'ಭ್ರಷ್ಟಾಚಾರಕ್ಕೆ ಅಧಿಕಾರಿಗಳ ವಿಳಂಬ ನೀತಿಯೇ ಕಾರಣ'
ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕ ಸೇವೆ ನೀಡುವುದನ್ನು ವಿಳಂಬಗೊಳಿಸಿದಲ್ಲಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಿವಿಮಾತು ಹೇಳಿದರು.
ಅಸಾಮಾನ್ಯ ಸೇವೆ ನೀಡಿದ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗೌರವಿಸಿ ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಇದೇ ಪ್ರಥಮ ಬಾರಿಗೆ ಆರಂಭಿಸಿರುವ 'ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಇನ್ನೂ ಅಸಮಾನತೆ ಇರುವುದರಿಂದ ಅನೇಕ ಅಧಿಕಾರಿ ಹಾಗೂ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದರೂ ಅವರಿಗೆ ಮನ್ನಣೆ ಸಿಗುತ್ತಿಲ್ಲ. ಮತ್ತೊಂದೆಡೆ ಕೆಲಸಗಳ ವಿಳಂಬದಿಂದಾಗಿ ಸರ್ಕಾರಿ ಸೇವೆಗಳ ಬಗ್ಗೆ ಜನಸಾಮಾನ್ಯರಿಗೆ ಅಸಮಾಧಾನ ಉಂಟಾಗಿದೆ. ಸಾರ್ವಜನಿಕರಿಗೆ ಸರ್ಕಾರಿ ಸೇವೆ ಒದಗಿಸುವುದು ವಿಳಂಬವಾದಲ್ಲಿ ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಸರ್ಕಾರಿ ಕೆಲಸ ಬೇಗ ಆಗುವುದಿಲ್ಲ ಎಂಬ ಭಾವನೆ ಹಲವರಲ್ಲಿರುವಾಗ ಸಾಕಷ್ಟು ಅಧಿಕಾರಿಗಳು ಕ್ಲಪ್ತ ಸಮಯಕ್ಕೆ ಉತ್ತಮ ಸೇವೆ ನೀಡುತ್ತಿದ್ದಾರೆ. ಅವರು ಮಾಡಿದ ಅತ್ಯುತ್ತಮ ಕೆಲಸಗಳನ್ನು ಗೌರವಿಸಿದಾಗ ಇತರರಿಗೂ ಅದು ಮಾದರಿ ಹಾಗೂ ಪ್ರೇರಣೆ ಆಗುತ್ತದೆ ಎಂದರು.
ಸಮಾಜಕ್ಕೆ ಮಾದರಿ: ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಹಾಗೂ ಕನ್ನಡಪ್ರಭ ಮತ್ತು ಸುವರ್ಣ ಸುದ್ದಿವಾಹಿನಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯದ ಸೀಮಿತಾವಧಿಯಲ್ಲಿ ರಚನಾತ್ಮಕ ಕೆಲಸ ಮಾಡುವ ಜತೆಗೆ ಸಮಾಜಕ್ಕೆ ಹೇಗೆ ಮಾದರಿ ಆಗಬಹುದು ಎಂದು ತಿಳಿಸುವ ಆಶಯದಿಂದ ಸರ್ಕಾರ ಈ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸ. ಪ್ರಶಸ್ತಿ ಆಯ್ಕೆಗೆ ಹಲವು ಅರ್ಜಿಗಳು ಬಂದಿದ್ದು ಅದರಲ್ಲಿ 30 ಆಕಾಂಕ್ಷಿಗಳನ್ನು ಅಂತಿಮ ಸುತ್ತಿನಲ್ಲಿ ಪರಿಶೀಲಿಸಿ 5 ಜನರನ್ನು ಆಯ್ಕೆ ಮಾಡಲಾಗಿತ್ತು. ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಸಲಹೆ ಮೇರೆಗೆ 10 ಜನರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಪ್ರಶಸ್ತಿ ಪುರಸ್ಕೃತರು ಇತರರಿಗೆ ಮಾದರಿ ಹಾಗೂ ಪ್ರೇರಣೆ ಆಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಉಪಮುಖ್ಯಮಂತ್ರಿ ಆರ್. ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಇದ್ದರು.
ಪ್ರಶಸ್ತಿ ಪುರಸ್ಕೃತರು
ಬಿ.ಎನ್. ವರಪ್ರಸಾದ್-ಆಡಳಿತಾಧಿಕಾರಿ, ಸಿಆಸುಇ(ಸಕಾಲ); ಡಾ. ಮನಿಕಾ ಘೋಷ್-ವಿಶೇಷಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ; ಆರ್.ಎಸ್. ನಾಯಕ್-ಸಹಾಯಕ ಎಂಜಿನಿಯರ್, ಬೆಳಗಾವಿ ನಗರಪಾಲಿಕೆ; ಡಿ.ಸಿ. ಹಾಲಾಲಿಂಗಯ್ಯ-ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ; ನರಸಿಂಹ ಮಲ್ಲಾರಾವ್ ಕುಲಕರ್ಣಿ, ಸಹಾಯಕ ನಿರ್ದೇಶಕ, ಅಪರ ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ; ಬಿ.ಎಸ್. ರಾಮಚಂದ್ರ-ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ಸ್ ಇಲಾಖೆ; ಸತೀಶ್‌ಕುಮಾರ್ ಹೊಸಮನಿ-ಉಪನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ, ಕೇಂದ್ರ ವಿಭಾಗ, ಬೆಂಗಳೂರು; ಜೆ.ಎಸ್.ಪೂಜಾರಿ-ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ, ಜಿಲ್ಲಾ ಲೋಕಶಿಕ್ಷಣ ಸಮಿತಿ, ವಿಜಾಪುರ; ರಂಗಸ್ವಾಮಿ-ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಂದಗೆರೆ ಗ್ರಾ.ಪಂ. ಕೆ.ಆರ್.ಪೇಟೆ, ಮಂಡ್ಯ; ಬಿ.ಚನ್ನಾ-ಗ್ರೂಪ್ ಡಿ ನೌಕರ, ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಕಚೇರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

