ಚನ್ನಪಟ್ಟಣದಲ್ಲಿ ಚೆಕ್ ಚಮತ್ಕಾರ
-ಮತ್ತೀಕೆರೆ ಜಯರಾಮ್
ರಾಮನಗರ: ಚುನಾವಣೆಯಲ್ಲಿ ಜೆಡಿಎಸ್ ಫಾರಂ ವಿತರಿಸುವಾಗ ಅಭ್ಯರ್ಥಿಗಳಿಂದ ಒತ್ತೆಯಾಗಿಟ್ಟುಕೊಂಡ ತಲಾ 2 ಚೆಕ್ಗಳನ್ನೇ ಮುಂದಿಟ್ಟುಕೊಂಡು ಇದೀಗ ದಳಪತಿಗಳು ಬ್ಲಾಕ್ಮೇಲ್ ಮಾಡುತ್ತಿರುವ ಪ್ರಕರಣ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಗರಸಭೆಗೆ ಚುನಾವಣೆ ನಡೆದು, ಜೆಡಿಎಸ್ ಮೇಲುಗೈ ಸಾಧಿಸಿತ್ತು. ಗೆಲವು ಸಾಧಿಸಿದವರ ಪೈಕಿ ಒಬ್ಬರಾದ 31ನೇ ವಾರ್ಡ್ ಸದಸ್ಯ ಲೋಕೇಶ್ ಎಂಬುವರ ಚೆಕ್ಅನ್ನು ಬ್ಯಾಂಕ್ ಹಾಕಿದ್ದು, ವಕೀಲರ ಮೂಲಕ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ವಕೀಲರಿಂದ ನೋಟಿಸ್: ಎಲ್ಲ ಪುರಪಿತೃಗಳಿಂದ ತಲಾ 2 ಚೆಕ್ ನೀಡಿದ್ದರೆ, ಲೋಕೇಶ್ ಮಾತ್ರ ಐಸಿಐಸಿಐ ಬ್ಯಾಂಕ್ನ 3 ಚೆಕ್ ಸಲ್ಲಿಸಿದ್ದರು. ಈ ಪೈಕಿ 000739 ಸಂಖ್ಯೆಯ ಚೆಕ್ ನಗದೀಕರಿಸಲು ಮತ್ತೊಬ್ಬ ಸದಸ್ಯನ ಸಹೋದರ ಬ್ಯಾಂಕ್ಗೆ ಹಾಕಿದ್ದಾರೆ. ಅಷ್ಟರಲ್ಲಾಗಲೇ ಲೋಕೇಶ್ ಖಾತೆ ಸ್ಥಗಿತಗೊಂಡಿತ್ತು.
ನೀವು ನೀಡಿದ್ದ ಚೆಕ್ಗೆ ಸಂಬಂಧಿಸಿದ ಖಾತೆ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ನನಗೆ ನೀಡಬೇಕಿರುವ ರು.12 ಲಕ್ಷ ಬಾಬ್ತು ಹಣ ಸಂದಾಯಕ್ಕೆ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಆ ವ್ಯಕ್ತಿ ಲೋಕೇಶ್ ಅವರಿಗೆ ವಕೀಲರ ಮೂಲಕ ನೀಡಿರುವ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಕಾನೂನು ಸಮರ: ಚುನಾವಣೆಯಲ್ಲಿ ಪಕ್ಷ ನಿಷ್ಠೆ ಕಾಪಾಡಿಕೊಳ್ಳುವ ಒಂದೇ ಉದ್ದೇಶದಿಂದ ಒತ್ತೆಯಿಟ್ಟುಕೊಂಡ ಚೆಕ್ ಅನ್ನು
ಬ್ಯಾಂಕ್ಗೆ ಹಾಕಿ, ನಗದೀಕರಿಸಿಕೊಳ್ಳಲು ಹೊರಟ ದಳಪತಿಗಳ ಷಡ್ಯಂತ್ರದಿಂದ ಪುರಪಿತೃ ಲೋಕೇಶ್ ಕಂಗಾಲಾಗಿದ್ದಾರೆ. ತಮಗೆ ತಲುಪಿರುವ ನೋಟಿಸ್ಗೆ ವಕೀಲರ ಮೂಲಕವೇ ಉತ್ತರಿಸಿದ್ದಾರೆ. ಇದಲ್ಲದೆ, ಕಾನೂನು ಸಮರಕ್ಕೆ ಮುಂದಾಗಲು ನಿರ್ಧರಿಸಿದ್ದಾರೆ. ಈ ಪ್ರಕರಣದಿಂದ ಜೆಡಿಎಸ್ ಇತರೆ ಸದಸ್ಯರಲ್ಲೂ ಮುಖಂಡರ ಬಗ್ಗೆ ಅನುಮಾನ ಮೂಡಿದೆ.
ಇತರರ ಮೇಲಿಲ್ಲ ಕ್ರಮ: ಚನ್ನಪಟ್ಟಣ ಜೆಡಿಎಸ್ ಚುಕ್ಕಾಣಿ ಹಿಡಿದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಆಪರೇಷನ್ ಕಮಲ
ಕಾರ್ಯಾಚರಣೆಗೆ ಒಳಗಾಗಿ ಬಿಜೆಪಿಯಲ್ಲಿ ಅಧಿಕಾರ ಸವಿದವರು. ಸರ್ಕಾರ ಹೋದ ನಂತರ ಕೆಲ ಕಾಲ ಸುಮ್ಮನಿದ್ದವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಇದೀಗ ನಾಯಕತ್ವ ವಹಿಸಲಾಗಿದೆ.
ಅದೇ ರೀತಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ 6 ಮಂದಿ ಗೈರಾಗಿ ಕಾಂಗ್ರೆಸ್ ಪಕ್ಷಕ್ಕೆ ನೆರವಾದರು. ಸಭೆಗೆ ಹಾಜರಾಗಿ ಪಕ್ಷದ ಆದೇಶ ಪಾಲಿಸಿದ್ದವರ ಪೈಕಿ ಲೋಕೇಶ್ ಕೂಡ ಒಬ್ಬರು. ಇಷ್ಟಾಗಿಯೂ ಲೋಕೇಶ್ ಒಬ್ಬರನ್ನೇ ಟಾರ್ಗೆಟಟ್ಮಾಡಿರುವುದು ವಿವಾದಕ್ಕೆಡೆ ಮಾಡಿದೆ.
ವರಿಷ್ಠರಿಗಿಲ್ಲ ಮಾಹಿತಿ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಒಳೇಟು ನೀಡಿದ್ದರೆನ್ನುವ ಆರೋಪ ಲೋಕೇಶ್ ಮೇಲಿದೆ. ಈ ಆರೋಪ ಪಕ್ಷದ ಸಾಕಷ್ಟು ಮುಖಂಡರ ಮೇಲೂ ಉಂಟು. ಆದರೆ, ಲೋಕೇಶ್ ಮೇಲೆ ಮಾತ್ರವೇ ಬ್ರಹ್ಮಾಸ್ತ್ರ ಹೂಡಿದ್ದರ ಹಿನ್ನೆಲೆ ಏನೆನ್ನುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ ಪಕ್ಷದ ಸಾರಥ್ಯ ವಹಿಸಿ, ಗೆಲವಿಗೆ ಕಾರಣರಾಗಿದ್ದವರು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ. ಚುನಾವಣೆಯಲ್ಲಿ ಪಡೆದ ಚೆಕ್ ನಗದೀಕರಿಸಿಕೊಳ್ಳಲು ನಡೆದಿರುವ ಪ್ರಯತ್ನದ ಮಾಹಿತಿಯು ಅನಿತಾ ಕುಮಾರಸ್ವಾಮಿ ಸಹಿತ ವರಿಷ್ಠರಿಗಿಲ್ಲ. ಪಕ್ಷವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡ ಕೆಲವೇ ಮುಖಂಡರ ಚಿತಾವಣೆ ಇಲ್ಲಿ ನಡೆದಿದೆ. ಬೆರಳೆಣಿಕೆ ಮಂದಿಯನ್ನು ಹೊರತುಪಡಿಸಿ, ಉಳಿದ ಸ್ಥಳೀಯ ಮುಖಂಡರು ಮತ್ತು ಪದಾಧಿಕಾರಿಗಳಿಗೂ ಈ ಬೆಳವಣಿಗೆಗೆ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಶಿಕ್ಷೆ ಎಲ್ಲರಿಗೂ ಆಗಲಿ: ಆಪರೇಷನ್ ಕಮಲಕ್ಕೆ ಒಳಗಾದಾಗ ಅಶ್ವತ್ಥ್ ಅವರಿಗೆ ಏನು ಶಿಕ್ಷೆ ನೀಡಿದಿರಿ? ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಮುಖಭಂಗ ಮಾಡಿದವರಿಗೆ ಆದ ಶಿಕ್ಷೆ ಏನು ಪಕ್ಷಾಂತರಿ ಮತ್ತು ಚುನಾವಣೆಯಲ್ಲಿ ಗೈರಾದ ಪುರಪಿತೃಗಳ ವಿರುದ್ಧ ಕೈಗೊಂಡ ಕ್ರಮ ಏನು?
ಹೀಗೆ ಚನ್ನಪಟ್ಟಣದಲ್ಲಿ ಪಕ್ಷದ್ರೋಹಿಗಳ ವಿರುದ್ಧ ಪ್ರಶ್ನೆಗಳ ಸುರಿಮಳೆಗರೆಯಲಾಗುತ್ತಿದೆ.
ಚನ್ನಪಟ್ಟಣ ಜೆಡಿಎಸ್ ಪಾಳಯದಲ್ಲಿ ಪಕ್ಷ ನಿಷ್ಠರಿಗಿಂತ ಪಕ್ಷದ್ರೋಹಿಗಳೇ ಹೆಚ್ಚಾಗಿದ್ದಾರೆ. ಇಂತಹ ಕಡೆ ಒಬ್ಬರನ್ನು ಹುಡುಕಿಕೊಂಡು, ಪ್ರತೀಕಾರಕ್ಕೆ ಇಳಿಯುತ್ತಿರುವುದು ಟೀಕೆಗೆ ಗುರಿಯಾಗಿದೆ.
ಪೊಲೀಸ್ ದೂರು: ಬಿ ಫಾರಂ ಪಡೆಯುವಾಗ ತಮ್ಮಿಂದ ಪಡೆದ ಚೆಕ್ ಪೈಕಿ ಒಂದನ್ನು ನಗದೀಕರಿಸಿಕೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ನಗರ ಜೆಡಿಎಸ್ ಅಧ್ಯಕ್ಷ ಎಂ.ಎನ್.ಸತ್ಯನಾರಾಯಣ ವಿರುದ್ಧ ಪುರಪಿತೃ ಲೋಕೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅನಿತಾ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಸೋಲಿಸಿದ್ದು ಮತದಾರರಿಗಿಂತಲೂ ಸ್ವಪಕ್ಷೀಯ ಮುಖಂಡರೇ. ಪಕ್ಷದ್ರೋಹಿಗಳಿಗೆ ಮನ್ನಣೆ ನೀಡುತ್ತಿರುವ ವರಿಷ್ಠರು ನಿಷ್ಠರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎನ್ನುವ ಮಾತಿದೆ.
ಹೌದು... ಚೆಕ್ ಪಡೆದಿರುವುದು ನಿಜ...
ನಗರಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ನ ಎಲ್ಲ 31 ವಾರ್ಡ್ ಅಭ್ಯರ್ಥಿಗಳಿಂದಲೂ ತಲಾ 2 ಚೆಕ್ ಪಡೆದುಕೊಳ್ಳಲಾಗಿದೆ. ಅವೆಲ್ಲವೂ ಜೆಡಿಎಸ್ ಚನ್ನಪಟ್ಟಣ ನಗರಾಧ್ಯಕ್ಷ ಎಂ.ಎನ್.ಸತ್ಯನಾರಾಯಣ ಬಳಿ ಇದ್ದವು. ಲೋಕೇಶ್ ಚೆಕ್ ನಗದೀಕರಿಸಿಕೊಳ್ಳಲು ಹೊರಟಿರುವ ಕ್ರಮದಿಂದ ನಮಗೂ ಭಯವಾಗಿದೆ.
-ವಿಷಕಂಠಮೂರ್ತಿ, ಉಜ್ಮಾಇಶ್ರದ್, ಹಾಷಿಂ. ಪುರಪಿತೃಗಳು, ಚನ್ನಪಟ್ಟಣ.
ಜಾಗದ ವಿವಾದವೇ ಕಾರಣ
ಚನ್ನಪಟ್ಟಣ ಬಸ್ ನಿಲ್ದಾಣಕ್ಕೆ ಸೇರಿದ 5.50 ಗುಂಟೆ ಜಾಗದ ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಮುಂದಾಗಿದ್ದರ ಹಿನ್ನೆಲೆಯಲ್ಲಿ ನನಗೆ ಕಿರುಕುಳ ನೀಡಲೆಂದೇ ಎಂ.ಸಿ.ಅಶ್ವತ್ಥ್ ಮತ್ತು ಸಹೋದರ ಎಂ.ಸಿ.ಕರಿಯಪ್ಪ ಚಿತಾವಣೆ ನಡೆಸಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲು ಹೊರಟಿದ್ದಾರೆ ಎಂದು ಪುರಪಿತೃ ಲೋಕೇಶ್ ನೇರ ಆರೋಪ ಮಾಡಿದ್ದಾರೆ. ಬಸ್ನಿಲ್ದಾಣ ಜಾಗ ಕಬಳಿಸಲು ಚಿತಾವಣೆ ನಡೆಸಲಾಗುತ್ತಿದೆ. ಅದರ ವಿರುದ್ಧ ನಾನೂ ಸಹಿತ ನಗರಸಭೆಯ 26 ಸದಸ್ಯರು ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದ್ದೇವೆ. ಚನ್ನಪಟ್ಟಣದಲ್ಲಿ ರು.100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯಿದೆ. ಅದನ್ನು ಲಪಟಾಯಿಸಲು ಹೊರಟವರಿಗೆ ಅಡ್ಡಗಾಲಾಗುತ್ತಿದ್ದೇನೆ ಎನ್ನುವುದೇ ತನ್ನ ವಿರುದ್ಧದ ಪ್ರತೀಕಾರಕ್ಕೆ ಕಾರಣ ಎಂದು ಅವರು ದೂಷಿಸಿದ್ದಾರೆ.
ಪ್ರತಿಕ್ರಿಯೆಗೆ ನಕಾರ
ನಗರಸಭೆ ಚುನಾವಣೆ ವೇಳೆ ಅಭ್ಯರ್ಥಿಗಳಿಂದ ಚೆಕ್ ಸ್ವೀಕರಿಸಿರುವ ಕುರಿತು ಪ್ರತಿಕ್ರಿಯಿಸಲು ಚನ್ನಪಟ್ಟಣ ನಗರ ಜೆಡಿಎಸ್ ಅಧ್ಯಕ್ಷ ಎಂ.ಎನ್.ಸತ್ಯನಾರಾಯಣ ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

