷಾವಾರು ಪ್ರಾಂತ್ಯ ಪರಿಕಲ್ಪನೆಗೆ ಪೆಟ್ಟು

Published On :

ದೊಡ್ಡಬಳ್ಳಾಪುರ: ಅನುದಾನರಹಿತ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ತೀರ್ಪಿತ್ತಿರುವ ಸುಪ್ರೀಂ ಕೋರ್ಟಿನ ತೀರ್ಪಿನಿಂದ ದೇಶದ ಭಾಷಾ ವೈವಿಧ್ಯತೆಯ ಸರ್ವನಾಶಕ್ಕೆ ನಾಂದಿ ಹಾಡಿದಂತಿದೆ ಎಂದು ಇಲ್ಲಿನ ಅನೇಕ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸುಪ್ರೀಂ ತೀರ್ಪು ವಿರೋಧಿಸಿ ತಾಲೂಕು ಕನ್ನಡ ಪಕ್ಷದ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ ಮತ್ತಿತರರು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳು ಸಾರ್ವಭೌಮತ್ವವನ್ನು ಹೊಂದಿರಬೇಕು.
 ರಾಜ್ಯಗಳ ಪುನರ್ವಿಂಗಣೆ ಸಂದರ್ಭದಲ್ಲಿ ದೇಶದ ಭಾಷಾ ವೈವಿಧ್ಯತೆಯ ಆಧಾರದಲ್ಲಿ ಆ ನೆಲದ ಸಂಸ್ಕೃತಿಯ ಉಳಿವಿನ ಪರಿಕಲ್ಪನೆಯಲ್ಲಿ ರಾಜ್ಯಗಳ ರಚನೆಯಾಗಿದೆ. ಆದರೆ ಈಗ ಸುಪ್ರೀಂ ಕೋರ್ಟ್ ನೆಲದ ಭಾಷೆ ಕಡ್ಡಾಯವಲ್ಲ ಎಂದು ತೀರ್ಪಿತ್ತಿದೆ. ಇದರಿಂದ ಸಾಂವಿಧಾನಿಕವಾಗಿ ಒಪ್ಪಿಕೊಂಡ ರಾಜ್ಯ ರಚನೆ ಪ್ರಕ್ರಿಯೆಯೇ ಅರ್ಥ ಕಳೆದುಕೊಂಡಂತಾಗಿದೆ.
ಉಳ್ಳವರ ಮತ್ತು ಲಾಬಿದಾರರ ವಾದ ಕೋರ್ಟಿನಲ್ಲಿ ಗೆದ್ದಿದೆ. ಆದರೆ ಈ ನೆಲದ ಮಕ್ಕಳ ಸಂಸ್ಕೃತಿಯನ್ನು ಉಳಿಸುವ ಮತ್ತು ಭಾಷೆಯನ್ನು ಬಳಸುವ ವಾದ ಸೋತಿದೆ. ಇದಕ್ಕೆ ಸರ್ಕಾರಗಳೇ ನೇರ ಹೊಣೆ. ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಹಿಂದು-ಮುಂದು ನೋಡದೆ ಪರವಾನಗಿ ನೀಡಿ, ಎಲ್ಲ ಸವಲತ್ತುಗಳನ್ನು ನೀಡುವ ಸರ್ಕಾರ ಅತಿ ಸೂಕ್ಷ್ಮ ವಿಚಾರಗಳಲ್ಲಿ ಓಲೈಕೆ ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದರು.
ನೆರೆಯ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆ ಕಡ್ಡಾಯವಾಗಿ ಶಿಕ್ಷಣದ ಮಾಧ್ಯಮವಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇದು ಚರ್ಚೆಯ ವಸ್ತುವಾಗಿರುವುದು ಶೋಚನೀಯ. ಕುಸ್ಮಾ ಆಡಳಿತವರ್ಗದ ಕನ್ನಡ ವಿರೋಧಿ ಧೋರಣೆ ಆಕ್ಷೇಪಾರ್ಹ. ಈ ನೆಲದ ಎಲ್ಲ ಸವಲತ್ತುಗಳನ್ನು ಪಡೆದು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಜನ ಇಲ್ಲಿನ ಭಾಷೆಗೆ ಮಾನ್ಯತೆ ನೀಡದಿರುವುದು ದುರಂತವೇ ಸರಿ. ಇಂತಹ ಡೋಂಗಿತನ ನಿಲ್ಲಬೇಕು. ಭಾಷೆ-ಸಂಸ್ಕೃತಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು. ಭಾಷೆಯ ಆಯ್ಕೆ ಮಗು ಮತ್ತು ಪೋಷಕರಿಗೆ ಬಿಟ್ಟವಿಚಾರ ಎಂಬುದು ಸ್ವಾಗತಾರ್ಹ. ಆದರೆ ಆಯ್ಕೆಯ ಪ್ರಾಶಸ್ತ್ಯ ಕನ್ನಡವೇ ಆಗಿರಬೇಕಾದ್ದು, ಇಲ್ಲಿ ವಾಸಿಸುವ ಎಲ್ಲ ಜನರ ಹೊಣೆಗಾರಿಕೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.