ಬೆಂಗಳೂರು ಗ್ರಾಮಾಂತರ

ಗ್ರಾಪಂ ಅಧ್ಯಕ್ಷರ ಬದಲಾವಣೆ ಹಿಂದೆ ಡೀಲ್?

Published On :

ಕ.ಪ್ರ.ವಾರ್ತೆ ರಾಮನಗರ  ಮೇ 25
ವಾರ್ಷಿಕ ರು.3 ಕೋಟಿಗೂ ಅಧಿಕ ಸ್ವಂತ ಸಂಪನ್ಮೂಲದೊಂದಿಗೆ ರಾಜ್ಯದ ಕೆಲವೇ ಶ್ರೀಮಂತ ಗ್ರಾ.ಪಂ.ಗಳಲ್ಲಿ ಒಂದಾಗಿರುವ ಮಂಚನಾಯಕನಹಳ್ಳಿ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನದ ಬದಲಾವಣೆ ಹಿಂದೆ ದೊಡ್ಡ ಮಟ್ಟದ ಡೀಲ್ ಕುದುರಿರುವ ಗುಮಾನಿ ಸದಸ್ಯರನ್ನು ಕಾಡಲಾರಂಭಿಸಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ  ಕಟ್ಟಾ ಬೆಂಬಲಿಗರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಿ, ಪರೋಕ್ಷವಾಗಿ ಅಧಿಕಾರವನ್ನು ಮುಷ್ಟಿಯಲ್ಲಿಟ್ಟುಕೊಳ್ಳಲು ಚಿತಾವಣೆ ನಡೆಸಿದ್ದಾರೆ ಎನ್ನುವ ಆರೋಪ ಸ್ವಪಕ್ಷೀಯ ಚುನಾಯಿತ ಪ್ರತಿನಿಧಿಗಳಿಂದಲೇ ಕೇಳಿ ಬರುತ್ತಿದೆ.  ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಚಾಚಿಕೊಂಡ ಮಂಚನಾಯಕನಹಳ್ಳಿ ಗ್ರಾ.ಪಂ.ನಲ್ಲಿ ಹೇರಳ ಸಂಪನ್ಮೂಲ, ಅನುದಾನವಿದೆ. ಪಟ್ಟಣ ಪಂಚಾಯಿತಿಗಳಿಗಿಂತ ಪ್ರಭಾವಿಯಾಗಿರುವ ಈ ಗ್ರಾ.ಪಂ.ನಲ್ಲಿ ಇನ್ನುಳಿದ 10 ತಿಂಗಳ ಅಧ್ಯಕ್ಷ ಅಧಿಕಾರದ ವಿಷಯವಾಗಿ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ.
ಶುರುವಾಗಿದ್ದು ಹೀಗೆ... ಗ್ರಾ.ಪಂ.ನ ಮೊದಲ 30 ತಿಂಗಳ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿತ್ತು. ಶ್ರುತಿ ಸಂಪತ್‌ಕುಮಾರ್ ಪೂರ್ಣಾವಧಿ ಅಧಿಕಾರ ನಡೆಸಿದರು. ನಂತರದ 30 ತಿಂಗಳಿಗೆ ಪರಿಶಿಷ್ಟ ಜಾತಿಗೆ ಸ್ಥಾನ ಮೀಸಲಾದಾಗ ಮುಸುಕಿನ ಗುದ್ದಾಟ ಪ್ರಾರಂಭವಾಯಿತು.
27 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ 15, ಜೆಡಿಎಸ್ ಬೆಂಬಲಿತ 11 ಮತ್ತು ಯಾವ ಪಕ್ಷದ ಜತೆಗೂ ಗುರ್ತಿಸಿಕೊಳ್ಳದ ಪಕ್ಷೇತರ ಸದಸ್ಯರೊಬ್ಬರಿದ್ದಾರೆ. ಎರಡನೇ 30 ತಿಂಗಳ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಹನುಮಂತಯ್ಯ ದಿಢೀರ್ ರಾಜಿನಾಮೆ ಭಿನ್ನಮತಕ್ಕೆ ಎಡೆಮಾಡಿದೆ.
ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದಾಗ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ  ಬೆಂಬಲಿಗ ವೆಂಕಟಾಚಲಪತಿ ಅವರನ್ನು ಹುದ್ದೆಗೆ ಪ್ರತಿಷ್ಠಾಪಿಸಲು ಹೊರಟಿದ್ದರು. ಸ್ವಪಕ್ಷೀಯ ಬಹುಸಂಖ್ಯಾತ ಸದಸ್ಯರು ಪಟ್ಟು ಹಿಡಿದು ಹನುಮಂತಯ್ಯಗೆ ಪಟ್ಟ ಕಟ್ಟಿದ್ದರು.
ಛಲ ಬಿಡದೆ ಹೋರಾಟ:: ಒಮ್ಮತದ ನಿರ್ಧಾರದ ಬದಲು ಯಾರೋ ಒಬ್ಬರ ಹಿತಾಸಕ್ತಿಗಾಗಿ ಹೀಗೊಂದು ಬದಲಾವಣೆಗೆ ವಿರೋಧಿಸಿರುವ ಕಾಂಗ್ರೆಸ್ ಬಹುಸಂಖ್ಯಾತ ಸದಸ್ಯರ ತಂಡ ಈಗ ಉಲ್ಟಾ ಹೊಡೆದಿದೆ.  ಹನುಮಂತಯ್ಯ ರಾಜಿನಾಮೆಯಿಂದ ತೆರವಾಗುವ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಗೈರಾಗುವ ಬೆದರಿಕೆ ಒಡ್ಡಿದೆ. ಕಾಂಗ್ರೆಸ್ ಒಳ ಜಗಳವನ್ನು ಗಮನಿಸುತ್ತಿರುವ ಜೆಡಿಎಸ್ ತಾನೂ ಒಂದು ಕೈ ನೋಡಿಯೇ ಬಿಡೋಣವೆನ್ನುವ ಧೋರಣೆ ತಳೆದಿದೆ. ಗೊಂದಲದ ಹಿನ್ನೆಲೆಯಲ್ಲಿ ಹನುಮಂತಯ್ಯ ಸಲ್ಲಿಸಿರುವ ರಾಜಿನಾಮೆ ಹಿಂಪಡೆಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ ಎನ್ನಲಾಗುತ್ತಿದೆ.
ಹೀಗೆ ಗ್ರಾ.ಪಂ.ನಲ್ಲಿ ಆದಾಯ ಹೆಚ್ಚಿರುವುದು ಮತ್ತು ಅಧ್ಯಕ್ಷ ಗಾದಿಯು ಪ್ರಭಾವಶಾಲಿ ಆಗಿರುವುದೇ ರಂಪಾಟಕ್ಕೆ ಕಾರಣವಾಗಿದೆ. ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿರುವ ಗ್ರಾ.ಪಂ.ನಲ್ಲಿ ಮುಸುಕಿನ ಗುದ್ದಾಟ ಅಂತ್ಯಕ್ಕೆ ಕಾಂಗ್ರೆಸ್ ವರಿಷ್ಠರ ಮಧ್ಯ ಪ್ರವೇಶ ಅನಿವಾರ್ಯವಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.