ಬೆಂಗಳೂರು: ಬ್ಯಾಂಕ್ ನೌಕರನ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿರುವ ಘಟನೆ ತ್ಯಾಗರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಬನಶಂಕರಿ 2ನೇ ಹಂತದ 25ನೇ ಮುಖ್ಯರಸ್ತೆ ನಿವಾಸಿ ಸುನಿಲ್ಕುಮಾರ್(41) ಹಲ್ಲೆಗೊಳಗಾದವರು. ನೆಟ್ಟಕಲ್ಲಪ್ಪ ವೃತ್ತ ಸಮೀಪದ ರಾಘವೇಂದ್ರ ಮಠದ ಬಳಿ ಹಲ್ಲೆ ನಡೆದಿದೆ. ದೊಡ್ಡಗಣಪತಿ ದೇವಸ್ಥಾನ ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಪಾಯದಿಂದ ಪಾರಾಗಿದ್ದಾರೆ.
ಸುನಿಲ್ಕುಮಾರ್ ಅವರು ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಮಾರಕಾಸ್ತ್ರದಿಂದ ಇರಿದು ಹಲ್ಲೆ ಮಾಡಿದ್ದಾರೆ.
ಚಿಕಿತ್ಸೆ ನಂತರ ಪೊಲೀಸರು ಸುನಿಲ್ಕುಮಾರ್ ಬಳಿ ವಿಚಾರಣೆ ನಡೆಸಿದ್ದು, ಹಲ್ಲೆ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಜುಲೈ 10 ರಂದು ಸುನಿಲ್ಕುಮಾರ್ ಅವರು ರಾತ್ರಿ ಮನೆ ಬಳಿ ಹೋಗುತ್ತಿದ್ದ ವೇಳೆ ಸುಮಾರು 9 ಗಂಟೆ ವೇಳೆಗೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಇದೇ ರೀತಿ ಹಲ್ಲೆ ಮಾಡಿದ್ದರು. ಆ ಬಗ್ಗೆ ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಅವರ ಬಗ್ಗೆ ಪೊಲೀಸರಿಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಈಗ ಮತ್ತೆ ಅಂತಹ ಘಟನೆ ಮರುಕಳಿಸಿದೆ ಎಂದು ಸುನಿಲ್ಕುಮಾರ್ ಅವರ ಸಂಬಂಧಿ ವಿನೀತ್ಕುಮಾರ್ ಹೇಳಿದ್ದಾರೆ. ಕನ್ನಡ ಪ್ರಭದೊಂದಿಗೆ ಮಾತನಾಡಿದ ಡಿಸಿಪಿ ರೇವಣ್ಣ, ಪೊಲೀಸರು ಸುನಿಲ್ಕುಮಾರ್ ಅವರ ವಿಚಾರಣೆ ಮಾಡಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ. ವೈಯಕ್ತಿಕ ವಿಚಾರದ ಹಿನ್ನೆಲೆಯಲ್ಲಿ ಘಟನೆ ನಡೆದಿರಬಹುದು. ಗಾಯಾಳು ಸಂಪೂರ್ಣ ಚೇತರಿಸಿಕೊಂಡ ನಂತರ ವಿಚಾರಣೆ ಮಾಡಲಾಗುವುದು ಎಂದಿದ್ದಾರೆ.