ಅವ್ರುರಾಜಿನಾಮೆ ಕೊಟ್ರು; ಸ್ಪೀಕರ್ ಊರ್ಬಿಟ್ರು!
ಸ್ಪೀಕರ್ ಕಚೇರಿಯಲ್ಲಿ ಅರ್ಧ ದಿನ ಹೈಡ್ರಾಮಾ, ಬಿಎಸ್ವೈ ಕೆಂಡ, ರಾಜ್ಯಪಾಲರಿಗೆ ದೂರು ಸಲ್ಲಿಸಿದ ಶಾಸಕರು...

ಬೆಂಗಳೂರು: ಆಡಳಿತ ಪಕ್ಷದ ಬಿಕ್ಕಟ್ಟು ಬುಧವಾರ ಅರ್ಧ ದಿನ ರಾಜಕೀಯ ಪ್ರಹಸನಕ್ಕೆ ಕಾರಣವಾಯಿತು.
ಸಚಿವರಿಬ್ಬರ ರಾಜಿನಾಮೆ, ರಾಜಿನಾಮೆ ಪತ್ರ ಹಿಡಿದು ಸ್ಪೀಕರ್ ಕಚೇರಿಗೆ ತೆರಳಿದ 13 ಶಾಸಕರು, ಸ್ಪೀಕರ್ ವಿದೇಶ ಪ್ರವಾಸ, ರಾಜಿನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಆಕ್ರೋಶಗೊಂಡ ಶಾಸಕರಿಂದ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿ, ಸ್ಪೀಕರ್ ವಿರುದ್ಧ ದೂರು...
ಹೀಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸರಣಿ ಚಟುವಟಿಕೆಗಳು ತೀವ್ರ ಕುತೂಹಲಕ್ಕೆ ಕಾರಣವಾಯಿತು.
ಈ ರಾಜಕೀಯ ಪ್ರಹಸನ ಆರಂಭವಾಗಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ಸಿ.ಎಂ. ಉದಾಸಿ ಅವರ ಭೇಟಿ ಮೂಲಕ. ಬೆಳಗ್ಗೆ ಉದಾಸಿ ನಿವಾಸಕ್ಕೆ ತೆರಳಿದ ಯಡಿಯೂರಪ್ಪ ಅವರು ಸ್ವಲ್ಪ ಹೊತ್ತು ಮಾತುಕತೆ ನಡೆಸಿ ವಾಪಸಾದರು.
ಇದಾಗುತ್ತಿದ್ದಂತೆ ಉದಾಸಿ ಅವರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಧಿಕೃತ ನಿವಾಸ ಕಾವೇರಿಗೆ ತೆರಳಿ ಲೋಕೋಪಯೋಗಿಸಚಿವ ಸ್ಥಾನಕ್ಕೆ ತಮ್ಮ ರಾಜಿನಾಮೆ ಸಲ್ಲಿಸಿದರು. ಇದರ ಬೆನ್ನ ಹಿಂದೆಯೇ ಶೋಭಾ ಕರಂದ್ಲಾಜೆ ಅವರು ಕಾವೇರಿಯಲ್ಲಿ ಇಂಧನ ಖಾತೆ ಸಚಿವ ಸ್ಥಾನಕ್ಕೆ ತಮ್ಮ ರಾಜಿನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ನಂತರ ಉದಾಸಿ ಅವರು ತಮ್ಮ ನಿವಾಸಕ್ಕೆ ತೆರಳಿದರೆ, ಶೋಭಾ ಕರಂದ್ಲಾಜೆ ಅವರು ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಉದಾಸಿ ನಿವಾಸಕ್ಕೆ ಆಗಮಿಸಿದರು. ಅಲ್ಲಿಗೆ ರಾಜಿನಾಮೆ ನೀಡಲು ಮುಂದಾಗಿದ್ದ ಶಾಸಕರೂ ಒಬ್ಬೊಬ್ಬರಾಗಿ ಆಗಮಿಸಲಾರಂಭಿಸಿದರು.
ಅತ್ತ ಯಡಿಯೂರಪ್ಪ ಅವರ ಬೆಂಬಲಿಗರು ಉದಾಸಿ ಅವರ ನಿವಾಸದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಕುರಿತು ಚರ್ಚಿಸುತ್ತಿದ್ದರೆ, ಇತ್ತ ಇಬ್ಬರು ಸಚಿವರಿಂದ ರಾಜಿನಾಮೆ ಪತ್ರ ಪಡೆದುಕೊಂಡಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪತ್ರವನ್ನು ತಮ್ಮ ಬಳಿಯೇ ಇಟ್ಟುಕೊಂಡು ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಗುಲ್ಬರ್ಗಕ್ಕೆ ತೆರಳಿದರು.
ಸ್ಪೀಕರ್ ವಿದೇಶ ಪ್ರವಾಸ: ಈ ಮಧ್ಯೆ ಉದಾಸಿ ಅವರ ನಿವಾಸದಲ್ಲಿ ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ 13 ಶಾಸಕರು ರಾಜಿನಾಮೆ ಪತ್ರದೊಂದಿಗೆ 11.50ರ ವೇಳೆಗೆ ನೇರವಾಗಿ ವಿಧಾನಸೌಧದ ಸ್ಪೀಕರ್ ಕಚೇರಿ ಬಳಿ ಬಂದರು. ಆದರೆ, ಸ್ಪೀಕರ್ ಅವರು ಮಂಗಳವಾರ ರಾತ್ರಿ ದಿಢೀರ್ ವಿದೇಶ ಪ್ರವಾಸ ಹೊರಟಿದ್ದರು. ವಿಧಾನಸಭೆ ಕಾರ್ಯದರ್ಶಿಯವರೂ ವಿದೇಶ ಪ್ರವಾಸದಲ್ಲಿರುವುದರಿಂದ ರಾಜಿನಾಮೆ ಸ್ವೀಕರಿಸಲು ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ರಾಜಿನಾಮೆ ಪತ್ರ ಕೈಯಲ್ಲಿ ಹಿಡಿದುಕೊಂಡು ಎಲ್ಲಾ ಶಾಸಕರು ಸ್ಪೀಕರ್ ಕಚೇರಿಯಲ್ಲೇ ಕುಳಿತರು. ಈ ಸಂದರ್ಭದಲ್ಲಿ ವಿದಾನಸಭೆ ಜಂಟಿ ಕಾರ್ಯದರ್ಶಿ ಗಲಗಲಿ ಅವರು ಬಂದರಾದರೂ ರಾಜಿನಾಮೆ ಸ್ವೀಕರಿಸಲು ತಮಗೆ ಅಧಿಕಾರವಿಲ್ಲ. ನೇರವಾಗಿ ಅದನ್ನು ಸ್ಪೀಕರ್ಗೇ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಿನಾಮೆ ಸ್ವೀಕರಿಸಲು ಸಾಧ್ಯವಿಲ್ಲ ಎಂಬುದನ್ನು ಲಿಖಿತವಾಗಿ ನೀಡಿ ಎಂದು ಶಾಸಕರು ಕೇಳಿದರೂ ಜಂಟಿ ಕಾರ್ಯದರ್ಶಿಗಳು ಅದಕ್ಕೆ ಒಪ್ಪಲಿಲ್ಲ. ಯಡಿಯೂರಪ್ಪ ಅವರೂ ಸ್ಪೀಕರ್ ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಶಾಸಕರು ಜಂಟಿ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯಪಾಲರ ಭೇಟಿ, ದೂರು: ಆದರೂ ಅವರು ರಾಜಿನಾಮೆ ಪತ್ರ ಸ್ವೀಕರಿಸಲು ಒಪ್ಪದ ಕಾರಣ 13 ಶಾಸಕರೂ ತಮ್ಮ ರಾಜಿನಾಮೆ ಪತ್ರವನ್ನು ಜಂಟಿ ಕಾರ್ಯದರ್ಶಿಗಳ ಕೊಠಡಿಯಲ್ಲಿಟ್ಟು ಮತ್ತೆ ಸಚಿವ ಉದಾಸಿ ಅವರ ನಿವಾಸಕ್ಕೆ ಹೋದರು. ನಂತರ ಮಧ್ಯಾಹ್ನ 2.30ರ ವೇಳೆಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರನ್ನು ಭೇಟಿಯಾಗಿ ತಮ್ಮ ರಾಜಿನಾಮೆ ಪತ್ರದ ಪ್ರತಿಗಳನ್ನು ನೀಡಿದರಲ್ಲದರೆ, ಸ್ಪೀಕರ್ ವಿರುದ್ಧ ದೂರು ಸಲ್ಲಿಸಿದರು.
ಬುಧವಾರ ತಾವೆಲ್ಲರೂ ರಾಜಿನಾಮೆ ಸಲ್ಲಿಸುವ ಬಗ್ಗೆ ಮೊದಲೇ ತಿಳಿಸಿದ್ದರೂ ಸ್ಪೀಕರ್ ಅವರು ದಿಢೀರ್ ವಿದೇಶ ಪ್ರವಾಸ ಹೋಗಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ವಾಪಸ್ ಕರೆಸಿ ರಾಜಿನಾಮೆ ಸ್ವೀಕರಿಸುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಹೇಳಿದ ನಂತರ ಅಲ್ಲಿಂದ ಹೊರಬಂದ ಎಲ್ಲಾ ಶಾಸಕರು ಮತ್ತೆ ಉದಾಸಿ ನಿವಾಸಕ್ಕೆ ತೆರಳಿ, ಅಲ್ಲಿ ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


