20 ನಿಮಿಷ 20 ಸುದ್ದಿ
ಆನೇಕಲ್ಲು: ಸಂಗೀತ ವಿದ್ವಾಂಸರು ದೇವರು ಹಾಗೂ ಭಕ್ತರ ನಡುವಿನ ಬಾಂಧವ್ಯವನ್ನು ದೂರಮಾಡಿ ನೆಮ್ಮದಿ ದೊರಕಿಸಿಕೊಟ್ಟರು ಎಂದು ವೈದ್ಯ ಸಿ.ಬಿ. ಮೋಹನ್ ತಿಳಿಸಿದರು. ಸಂಗೀತ ಗಾನ ನಿಧಿ ಡಾ. ವಿದ್ಯಾಭೂಷಣ್ ಸಂಗೀತ ಕಚೇರಿಗೆ ಚಾಲನೆ ನೀಡಿ ಮಾತನಾಡಿ, ವೇದಗಳ ಕಾಲದಿಂದಲೂ ಸಂಗೀತ ಶಾಸ್ತ್ರ, ನಾಟ್ಯ ಶಾಸ್ತ್ರದ ಅಧ್ಯಯನ ಮತ್ತು ಹಾಡುಗಾರಿಕೆ ನಿರಂತರ ನಡೆದುಕೊಂಡು ಬಂದಿದೆ. ಇಂದಿನ ಪೀಳಿಗೆಯವರು ಸನಾತನ ಧರ್ಮದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅರಿತು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಶ್ರೀ ರಾಮ ಸೇವಾ ಸಮಿತಿಯವರು ಖ್ಯಾತ ನಾಮರನ್ನು ವೇದಿಕೆಗೆ ಕರೆಸಿ ವಿಶಿಷ್ಠ ರೀತಿಯ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ ಎಂದರು. ಡಾ.ವಿದ್ಯಾಭೂಷಣ್ ಧ್ಯಾನ ಶ್ಲೋಕದ ನಂತರ ಹಂಸಧ್ವನಿ ರಾಗದಲ್ಲಿ ನಮ್ಮಮ್ಮ ಶಾರದೆ ಕೀರ್ತನೆಯನ್ನು ಆಲಾಪನೆ ಸಹಿತ ಹಾಡಿದ ವಿದ್ವತ್ ಪ್ರದರ್ಶನಕ್ಕೆ ಶ್ರೋತೃಗಳು ಪುನೀತರಾದರು. ಸಮಿತಿ ಅಧ್ಯಕ್ಷ ಪ್ರಕಾಶ್ ರೆಡ್ಡಿ, ಪೃಥ್ವಿರಾಜ್, ಲಕ್ಷ್ಮೀಕಾಂತರಾಜು ಇದ್ದರು.
ಮುರುಳಿ ಪದವಿ ಪೂರ್ವ ಕಾಲೇಜು ಜಿಲ್ಲೆಗೆ ಪ್ರಥಮ
ನೆಲಮಂಗಲ: ಪಟ್ಟಣದ ಮುರುಳಿ ಪದವಿ ಪೂರ್ವ ಕಾಲೇಜು ಶೇ.86 ಫಲಿತಾಂಶ ಪಡೆದು ಪ್ರಥಮ ಸ್ಥಾನ ಗಳಿಸಿದೆ. ಪರೀಕ್ಷೆ ಬರೆದಿದ್ದ ಕಾಲೇಜಿನ ಒಟ್ಟು 99 ವಿದ್ಯಾರ್ಥಿಗಳ ಪೈಕಿ 85 ವಿದ್ಯಾರ್ಥಿಗಳು ಉತ್ತೀರ್ಣ ಅತ್ಯುನ್ನತ ಶ್ರೇಣಿಯಲ್ಲಿ 6, ಪ್ರಥಮ ಶ್ರೇಣಿಯಲ್ಲಿ 43, ದ್ವಿತೀಯ ಶ್ರೇಣಿಯಲ್ಲಿ 21, ತೃತೀಯ 15 ವಿದ್ಯಾರ್ಥಿಗಳು ಉತ್ತೀರ್ಣ. ಕಲಾ ವಿಭಾಗದಲ್ಲಿ ಶೇ.78, ವಾಣಿಜ್ಯ ವಿಭಾಗದಲ್ಲಿ 67 ವಿದ್ಯಾರ್ಥಿಗಳ ಪೈಕಿ 60 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 90 ಫಲಿತಾಂಶ ಬಂದಿದೆ.
ಅತ್ಯುನ್ನತ ಶ್ರೇಣಿ ಫಲಿತಾಂಶ ಪಡೆದವರು: ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಶಿಲ್ಪಾ.ಟಿ.ಎಂ. 555 ಅಂಕ ಶೇ.92.50, ಸೌಮ್ಯ.ಆರ್ 540 ಅಂಕ ಶೇ.90, ಮೋಹನ್.ಎಂ.ಜೆ 533 ಅಂಕ ಶೇ.88.8, ಚೈತ್ರ.ಟಿ.ಎಚ್ 529 ಅಂಕ ಶೇ.88.16, ಕೆಂಪರಾಜು 513 ಅಂಕ ಶೇ.85.5, ಅನುಶ್ರೀ 511 ಅಂಕ ಶೇ.85.16 ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮನುಷ್ಯತ್ವದ ಕಡೆ ಪ್ರಯಾಣ ಮಾಡಿದವರು ಬುದ್ಧ
ಮಾಗಡಿ: ಪ್ರಭುತ್ವದಿಂದ ಮನುಷ್ಯತ್ವದ ಕಡೆ ಪ್ರಯಾಣ ಮಾಡಿದವರು ಬುದ್ಧ. ಇಂತಹದ್ದೆ ಬದುಕನ್ನು ನಡೆಸಿದವರು ಮಹಾತ್ಮ ಗಾಂಧಿ ಎಂದು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನಾಗಣ್ಣ ತಿಳಿಸಿದರು. ತಿಪ್ಪಸಂದ್ರ ಹೋಬಳಿ ಬಗಿನೆಗೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕವಿಗೋಷ್ಠಿ ಮತ್ತು ಚಿಂತನಾ ಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ದೊಡ್ಡ ಮೌಲಿಕ ಕ್ರಾಂತಿಯಾಗಿದ್ದು, ವಚನ ಚಳುವಳಿಯಲ್ಲಿ ಸಾಹಿತ್ಯದ ಎಲ್ಲಾ ಪ್ರಯೋಗಗಳ ಕಾಲಘಟ್ಟವಾಗಿದೆ ಎಂದರು. ಲೇಖಕಿ ವಿಜಯನಾಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಚೌಡಿಬೇಗೂರು ಗುರುಪ್ರಸಾದ್ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಂ. ದಯಾನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಸಂಚಾಲಕ ಪದ್ಮನಾಭ, ನಾಜೀರಾಬೇಗಂ, ಕುಮಾರಸ್ವಾಮಿ, ಶಾಂತಕುಮಾರ್ ಮಾತನಾಡಿದರು. ವಿವಿಧ ಮೂಲೆಗಳಿಂದ ಆಗಮಿಸಿದ ಕವಿಗಳು ಕವನಗಳನ್ನು ಓದುವ ಮೂಲಕ ಜನಮನ ಸೆಳೆದರು.
ಪ್ರತಿಭಟನೆ...
ನವಯುಗ ಸಂಸ್ಥೆಯವರು ಟೋಲ್ ದರವನ್ನು ನಾಲ್ಕು ಪಟ್ಟು ಹೆಚ್ಚಿಸಿ ಏಳು ದಿನ ಕಳೆದರೂ ಪ್ರತಿಭಟನೆ ಮುಂದುವರೆದಿದ್ದು, ಶನಿವಾರ ದೇವನಹಳ್ಳಿ ತಾಲೂಕು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಲಯನ್ಸ್ ನೇತೃತ್ವದಲ್ಲಿ ಕಣ್ಣಿನ ಚಿಕಿತ್ಸಾ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 195ನೇ ಉಚಿತ ಕಣ್ಣಿನ ಪರೀಕ್ಷೆ ಮತ್ತು ತಪಾಸಣೆ ಶಿಬಿರ ಲಯನ್ಸ್ ಭವನದಲ್ಲಿ ನಡೆಯಿತು. ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್. ಶಂಕರಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಣ್ಣಿನ ಚಿಕಿತ್ಸಾ ವಿಚಾರದಲ್ಲಿ ಲಯನ್ಸ್ ಕ್ಲಬ್ ಸಾಧನೆ ಗಣನೀಯ ಎಂದರು. ಶಿಬಿರವನ್ನು ಲಯನ್ ಜಿ. ಬಾಲರಾಜು ಮತ್ತು ಕುಟುಂಬ, ಎ. ವೆಂಕಟೇಶ್ ಪ್ರಾಯೋಜಿಸಿದ್ದರು. ಶಿಬಿರದಲ್ಲಿ ಒಟ್ಟು 59 ಮಂದಿ ರೋಗಿಗಳಿಗೆ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ನಡೆಸಿ ಐಒಎಲ್ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಲಯನ್ಸ್ ಅಧ್ಯಕ್ಷ ಆರ್.ವಿ. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.
ಬಮೂಲ್ ಚುನಾವಣೆ: ಅಪ್ಪಯ್ಯಣ್ಣ ಜೆಡಿಎಸ್ ಅಭ್ಯರ್ಥಿ
ದೊಡ್ಡಬಳ್ಳಾಪುರ: ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಮೇ 25ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಚ್. ಅಪ್ಪಯ್ಯಣ್ಣ ಸ್ಪರ್ಧಿಸಲಿದ್ದಾರೆ. ಈ ಕುರಿತು ಪಕ್ಷ ಒಮ್ಮತದ ನಿರ್ಧಾರ ಕೈಗೊಂಡಿದೆ ಎಂದು ಪಕ್ಷದ ತಾ. ಅಧ್ಯಕ್ಷ ಆರ್. ಗೋವಿಂದರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಧುರೆ ಹೋಬಳಿಯ ಗಂಗೇಗೌಡ, ಬೆಳವಂಗಲ ಹೋಬಳಿಯ ಚನ್ನೇಗೌಡ, ಕಸಬಾ ಹೋಬಳಿಯ ಸುಬ್ಬರಾಯಪ್ಪ ಮತ್ತು ಚಂದ್ರಪ್ಪ ಈ ಬಾರಿ ಆಕಾಂಕ್ಷಿಗಳಾಗಿದ್ದರು. ಪಕ್ಷದ ಸಭೆಯಲ್ಲಿ ಈ ನಾಲ್ವರೂ ಅಪ್ಪಯ್ಯಣ್ಣ ಸ್ಪರ್ಧೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು. ನಿಯೋಜಿತ ಅಭ್ಯರ್ಥಿ ಅಪ್ಪಯ್ಯಣ್ಣ, ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಜೆಡಿಎಸ್ ಖಜಾಂಚಿ ಬಿ. ಮುನೇಗೌಡ, ವೆಂಕಟೇಶ್ ಬಾಬು, ತ.ನ. ಪ್ರಭುದೇವ್, ಎ. ನರಸಿಂಹಯ್ಯ, ಅಶ್ವತ್ಥನಾರಾಯಣಕುಮಾರ್, ಶಿವಕುಮಾರ್ ಇದ್ದರು.
ವಡ್ಡರಹಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ
ದೊಡ್ಡಬಳ್ಳಾಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷಗಳಾದರೂ ಅಸ್ಪೃಶ್ಯತೆ ಜೀವಂತವಿರುವುದು ದುರಂತ ಎಂದು ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ ಹೇಳಿದರು. ತಾಲೂಕಿನ ವಡ್ಡರಹಳ್ಳಿ ದಲಿತ ಸಂಘರ್ಷ ಸಮಿತಿ(ಸಂಯೋಜಕ) ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ದಲಿತರು ಶಿಕ್ಷಣದಿಂದ ವಂಚಿತರಾಗಬಾರದು. ದೇಶದಲ್ಲಿ ಬಡತನ ನಿರ್ಮೂಲನೆ ಆದಾಗ ಮಾತ್ರ ಅಭಿವೃದ್ಧಿ ಸಾದ್ಯ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ಕೊಂಗಾಡಿಯಪ್ಪ ಕಾಲೇಜು ಪ್ರಾಧ್ಯಾಪಕ ಪ್ರೊ. ರಂಗಸ್ವಾಮಿ ಬೆಳಕವಾಡಿ ಮಾತನಾಡಿ, ಅಂಬೇಡ್ಕರ್ ರಚಿಸಿಕೊಟ್ಟಿರುವ ಸಂವಿಧಾನ ವಿಶ್ವ ಶ್ರೇಷ್ಠವಾದದ್ದು ಎಂದರು. ಪ್ರಾಧ್ಯಾಪಕ ಪ್ರೊ. ಚಂದ್ರಪ್ಪ, ಅಂಬೇಡ್ಕರ್ ಬೆಳೆದು ಬಂದ ರೀತಿಯ ಕುರಿತು ವಿವರಿಸಿದರು. ಮಜರಾಹೊಸಹಳ್ಳಿ ಗ್ರಾಪಂ ಅಧ್ಯಕ್ಷ ರಾಮದಾಸ್, ಜಯಲಕ್ಷ್ಮಮ್ಮ, ಶ್ರೀನಿವಾಸ್, ಕೆಂಪಣ್ಣ, ನಾರಾಯಣಪ್ಪ, ನಾಗರಾಜು, ಆನಂದ್, ಕಾಂತರಾಜು ಇದ್ದರು.
ಪಿಯುಸಿಯಲ್ಲಿ ಯೋಗೀಶ್, ದೀಪಕ್ ಉತ್ತಮ ಸಾಧನೆ
ದೊಡ್ಡಬಳ್ಳಾಪುರ: ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ದೊಡ್ಡಬಳ್ಳಾಪುರದ ವಿದ್ಯಾರ್ಥಿ ಎಸ್. ಯೋಗೀಶ್ 600ಕ್ಕೆ 576 ಅಂಕ ಗಳಿಸುವ ಮೂಲಕ ಶೇ.96 ಫಲಿತಾಂಶದ ಸಾಧನೆ ಮಾಡಿದ್ದಾನೆ. ಭೌತಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದಿರುವ ಈತ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ತಲಾ 99 ಅಂಕ ಪಡೆದಿದ್ದಾನೆ.
ದೀಪಕ್ಗೆ ಶೇ.95: ಅಳಿಕೆಯ ಶ್ರೀಸತ್ಯ ಸಾಯಿ ಪಿಯು ಕಾಲೇಜಿನ ವಾಣಿಜ್ಯ ವ್ಯಾಸಂಗ ಮಾಡಿದ ದೊಡ್ಡಬಳ್ಳಾಪುರದ ವಿದ್ಯಾರ್ಥಿ ಎ.ಆರ್. ದೀಪಕ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 574 ಅಂಕ ಪಡೆಯುವ ಮೂಲಕ ಶೇ.95.67 ಫಲಿತಾಂಶದ ಸಾಧನೆ ಮಾಡಿದ್ದಾನೆ. ಲೆಕ್ಕಶಾಸ್ತ್ರದಲ್ಲಿ 100ಕ್ಕೆ 100 ಮತ್ತು ವ್ಯವಹಾರ ಅಧ್ಯಯನದಲ್ಲಿ 99 ಅಂಕ ಪಡೆದಿದ್ದಾನೆ.
ಬೆ.ಗ್ರಾಮಾಂತರ ಜಿಲ್ಲೆಗೆ ಉತ್ತಮ ಫಲಿತಾಂಶ
ಹೊಸಕೋಟೆ: ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿಗಳು ಎಸ್. ಸಂಧ್ಯಾ 575 (ಶೇ.95.83), ಎನ್. ಚೇತನಾ 569 (ಶೇ.94.83), ಎನ್. ಅರ್ಚನಾ 565(ಶೇ.94.17), ಶಾಂಭವಿ 558 (ಶೇ.93), ಜಿ. ವಿದ್ಯಾಶ್ರೀ 556 (ಶೇ.92.67), ವಿ. ಭೂಷಣ್ 553(ಶೇ.9217), ಸೈಯದ್ ಇಮ್ರಾನ್ 552 (ಶೇ.92), ವಿ. ಭವ್ಯಾ 551 (ಶೇ.91.83).ಪಟ್ಟಣದ ಸರಕಾರಿ ಸ್ವತಮತ್ರ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ, ಕಲೆ, ವಿಜ್ಞಾನ ವಿಷಯಗಳಲ್ಲಿ ಶೇ.77.37ರಷ್ಟು ಫಲಿತಾಂಶ ಪಡೆದಿದೆ.
ದೇವಲಾಪುರ: ತಾಲೂಕಿನ ದೇವಲಾಪುರ ಸಂಯುಕ್ತ ಪದವಿಪೂರ್ವ ಕಾಲೇನಲ್ಲಿ ಕಲೆ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 43ರಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.86.04ರಷ್ಟು ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ ನಾಗಜ್ಯೋತಿ 545 (ಶೇ.90.83), ಎನ್. ಚಾರುಲತಾ 545 (ಶೇ.90.33), ಡಿ.ಎನ್. ಪವನ್ ಕುಮಾರ್ 538 (ಶೇ.89.66) ಹೆಚ್ಚಿನ ಅಂಕ ಗಳಿಸಿದ್ದಾರೆ.
ಗ್ರಾಮಾಂತರ ಪಪೂ ಕಾಲೇಜಿಗೆ ಶೇ.59 ಫಲಿತಾಂಶ
ಕನಕಪುರ: ಕನಕಪುರದ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯುಸಿಯಲ್ಲಿ 37 ಉನ್ನತಶ್ರೇಣಿ, 335 ಪ್ರಥಮದರ್ಜೆ, 162 ದ್ವಿತೀಯದರ್ಜೆ ಹಾಗೂ 83 ಮಂದಿ ತೃತೀಯದರ್ಜೆಯಲ್ಲಿ ತೇರ್ಗಡೆಹೊಂದಿ ಒಟ್ಟಾರೆ ಶೇ.59 ಫಲಿತಾಂಶ ದಾಖಲಿಸಿದ್ದಾರೆ. ಉನ್ನತಶ್ರೇಣಿಯಲ್ಲಿ ತೇರ್ಗಡೆಹೊಂದಿರುವ ವಿದ್ಯಾರ್ಥಿಗಳು - ಶರತ್ ಕುಮಾರ್ ಶೇ.95.33 ವಿಜ್ಞಾನ, ಸ್ವಾತಿ ಜೋಸೆಫೀನ್ ಶೇ.92.33 ವಾಣಿಜ್ಯ, ಸಿ.ಎಸ್. ಶಶಿಕಲಾ ಶೇ.92.17 ವಾಣಿಜ್ಯ, ಕಿರಣ್ ಕೆ.ಆರ್. ಶೇ.91.83 ವಿಜ್ಞಾನ, ಪೂಜಾ ಶೇ.91.83 ವಿಜ್ಞಾನ, ಸೀಮಾ ಎ.ಎನ್. ಶೇ.91.50 ವಿಜ್ಞಾನ, ಸ್ವರೂಪ್ ಎನ್. ಶೇ.91.67 ವಿಜ್ಞಾನ, ಬಿ.ಎಸ್. ವಿಜಯಕುಮಾರ್ ಶೇ.91.50 ವಿಜ್ಞಾನ, ಮುಸ್ಕಾನ್ ಫಾತಿಮಾ ಶೇ.90 ವಿಜ್ಞಾನ, ಮೋಹನಕುಮಾರ್ ಕೆ.ಪಿ. ಶೇ.89.83 ವಾಣಿಜ್ಯ, ಜಿ. ಅಶ್ವಿನಿ ಶೇ.89.83 ವಾಣಿಜ್ಯ, ಕಾವ್ಯಶ್ರೀ ವಿ.ಕೆ. ಶೇ.89.17 ವಿಜ್ಞಾನ, ಕಾವ್ಯಶ್ರೀ ಎಂ. ಶೇ.89.17 ವಿಜ್ಞಾನ, ವಿನಯಕುಮಾರ್ ಸಿ.ವಿ. ಶೇ.89 ವಿಜ್ಞಾನ. ಅನುತಾ ಎಚ್.ಪಿ. ಶೇ.88.67, ವಾಣಿಜ್ಯ, ನೇತ್ರಾ ಕೆ. ಶೇ.88.67, ವಾಣಿಜ್ಯ, ಮುತ್ತರಾಜೇಗೌಡ ಶೇ.88.67, ವಾಣಿಜ್ಯ, ರಮ್ಯಶ್ರೀ ಸಿ.ವಿ. ಶೇ.87.83 ಪಡೆದಿದ್ದಾರೆ.
ಉದ್ಘಾಟನೆ...
ಮಾಗಡಿ ತಾಲೂಕಿನ ಬಗಿನೆಗೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿಯನ್ನು ಲೇಖಕಿ ವಿಜಯನಾಗೇಶ್ ಉದ್ಘಾಟಿಸಿದರು.
ಟೋಲ್: ಮುಂದುವರಿದ ಪ್ರತಿಭಟನೆ
ದೇವನಹಳ್ಳಿ: ನವಯುಗ ಸಂಸ್ಥೆಯವರು ಟೋಲ್ ದರವನ್ನು ನಾಲ್ಕು ಪಟ್ಟು ಹೆಚ್ಚಿಸಿ ಏಳು ದಿನ ಕಳೆದರೂ ಪ್ರತಿಭಟನೆ ಮುಂದುವರೆದಿದ್ದು, ಶನಿವಾರ ದೇವನಹಳ್ಳಿ ತಾಲೂಕು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂಧರ್ಭದಲ್ಲಿ ವೇದಿಕೆ ಅಧ್ಯಕ್ಷ ಟಿ. ರವಿ ಮಾತನಾಡಿ, ನವಯುಗ ಸಂಸ್ಥೆಯವರು ನಿರ್ಮಿಸಿರುವ ಎಲಿವೇಟೆಡ್ ರಸ್ತೆ ಅಗತ್ಯವಿಲ್ಲ. ಸರ್ವೀಸ್ ರಸ್ತೆ ಬಿಟ್ಟುಕೊಡಿ ಎಂದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದರು. ಈ ಸಂಧರ್ಭದಲ್ಲಿ ಬ್ಯಾಟರಾಯನಪುರ ಘಟಕದ ಅಧ್ಯಕ್ಷ ಮುನಿರಾಜು, ಯಲಹಂಕ ಘಟಕದ ಅಧ್ಯಕ್ಷ ನವೀನ್, ಬೆಂ.ಗ್ರಾ. ಜಿಲ್ಲಾ ಸಂಚಾಲಕ ಸಿ. ನಾಗೇಶ್ ಹಾಗೂ ತಾಲೂಕು ಉಪಾಧ್ಯಕ್ಷ ಆರ್. ಚೇತನ್ ಮಾತನಾಡಿ, ಹೆಚ್ಚಿಸಿರುವ ಟೋಲ್ ಶುಲ್ಕ ಕೂಡಲೇ ನಿಲ್ಲಿಸಬೇಕು ಎಂದರು.
ರೋಟರಿ ಸಂಸ್ಥೆಯಿಂದ ಕೌಟುಂಬಿಕ ಸಮಾವೇಶ
ಕನಕಪುರ: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಕೌಟುಂಬಿಕ ಸಮಾವೇಶ ರೋಟರಿ ಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸಿ. ವಿಜಯ್ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ರೋಟರಿ ಕುಟುಂಬದ ಸದಸ್ಯರ ಮನರಂಜನೆಗಾಗಿ ಮುಂಬಯಿಯ ಜಾದೂಗಾರ ವಿಕ್ಕಿಕುಮಾರ್ ಸಂಗಡಿಗರಿಂದ ಜಾದೂ ಪ್ರದರ್ಶನ ನಡೆಯಿತು. ಸಂಘದ ಸದಸ್ಯರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗೀತಗಾಯನಗಳು ನಡೆದವು. ಕಾರ್ಯದರ್ಶಿ ಮುರಡಿ ಗಿರೀಶ್, ನಿಯೋಜಿತ ಜಿಲ್ಲಾಸಹಪಾಲಕ ಭಾನುಪ್ರಕಾಶ್, ನಿಯೋಜಿತ ಅಧ್ಯಕ್ಷ ತಿಮ್ಮೇಗೌಡ ಪಾಲ್ಗೊಂಡಿದ್ದರು. ಸಿ.ಜೆ. ವಿಜಯ್ ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು. ಮಾಜಿ ಅಧ್ಯಕ್ಷ ದೇವರಾಜೇಅರಸ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ಚಂದ್ರಪ್ರಭಾ ವಂದಿಸಿದರು.
ರಾಮನಗರದಲ್ಲಿ ವಾಸವಿ ಜಯಂತಿ
ರಾಮನಗರ: ನಗರದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇಗುಲದಲ್ಲಿ ವಾಸವಿ ಜಯಂತಿಯನ್ನು ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಶುಕ್ರವಾರ ನೆರವೇರಿಸಿದರು. ಆರ್ಯ ವೈಶ್ಯ ಸಭಾದವತಿಯಿಂದ ನಾಲ್ಕು ದಿನಗಳಿಂದ ನಿತ್ಯ ಪೂಜೆ ಮತ್ತು ಧಾರ್ಮಿಕ ಕೈಂಕರ್ಯಗಳು ನಡೆದವು. ಜಯಂತಿಯಂದು ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಮೂರ್ತಿಗೆ ಹಾಲಿನ ಅಭಿಷೇಕ, ಹೋಮ ನೆರವೇರಿಸಲಾಯಿತು. ಹೂವಿನಿಂದ ಅಲಂಕೃತವಾಗಿದ್ದ ವಾಸವಿ ಮೂರ್ತಿಯ ಮುತ್ತಿನ ಪಲ್ಲಕ್ಕಿ ಉತ್ಸವ ಸಂಜೆ ನಡೆಯಿತು. ವಾದ್ಯಮೇಳದೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರೂ ಸೇರಿದಂತೆ ಆರ್ಯ ವೈಶ್ಯ ಜನಾಂಗದವರು ಪಾಲ್ಗೊಂಡಿದ್ದರು. ಜಯಂತಿಯ ಆಚರಣೆಯಲ್ಲಿ ಆರ್ಯ ವೈಶ್ಯ ಸಭಾ, ಶ್ರೀ ವಾಸವಿ ಯೂತ್ ಫೊರಂ ಮತ್ತು ವಾಸವಿ ಮಹಿಳಾ ಮಂಡಳಿಗಳ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಏಜೆಂಟ್ ಪಾಸುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ರಾಮನಗರ: ಲೋಕಸಭೆ ಚುನಾವಣೆ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಪ್ರಮುಖ ಪಕ್ಷಗಳ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿಗಳಿಗೆ ದುಂಬಾಲು ಬಿದ್ದಿದ್ದು, ಪಾಸುಗಳಿಗೆ ಸಾಕಷ್ಟು ಡಿಮ್ಯಾಂಡ್ ಬಂದಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರಾದರೂ ಪ್ರಬಲ ಪೈಪೋಟಿ ಇರುವುದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆಯೇ. ಬಿಎಸ್ಪಿ, ಆಪ್ ಹೊರತಾಗಿ ಉಳಿದ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಏಜೆಂಟರ ಕೊರತೆ ಎದ್ದು ಕಾಣುತ್ತಿದೆ. ಈ ಅಭ್ಯರ್ಥಿಗಳ ಬಳಿ ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಣಿಕೆ ಏಜೆಂಟ್ ಪಾಸುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲೂ ಹೀಗೆಯೇ ಡಮ್ಮಿ ಅಭ್ಯರ್ಥಿಗಳ ಪಾಸುಗಳು ಪ್ರಮುಖ ಪಕ್ಷಗಳ ಕಾರ್ಯಕರ್ತರ ಪಾಲಾಗಿದ್ದವು. ಚುನಾವಣಾ ಪ್ರಚಾರಕ್ಕೆ ವಾಹನಗಳ ಬಳಕೆ, ಮತಗಟ್ಟೆ ಮತ್ತು ಎಣಿಕೆ ಕೇಂದ್ರದ ಏಜೆಂಟಟ್ಪಾಸ್ ಸೌಲಭ್ಯ ಸಹಿತ ನಾನಾ ರೀತಿ ಅನುಕೂಲಕ್ಕಾಗಿ ಪ್ರಮುಖ ಪಕ್ಷಗಳೇ ಡಮ್ಮಿ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸುತ್ತವೆ. ಈ ಬಾರಿ ಪಕ್ಷೇತರರ ಹೆಸರಲ್ಲಿ ಸಾಕಷ್ಟು ದುರ್ಬಳಕೆ ನಡೆದಿದ್ದು, 1 ಪ್ರಕರಣವಷ್ಟೇ ದಾಖಲಾಗಿದೆ.
ವೆಬ್ಸೈಟ್ನಲ್ಲಿ ಸುಳ್ಳು ಮಾಹಿತಿ: ದಾವೆಯಲ್ಲಿ ತಿಮ್ಮಕ್ಕ ಆರೋಪ
ರಾಮನಗರ: ಅಮೆರಿಕದಲ್ಲಿರುವ ಅನಿವಾಸಿ ಭಾರತೀಯೆ ರೀತೂ ಫಿಮಿಲಾನಿ ಎಂಬುವರು ತಮ್ಮ ಹೆಸರಿನಲ್ಲಿ ವೆಬ್ಸೈಟ್ ಸೃಷ್ಟಿಸಿ, ಜನತೆಗೆ ತಪ್ಪು ಮಾಹಿತಿ ನೀಡಿ ದೇಣಿಗೆ ಸಂಗ್ರಹಿಸುತ್ತಿರುವುದನ್ನು ಸಾಲು ಮರದ ತಿಮ್ಮಕ್ಕ ಅವರು ರಾಮನಗರ ನ್ಯಾಯಾಲಯದಲ್ಲಿ ಹೂಡಿರುವ ದಾವೆಯಲ್ಲಿ ಪ್ರಶ್ನಿಸಿದ್ದಾರೆ. ಫಿಮಿಲಾನಿ ಗ್ರೀನ್ ರೆಸ್ಟೋರೆಂಟ್, ತಿಮ್ಮಕ್ಕ ಎನ್ವಿರಾನ್ಮೆಂಟ್ ಆಫ್ ಸ್ಕೂಲ್ ಸೇರಿದಂತೆ ಹಲವು ಚಟುವಟಿಕೆಗಳಢನ್ನು ಆರಂಭಿಸಿದ್ದು, ಬಡ ಮಕ್ಕಳಿಗೆ ತಿಮ್ಮಕ್ಕನ ಹೆಸರಲ್ಲಿ ಸಹಾಯ ಮಾಡುವುದಾಗಿ ಹಾಗು ಪರಿಸರ ಜಾಗೃತಿ ಮೂಡಿಸುತ್ತಿದ್ದೇವೆಂದು ಬ್ಲಾಗ್ನಲ್ಲಿ ಹೇಳಿಕೊಂಡಿದ್ದಾರೆ. ತಿಮ್ಮಕ್ಕ. ಒಆರ್ಜಿ (timmakka.org) ವೆಬ್ಸೈಟ್ನಲ್ಲಿ ತಿಮ್ಮಕ್ಕ ಅವರನ್ನು ಕೆಳ ಜಾತಿಯವರು, ಬಂಜೆ ಎಂದೆಲ್ಲಾ ತೇಜೋವಧೆಯನ್ನೂ ಮಾಡಲಾಗಿದೆ. ತನ್ನ ಶ್ರಮದ ಫಲವನ್ನು ಬೇರೆಯವರು ಅನುಭವಿಸುತ್ತಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಾವೆಯಲ್ಲಿ ಅವರು ಮನವಿ ಮಾಡಿದ್ದಾರೆ.
ಸೇಂಟ್ ಆನ್ಸ್ ಬಾಲಕಿಯರ ಕಾಲೇಜಿಗೆ ಶೇ.80 ಫಲಿತಾಂಶ
ಚನ್ನಪಟ್ಟಣ: ಪಟ್ಟಣದ ಅಪ್ಪಗೆರೆ ಸೇಂಟ್ ಆನ್ಸ್ ಬಾಲಕಿಯರ ಪದವಿಪೂರ್ವ ಕಾಲೇಜು ಶೇ.80 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾಗಿದ್ದ 96 ಮಂದಿ ವಿದ್ಯಾರ್ಥಿಗಳಲ್ಲಿ 11 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 31 ಮಂದಿ ಪ್ರಥಮ ಶ್ರೇಣಿಯಲ್ಲಿ, 10 ಮಂದಿ ದ್ವಿತೀಯ ಶ್ರೇಣಿಯಲ್ಲಿ, 5 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಎಂ.ಜಿ. ವರ್ಷಿಣಿ ವಾಣಿಜ್ಯ ವಿಭಾಗದಲ್ಲಿ ಶೇ.97.16 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಈಕೆ ಕನ್ನಡದಲ್ಲಿ 98 ಅಂಕ ಪಡೆದು ಕನ್ನಡ ವಿಷಯದಲ್ಲಿ ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ ಸಾಧನೆ ಮಾಡಿದ್ದಾಳೆ. ವ್ಯವಹಾರ ಅಧ್ಯಯನದಲ್ಲಿ 100, ಗಣಕ ವಿಜ್ಞಾನದಲ್ಲಿ 99 ಅಂಕ ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ವಿ.ಎಸ್. ಕವನ ಶೇ.95.33 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ಈಕೆ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ. ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ಎಸ್. ಭಾವನಾ (ಶೇ.94.17), ಮಾನಸ ಭಾರದ್ವಾಜ್ ಶೇ.92.66), ಬಿ. ಹರ್ಷಿತಾ (ಶೇ.92.16) ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರು.
ಸನ್ಮಾನ...
ಕನಕಪುರದ ಡಾ. ರಾಜ್ ಅಭಿಮಾನಿ ಬಳಗದ ವತಿಯಿಂದ ಜಾನಪದ ಗಾಯಕ, ಕಲಾವಿದ ಚಂದ್ರಾಜರನ್ನು ನ್ಯಾಯವಾದಿ ದೇವದಾಸ್, ಸ್ಟುಡಿಯೋ ಚಂದ್ರು ಸನ್ಮಾನಿಸಿದರು.
ರಾಮಾಪ್ರಮೇಯ ಸ್ವಾಮಿ ರಥೋತ್ಸವ ಇಂದು
ಚನ್ನಪಟ್ಟಣ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮಳೂರು ಶ್ರೀರಾಮಾಪ್ರಮೇಯ ಸ್ವಾಮಿ ದೇವರ ಬ್ರಹ್ಮರಥೋತ್ಸವ ಮೇ 11ರ ಬೆಳಿಗ್ಗೆ 11 ಗಂಟೆಗೆ ನೆರವೇರಲಿದೆ. ರಥೋತ್ಸವಕ್ಕೆ ಶಾಸಕ ಸಿ.ಪಿ. ಯೋಗೇಶ್ವರ್ ಚಾಲನೆ ನೀಡಲಿದ್ದು, ತಹಸೀಲ್ದಾರ್ ಅರುಣ ಪ್ರಭಾ ಸೇರಿದಂತೆ ಸಾಕಷ್ಟು ಗಣ್ಯ ಭಕ್ತರು ಪಾಲ್ಗೊಳ್ಳಲಿದ್ದಾರೆ. ರಾಮನಗರ, ಮಂಡ್ಯ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ವಿವಿಧೆಡೆಯಿಂದ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಟೋ ಚಾಲಕನ ಮಗ ಜಿಲ್ಲೆಗೆ ತೃತೀಯ
ಚನ್ನಪಟ್ಟಣ: ವಾಸಕ್ಕೆ ಸ್ವಂತ ಮನೆ ಇಲ್ಲ, ಅಜ್ಜಿಮನೆಯಲ್ಲಿ ವಾಸ್ತವ್ಯ ಹೂಡಿ ಕಿತ್ತು ತಿನ್ನುವ ಬಡತನದ ನಡುವೆಯೂ ಓದಿನಲ್ಲಿ ಶ್ರದ್ಧೆ ಕಳೆದುಕೊಳ್ಳದ ಆಟೋ ಚಾಲಕನ ಮಗ ಇದೀಗ ಜಿಲ್ಲೆಗೆ ಮೂರನೆ ಸ್ಥಾನ ಪಡೆದಿದ್ದಾನೆ.
ಪಟ್ಟಣದ ಸರ್ಕಾರಿ ಬಾಲಕರ ಕಾಲೇಜಿನ ವಿದ್ಯಾರ್ಥಿ ಸಾಗರ್ ಕಲಾವಿಭಾಗದಲ್ಲಿ ಶೇ.87 ರಷ್ಟು ಅಂಕಪಡೆಯುವ ಮೂಲಕ ಜಿಲ್ಲೆಗೆ ಮೂರನೆ ಸ್ಥಾನ ಪಡೆದಿದ್ದಾನೆ. ತಾಲೂಕಿನ ತಗಚಗೆರೆ ಗ್ರಾಮದ ಆನಂದ್ ಮತ್ತು ವಸಂತ ದಂಪತಿಗಳ ಮಗನಾಗಿರುವ ಈತ ಉತ್ತಮ ಸಾಧನೆ ಮಾಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

