ಲೋಕಾಯುಕ್ತದಲ್ಲಿ ಕುರ್ಚಿಗಾಗಿ ಕಸರತ್ತು
ಬೆಂಗಳೂರು: ಯಜಮಾನನಿಲ್ಲದ ಮನೆಯಂತಾಗಿರುವ ಲೋಕಾಯುಕ್ತ ಸಂಸ್ಥೆಯಲ್ಲಿ ಈಗ ಅಧಿಕಾರಿಗಳು 'ಸಂಗೀತ ಕುರ್ಚಿ' ಆಟ ಆರಂಭಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ಹಿರಿಯ ಅಧಿಕಾರಿಗಳ ನಡುವೆ ಅಸಮಾಧಾನ ಸೃಷ್ಟಿಯಾಗಿದ್ದು, ಡಿಐಜಿ ಜೆ. ಅರುಣ್ ಚಕ್ರವರ್ತಿ ಅವರಿಗೆ ಸರ್ಕಾರ ಐಜಿಪಿ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿದ ದಿನದಿಂದ ಕುರ್ಚಿಗಾಗಿ ಕಸರತ್ತು ಶುರುವಾಗಿದೆ.
ಡಿಸೆಂಬರ್ 31ರಂದು 12 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಪಟ್ಟಿಯಲ್ಲಿ ಲೋಕಾಯುಕ್ತದಲ್ಲಿ ಡಿಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಚಕ್ರವರ್ತಿ ಅವರಿಗೆ ಐಜಿಪಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಮಾತ್ರವಲ್ಲ ಲೋಕಾಯುಕ್ತಕ್ಕೆ ಹೊಸದಾಗಿ ಐಜಿಪಿ ಹುದ್ದೆ ಸೃಷ್ಟಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು. ಆದರೆ ಇದಾದ ಎರಡೇ ದಿನದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಲೋಕಾಯುಕ್ತ ನಿಬಂಧಕ ಬಿ.ಯೋಗಿನಾಥ್,ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕ ) ನಿಯಮ ಪ್ರಕಾರ ಡಿಐಜಿ ಹಾಗೂ ಐಜಿ ಹುದ್ದೆಗೆ ಅಧಿಕಾರಿಗಳನ್ನು ನೇಮಿಸಲು ಅಧಿಕಾರವಿದೆಯಾದರೂ ಏಕಕಾಲಕ್ಕೆ ಇಬ್ಬರನ್ನು ನೇಮಿಸಲು ಅವಕಾಶ ಇರುವುದಿಲ್ಲ. ಜತೆಗೆ ಲೋಕಾಯುಕ್ತ ಐಜಿಪಿ ಹುದ್ದೆಯನ್ನು ಹೊಸದಾಗಿ ಸೃಷ್ಟಿಸುವಂತೆ ಇದುವರೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಅಂಥ ಅವಶ್ಯಕತೆಯೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾತ್ರವಲ್ಲ, ಅರುಣ್ ಚಕ್ರವರ್ತಿ ಅವರಿಗೆ ಮುಂಬಡ್ತಿ ನೀಡಿರುವುದರಿಂದ ಲೋಕಾಯುಕ್ತದಲ್ಲಿ ಈಗ ಡಿಐಜಿ ದರ್ಜೆ ಅಧಿಕಾರಿಯ ಕೊರತೆ ಇದೆ. ಇದನ್ನು ಆದಷ್ಟು ಬೇಗ ತುಂಬಬೇಕಿದ್ದು, ಹುದ್ದೆ ನಿರೀಕ್ಷೆಯಲ್ಲಿರುವ ಡಿಐಜಿ ಸೌಮೇಂದು ಮುಖರ್ಜಿ ಅವರು ಈ ಸ್ಥಾನಕ್ಕೆ ಸೂಕ್ತ ಎಂದು ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಅಭಿಪ್ರಾಯಪಟ್ಟಿರುವುದರಿಂದ ಅವರನ್ನು ನಿಯೋಜನೆಗೊಳಿಸುವಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಒಲ್ಲೆ ಎಂದರು: ಆದರೆ ಹೊಸದಾಗಿ ಸೃಷ್ಟಿಕೊಂಡ ಹುದ್ದೆಗೆ ನಿಯೋಜನೆಗೊಂಡಿರುವ ಅರುಣ್ ಚಕ್ರವರ್ತಿ ಅವರನ್ನು ಎಲ್ಲಿಗೆ ಕಳುಹಿಸಬೇಕು ಎಂಬುದು ನಿಬಂಧಕರ ಪತ್ರದಲ್ಲಿ ಇಲ್ಲ. ಆದರೆ ವೃಂದ ನಿಯಮದ ಪ್ರಕಾರ ಇಬ್ಬರಿಗೆ ಅವಕಾಶವಿಲ್ಲ. ಡಿಐಜಿ ಹುದ್ದೆಗೆ ಮಾತ್ರ ಅಧಿಕಾರಿಯನ್ನು ನಿಯೋಜಿಸಿ ಎಂದರೆ ಅರುಣ್ ಚಕ್ರವರ್ತಿ ಅವರನ್ನು ವರ್ಗಾಯಿಸಿ ಎಂದು ಅರ್ಥೈಸಬಹುದಾಗಿದೆ.
ಆದರೆ, ಎಡಿಜಿಪಿ ಸತ್ಯನಾರಾಯಣ ರಾವ್ ಅವರ ಬಯಕೆಯಂತೆ ಲೋಕಾಯುಕ್ತಕ್ಕೆ ಬರಲು ಸೌಮೇಂದು ಮುಖರ್ಜಿ ಅವರಿಗೆ ಇಷ್ಟವಿಲ್ಲ. ಅವರ ಲಕ್ಷ್ಯ ಬೆಂಗಳೂರು ನಗರದತ್ತ. ಹೀಗಾಗಿ ನಿಬಂಧಕರ ಪತ್ರಕ್ಕೆ ಹಿನ್ನಡೆಯಾಗಿದೆ. ಆದರೆ, ಐಜಿಪಿ ಹುದ್ದೆ ಲೋಕಾಯುಕ್ತಕ್ಕೆ ಬೇಡ ಎಂಬ ವಾದದಲ್ಲಿ ಹುರುಳಿಲ್ಲ ಎಂಬ ಮಾತು ಐಪಿಎಸ್ ವಲಯದಲ್ಲಿ ಕೇಳಿ ಬಂದಿದೆ. ಈ ಹಿಂದೆ ಲೋಕಾಯುಕ್ತದಲ್ಲಿ ಡಿಐಜಿಯಾಗಿದ್ದ ಅಲ್ಬುಕರ್ಕ್ ಅವರಿಗೆ ಬಡ್ತಿ ನೀಡಿ ಐಜಿಪಿ ಮಾಡಲಾಗಿತ್ತು. ರುಣ್ಚಕ್ರವರ್ತಿ ವಿಚಾರದಲ್ಲೂ ಇದೇ ಮಾನದಂಡ ಅನುಸರಿಸಬಹುದು ಎಂಬುದು ಸರ್ಕಾರದ ವಾದ.
ಅಸಮಾಧಾನ: ಆದರೆ ಲೋಕಾಯುಕ್ತ ಮೂಲಗಳ ಪ್ರಕಾರ ಎಡಿಜಿಪಿ ಸತ್ಯನಾರಾಯಣ ರಾವ್ ಹಾಗೂ ಐಜಿಪಿ ಅರುಣ್ ಚಕ್ರವರ್ತಿ ನಡುವಿನ ಅಭಿಪ್ರಾಯ ಭೇದದ ಹಿನ್ನೆಲೆಯಲ್ಲಿ ಈ ಪತ್ರ ವ್ಯವಹಾರ ಆರಂಭವಾಗಿದೆ ಎನ್ನಲಾಗುತ್ತಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಲೋಕಾಯುಕ್ತಕ್ಕೆ ಐಜಿಪಿ ಬೇಡ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ನಿಬಂಧಕರಿಗೆ ವೃಂದ ನಿಯಮ ಪ್ರಕಾರ ಅಧಿಕಾರ ಇಲ್ಲ ಎನ್ನಲಾಗುತ್ತಿದೆ. ಕಾನೂನು ಪ್ರಕಾರ ನಿಬಂಧಕರು ಐಎಎಸ್ ಅಧಿಕಾರಿ ಅಥವಾ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿರಬೇಕು. ಹೀಗಾಗಿ ಈ ಪತ್ರ ವ್ಯವಹಾರದ ಸುತ್ತ ಲೋಕಾಯುಕ್ತದಲ್ಲಿ ಈಗ ಚರ್ಚೆ ಆರಂಭಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

