ಬೆಂಗಳೂರು ಗ್ರಾಮಾಂತರ

ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Published On :

ಕನಕಪುರ: ಕನಕಪುರದ ಪೇಟೆಕೆರೆ ಪ್ರದೇಶದಲ್ಲಿ ನ್ಯಾಯಾಲಯ ಮತ್ತು ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕಾಗಿ ನೀಡಿರುವ ನಾಲ್ಕು ಎಕರೆ ಸ್ಥಳ ಪರಿಶೀಲನೆ ಹಾಗೂ ಕಾಮಗಾರಿ ಪ್ರಗತಿ ಬಗ್ಗೆ ಅಪರ ಸಿವಿಲ್ ನ್ಯಾಯಾಧೀಶ
ಆನಂದಶೆಟ್ಟಿ ಹಾಗೂ ನ್ಯಾಯವಾದಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
 ನ್ಯಾಯಾಲಯ ಸಂಕೀರ್ಣ ಹಾಗೂ ವಸತಿನಿಲಯ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಇನ್ನೂ ಕಂದಾಯ ಇಲಾಖೆ ನ್ಯಾಯಾಲಯಕ್ಕೆ ಹಸ್ತಾಂತರಿಸಿಲ್ಲ ಎಂಬ ವಿಚಾರ ತಿಳಿದ ನ್ಯಾಯಾಧೀಶರು 15 ದಿನಗಳೊಳಗಾಗಿ ಭೂಮಿಯನ್ನು ಹಸ್ತಾಂತರಿಸಲು ತುರ್ತುಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಶಿವರುದ್ರಪ್ಪನವರಿಗೆ ಆದೇಶಿಸಿದರು.
  ಸ್ಥಳದ ನೀಲಿನಕ್ಷೆ ತಯಾರಿಸಿ ಹಸ್ತಾಂತರಿಸಲು ಸೂಚಿಸಿದರು. ಕನಕಪುರದ ನೂತನ ನ್ಯಾಯಾಲಯ ಸಂಕೀರ್ಣ ಕಾಮಗಾರಿಗೆ ಸರ್ಕಾರ ರು.15 ಕೋಟಿ ಬಿಡುಗಡೆ ಮಾಡಿದೆ. ಅಲ್ಲದೆ ಹಳೆಯ ನ್ಯಾಯಾಲಯದ ನವೀಕರಣಕ್ಕಾಗಿ ರು. 3ಕೋಟಿ 15ಲಕ್ಷ ಬಿಡುಗಡೆ ಮಾಡಿದೆ.
  ಕೆಲವು ತಾಂತ್ರಿಕ ದೋಷಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಅವುಗಳನ್ನು ಪರಿಹರಿಸಿ ಶೀಘ್ರವೇ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ನ್ಯಾಯಾಧೀಶ ಆನಂದಶೆಟ್ಟಿ ಹೇಳಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಹೆಚ್.ಎಲ್.ಅಶೋಕ್,ಜಗದೀಶ್, ಅಭಿಯಂತರ ಪ್ರಕಾಶ್, ಕಂದಾಯ ನಿರೀಕ್ಷಕ ದೊಡ್ಡಸ್ವಾಮಿ, ಮುತ್ತೇಗೌಡ, ಶಿವರುದ್ರಪ್ಪ ಪಾಲ್ಗೊಂಡಿದ್ದರು.

ಹದಿನೈದು ಗಾಂಜಾ ಗಿಡಗಳು ಪತ್ತೆ
ರಾಮನಗರ : ಬಾಳೆ ತೋಟವೊಂದರಲ್ಲಿ ಅಕ್ರಮವಾಗಿ ಬೆಳೆಸಿದ್ದ 15ಕ್ಕೂ ಹೆಚ್ಚು ಗಾಂಜಾ ಗಿಡಗಳೂ ಸೇರಿದಂತೆ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1 ಕೆಜಿ ಗಾಂಜಾವನ್ನು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಹೊಂಬೇಗೌಡನ ದೊಡ್‌ಡಿ ಗ್ರಾಮದ ಶಿವನಂಜಯ್ಯ ಅವರ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ನೇತೃತ್ವದ ಪೊಲೀಸರ ತಂಡ ಬುಧವಾರ ದಾಳಿ ನಡೆಸಿತು. ಈ ವೇಳೆ 15ಕ್ಕೂ ಹೆಚ್ಚು ಗಾಂಜಾ ಗಿಡಗಳು ಪತ್ತೆಯಾದವು.
ನಂತರ ಶಿವನಂಜಯ್ಯ ಅವರ ಮನೆಯನ್ನು ಶೋಧಿಸಿದಾಗ 1 ಕೆ.ಜಿ. ಗಾಂಜಾ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತೋಟದ ಮಾಲೀಕ ಶಿವನಂಜಯ್ಯ, ಪ್ರದೀಪ, ಪ್ರಮೋದ ಎಂಬುವರನ್ನು ಬಂಧಿಸಲಾಗಿದ್ದು, ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ತಾಲೂಕು ದಂಡಾಧಿಕಾರಿ ಮಂಜಪ್ಪ, ಪಿಎಸ್‌ಐ ವಸಂತ್ ಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.