ಮಕ್ಕಳಿಗೂ ವ್ಯಾಪಿಸುತ್ತಿದೆ ಮಧುಮೇಹ
ಬೆಂಗಳೂರು: ರೋಗಕ್ಕೆ ವಯಸ್ಸು, ಹಣ, ಜಾತಿ, ಧರ್ಮಗಳ ತಾರತಮ್ಯವಿಲ್ಲ. ವಯಸ್ಸಾದವರಿಗೆ ಬರುವ ರೋಗ ಎನ್ನಲಾಗುತ್ತಿದ್ದ ಮಧುಮೇಹ ನಡುವಯಸ್ಸಿನವರನ್ನು ತಬ್ಬಿ ಅದೆಷ್ಟೋ ವರ್ಷವಾಗಿದೆ. ಇದೀಗ ಮಕ್ಕಳಿಗೂ ವ್ಯಾಪಿಸುತ್ತಿದೆ.
ಮಧುಮೇಹದ ರಾಜಧಾನಿ ಎಂದೇ ಕುಖ್ಯಾತಿ ಹೊಂದಿರುವ ಬೆಂಗಳೂರಿನಲ್ಲಿ ಇದೀಗ ಈ ಮಕ್ಕಳ ಮಧುಮೇಹ ತಡೆಗಟ್ಟುವುದೇ ಒಂದು ಸವಾಲು ಎನ್ನುವಂತಾಗಿದೆ.
ಇದೀಗ ಹೆಚ್ಚುತ್ತಿರುವುದು ಟೈಪ್ 1 ಡಯಾಬಿಟಿಸ್. ಅಂದರೆ 20 ವರ್ಷದೊಳಗಿನವರಲ್ಲಿ ಕಾಣುವ ಇನ್ಸುಲಿನ್ ಆಧಾರಿತ ಡಯಾಬಿಟಿಸ್ ಕಾಯಿಲೆ. 2007ನಲ್ಲಿ ಬೆಂಗಳೂರು ಡಯಾಬಿಟಿಕ್ ಕ್ಲಬ್ ನಡೆಸಿದ ಸಮೀಕ್ಷೆ ಪ್ರಕಾರ, ಈ ಕಾಯಿಲೆ ರಾಜ್ಯದಲ್ಲಿ 12 ಸಾವಿರ ಮಕ್ಕಳಿಗೆ ಇತ್ತು. ಈಗ 12ವರ್ಷದೊಳಗಿನ 3ರಿಂದ 4ಸಾವಿರ ಮಕ್ಕಳಿಗೆ ಈ ಕಾಯಿಲೆ ಇದೆ ಎಂದು ಅಂದಾಜು ಮಾಡಲಾಗಿದೆ. ಈ ಪೈಕಿ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಂಡು ಬದುಕುತ್ತಿರುವ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಭಾರತದಲ್ಲಿ ಟೈಪ್1 ಮಧುಮೇಹ ಹೆಚ್ಚುತ್ತಲೇ ಇದೆ. ಕಾರಣಗಳು ಏನು ಎಂಬುದು ಈ ವರೆಗೆ ಸ್ಪಷ್ಟವಾಗದಿದ್ದರೂ ಜೀವನ ಶೈಲಿ ಪ್ರಮುಖ ಕಾರಣ ಎಂಬುದು ಪರಿಣಿತರ ಅಭಿಪ್ರಾಯ. ಉಷಾ ಧೀಮನ್ ಎಂಬ ಏಕೈಕ ಮಹಿಳೆ ಭಾರತದಲ್ಲಿ ಈ ಕಾಯಿಲೆಯೊಂದಿಗೆ ಹೋರಾಡುತ್ತಾ 54 ವರ್ಷ ಬದುಕಿದ್ದಾರೆ. ಈ ವರೆಗೆ ಅವರು 74 ಸಾವಿರ ಬಾರಿ ಚುಚ್ಚುಮದ್ದು ಪಡೆದಿದ್ದಾರೆ. ಆದರೆ ಇದರ ನಂತರ ಟೈಪ್1ನೊಂದಿಗೆ ಹೋರಾಡುವ ಧೈರ್ಯ ಮಾಡಿದ ಮಗು ದೇಶದಲ್ಲಿಯೇ ಸಿಕ್ಕಿಲ್ಲ.
ಇದು ಸವಾಲು ಎನಿಸುವುದು ರೋಗದ ಪತ್ತೆ ಹಾಗೂ ನಿಯಂತ್ರಣದಲ್ಲಿ. ಈ ಕುರಿತು ಅಷ್ಟಾಗಿ ಜಾಗೃತಿಯೇ ಇಲ್ಲದಿರುವುದರಿಂದ ಈ ಕುರಿತು ಗಮನ ಹರಿಸುವುದೇ ಇಲ್ಲ. ರೋಗದ ಅಂತಿಮ ಹಂತವಾಗಿ ಮಗು ಕೋಮಾಕ್ಕೆ ಹೋಗುತ್ತಿದೆ ಎನ್ನುವಾಗ ಈ ಕುರಿತು ಗಮನ ಹರಿಸಲಾಗುತ್ತದೆ. ಅಲ್ಲದೇ ರಾಜ್ಯದ ಜಿಲ್ಲಾ ಆಸ್ಪತ್ರೆಗಳಿಗೆ ಸರ್ಕಾರ ಇನ್ಸುಲಿನ್ ನೀಡುವುದು ತೀರಾ ಕಡಿಮೆ. ಬಹುತೇಕ ಜಿಲ್ಲಾ ಆಸ್ಪತ್ರೆಗಳಲ್ಲಿ ಇನ್ಸುಲಿನ್ ಪೂರೈಕೆ ಕಡಿಮೆ ಇದೆ.
ನಿಯಂತ್ರಣಕ್ಕೆ ದಾರಿಯಿಲ್ಲ: ಸರ್ಕಾರ ಈ ಕುರಿತು ಜಾಗೃತಿ ಮೂಡಿಸಬೇಕು. ಆದರೆ ಕಾರಣ ತಿಳಿಯದ ರೋಗದ ಕುರಿತು ಜಾಗೃತಿ ಮೂಡಿಸುವುದು ಹೇಗೆ ಎಂಬುದೇ ಸಮಸ್ಯೆ. ಹಳ್ಳಿಗಳಲ್ಲಿ ಇನ್ಸುಲಿನ್ ಇಂಜಕ್ಷನ್ ಅನ್ನು ಸುರಕ್ಷಿತವಾಗಿ ಇಡಲು ಫ್ರಿಡ್ಜ್ನ ಅಗತ್ಯವಿದೆ. ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆ ಇಲ್ಲ. ಇದ್ದರೂ ರೋಗಿಯ ಮನೆಯಲ್ಲಿ ಇಂಜಕ್ಷನ್ ಅನ್ನು ಸುರಕ್ಷಿತವಾಗಿ ಇಡುವ ವ್ಯವಸ್ಥೆ ಇಲ್ಲ. ಇಂತಹ ಮಕ್ಕಳ ಆಹಾರದ ಮೇಲೆ ನಿಗಾ ಇಡಬೇಕು. ಬಡವರಿಗೆ ಪೌಷ್ಟಿಕ ಆಹಾರ ಒದಗಿಸಲು ಸಾಧ್ಯವಾಗಿಲ್ಲ. ಇಂತಹ ಮಕ್ಕಳ ಹೆಸರು ನೊಂದಣಿ ಆದ ನಂತರ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ರಾಜ್ಯದಲ್ಲಿ ನುರಿತ ವೈದ್ಯರ ಕೊರತೆ ಇದೆ. ಎಲ್ಲ ರೋಗಿಗಳು ನಗರದ ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಬಳಿ ಇದಕ್ಕೆ ಉತ್ತಮ ಪರಿಹಾರವಿಲ್ಲ. ಸರ್ಕಾರ ಹೆಚ್ಚುತ್ತಿರುವ ಮಧುಮೇಹಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನೂ ಮಾಡಿಲ್ಲ ಎಂಬುದು ಬೇಸರದ ಸಂಗತಿ.
-ಅರ್ಪಿತಾ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

